ಭಕ್ತ ಶ್ರೀಮಂತನಾದರೆ ಮಠವೇ ಶ್ರೀಮಂತ

29

Get real time updates directly on you device, subscribe now.


ತಿಪಟೂರು: ಸಮಸ್ತ ರೈತರಿಗೆ, ದೇಶ ಕಾಯುವ ಸೈನಿಕರಿಗೆ ರಾಜಕಾರಣಿಗಳಿಗೆ, ಶಿಕ್ಷಕರು ವೈದ್ಯರು, ವ್ಯಾಪಾರಿಗಳು ಸಮಸ್ತ ಕುಟುಂಬಗಳಿಗೆ ದಯಾಮಯನಾದ ಪರಶಿವನು ದೇಹಕ್ಕೆ ಶಕ್ತಿ ಆರೋಗ್ಯ ಭಾಗ್ಯ ನೆಮ್ಮದಿ ದೇಶಾಭಿಮಾನದ ಹುಮ್ಮಸ್ಸು, ಮಕ್ಕಳಲ್ಲಿ ವಿದ್ಯಾಭ್ಯಾಸದ ಗಮನ, ದೇಶ ಸುಭೀಕ್ಷವಾಗಿರಲೆಂದು ಈ ಜಾತ್ರಾ ಸಮಯದಲ್ಲಿ ಸಂಕಲ್ಪ ಮಾಡಿದ್ದೇವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಆಶೀರ್ವದಿಸಿದರು.

ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ಭಕ್ತ ಶ್ರೀಮಂತನಾದರೆ ಮಠವೇ ಶ್ರೀಮಂತವಾಗಿರುತ್ತದೆ ಕುಟುಂಬಗಳಲ್ಲಿ ಸಾಮರಸ್ಯ ಇರಬೇಕು, ಹಿರಿಯರನ್ನು ಗೌರವಿಸಬೇಕು, ಉತ್ತಮ ಸಂಸ್ಕಾರ ನೀಡಿದರೆ ಆ ಮನೆ ಸ್ವರ್ಗಕ್ಕೆ ಸಮಾನ, ಭಕ್ತರ ಸಹಕಾರದಿಂದ ಶ್ರೀಮಠವು ಅಭಿವೃದ್ಧಿಯತ್ತ ಸಾಗುತ್ತಿದೆ, ಇದು ನಿಮ್ಮ ಮಠ ಭಕ್ತರ ಕಷ್ಟ ಸುಖಗಳಿಗೆ ಅಜ್ಜಯ್ಯನ ಶ್ರೀರಕ್ಷೆ ಸದಾ ಇರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ ಶ್ರೀಮಠಕ್ಕೆ ಯಾವುದೇ ಜಾತಿ ಮತಗಳಿಲ್ಲ, ಜಾತ್ಯತೀತ, ಸರ್ವ ಧರ್ಮಗಳ ಮಠವಾಗಿದ್ದು ಮುಂದಿನ ದಿನಗಳಲ್ಲಿ ವಿಶ್ವ ವಿಖ್ಯಾತಿ ಪಡೆಯಲಿದೆ ಎಂದರು.

ಮೇಲಣಗವಿ ಮಠದ ಮಲಯ ಶಾಂತ ಮುನಿ ಸ್ವಾಮೀಜಿ ಮಾತನಾಡಿ, ಅಜ್ಜಯ್ಯನ ಸೇವೆ ಮಾಡಿದವರು ಪುಣ್ಯವಂತರು, ಆರನೇ ಶತಮಾನದಲ್ಲಿ ಶಿವಯೋಗೀಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ವೀರಶೈವ ಧರ್ಮಕ್ಕೆ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥ ನೀಡಿದ್ದರು, ಅವರು ಜನಿಸಿದ ಸ್ಥಳದಲ್ಲಿ ಈಗಿನ ಶಿವಯೋಗೀಶ್ವರ ಸ್ವಾಮೀಜಿ ಜನಿಸಿ ಸೂರ್ಯನ ತಾಪವನ್ನು ತಡೆಹಿಡಿದು ಚಂದ್ರನ ರೂಪದಲ್ಲಿ ಭಕ್ತರಿಗೆ ತಂಪನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಕಿರಿಯ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇವರಿಗೆ ಮಜ್ಜನವಾದಂತೆ ಪ್ರತಿ ಮನುಷ್ಯರ ಮನಸ್ಸಿಗೆ ಜ್ಞಾನದ ಶಾಂತಿಯ ಸಹನೆಯ ಮಜ್ಜನವಾಗಬೇಕು, ಮನಸ್ಸಿನ ದೇಹದ ಕಲ್ಮಶ ತೊಲಗಿ ಸದ್ಭಾವನೆ ಮೂಡಬೇಕು ಎಂದರು.

ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮಾತನಾಡಿ, ಗುರುವಿನ ಬಲ ಪ್ರತಿ ಮಾನವನಿಗೂ ಇರಬೇಕು, ಹರ ಮುನಿದೆಡೆ ಗುರು ಕಾಯುವನು, ಗುರುವನ್ನು ನಂಬಿದ ಡಿ.ಕೆ.ಶಿವಕುಮಾರ್ ಉನ್ನತ ಹುದ್ದೆ ಅಲಂಕರಿಸಿದ್ದಾರೆ, ನ್ಯಾಯಾಲಯದ ತೀರ್ಪು ಸಹ ಪರ ಬಂದಿದೆ, ಕರಿವೃಷಭ ದೇಶಿ ಕೇಂದ್ರ ಸ್ವಾಮೀಜಿ ವಿಭೂತಿ ನಡುವೆ ಕುಂಕುಮ ಇಟ್ಟಿದ್ದಾರೆ, ವಿಭೂತಿ ಶಿವನಾದರೆ, ಕುಂಕುಮ ಪಾರ್ವತಿ, ಅವರ ದರ್ಶನ ಪಡೆದರೆ ಸಾಕ್ಷಾತ್ ಶಿವ ಪಾರ್ವತಿ ದರ್ಶನ ಪಡೆದಂತೆ ವೀರಶೈವ ಮಠಗಳು ತ್ರಿವಿಧ ದಾಸೋಹ ನೀಡಿ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ, ರಾವಣನಿಗೂ ಮತ್ತು ರಾಮನಿಗೂ ಶಿವನು ಆರಾಧ್ಯ ದೈವನಾದರೆ ರಾವಣ ಅಹಂಕಾರ ಮತ್ತು ಮಮಕಾರದಿಂದ ನಾಶವಾಗಲು ಶ್ರೀರಾಮನು ಶ್ರದ್ಧೆ ಭಕ್ತಿಯಿಂದ, ಆದರ್ಶ ವ್ಯಕ್ತಿತ್ವದಿಂದ ಪೂಜಿಸಲ್ಪಟ್ಟನು, ಶಿವಭಕ್ತರಲ್ಲಿ ತಾಳ್ಮೆ ಇರಬೇಕು, ಇಷ್ಟಲಿಂಗ ಪೂಜಿಸುವ ಎಡಗೈ ದೇಹದ ಶಕ್ತಿ ಭಾಗ ಸಾರ್ಥಕ ಜೀವನದಲ್ಲಿ ಗುರುವಿಗೆ ತಲೆಬಾಗಿ ಮಠ ಮಾನ್ಯಗಳಿಗೆ ಸೇವಕನಾಗಿ ಬದುಕಬೇಕು ಎಂದರು.

ಶ್ರೀಮಠದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾ ಯಜ್ಞ, ಸಾಮೂಹಿಕ ಉಚಿತ ವಿವಾಹ ನಡೆಯಿತು, ಶ್ರೀರಂಗಪಟ್ಟಣದ ತ್ರಿನೇತ್ರ ಮಹಂತ ಸ್ವಾಮೀಜಿ, ಹೆಗ್ಗಡೆಹಳ್ಳಿ ಶ್ರೀ, ಶಿವಯೋಗೀಶ್ವರ ಟ್ರಸ್ಟ್ ಯುವರಾಜು, ಬುರುಡೆಘಟ್ಟ ನಾಗರಾಜ ಶಾಸ್ತ್ರಿ, ಶ್ರೀಮಠದ ವ್ಯವಸ್ಥಾಪಕ ಶಂಭಯ್ಯ, ಕಾರ್ಯದರ್ಶಿ ವಿಜಯ್ ಕುಮಾರ್, ದಾಸೋಹ ಸಮಿತಿಯ ಉಮೇಶ್ ಮತ್ತು ಲೋಕೇಶ್, ನೊಣವಿನಕೆರೆ ರಾಜಕುಮಾರ್, ವಿಕಾಸ್, ರಾಜು ಶಾಸ್ತ್ರಿ, ಶ್ರೀಕಾಡ ಸಿದ್ದೇಶ್ವರ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದ, ಶ್ರೀಮಠದ ಸಿಬ್ಬಂದಿ ಮತ್ತು ಆಡಳಿತ ವರ್ಗ ನೂರಾರು ಭಕ್ತಾದಿಗಳು, ಗ್ರಾಮಸ್ಥರು ಇದ್ದರು.

Get real time updates directly on you device, subscribe now.

Comments are closed.

error: Content is protected !!