ಜಾಲತಾಣಗಳಲ್ಲಿ ರೀಲ್ಸ್ ಸ್ತ್ರೀ ಸ್ವಾತಂತ್ರ್ಯವಲ್ಲ

20

Get real time updates directly on you device, subscribe now.


ತುಮಕೂರು: ಡಿಜಿಟಲ್ ಯುಗದ, ಆಧುನಿಕ ಸೋಗಿಗೆ ಒಳಪಟ್ಟಿರುವ ಯುವ ಮಹಿಳಾ ಸಮೂಹವು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದರಲ್ಲಿ ನಿರತರಾಗಿದ್ದಾರೆ, ಇದನ್ನೇ ಸ್ತ್ರೀ ಸ್ವಾತಂತ್ರ್ಯವೆಂದು ತಪ್ಪಾಗಿ ಕಲ್ಪಿಸಿಕೊಂಡಿದ್ದಾರೆ ಎಂದು ಹಿರಿಯ ಲೇಖಕಿ ಪ್ರತಿಭಾ ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮವನ್ನು, ಯುವ ಮನಸ್ಸುಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ, ರಾಜಕೀಯವಾಗಿ ಬಳಕೆಯಾಗುತ್ತಿರುವ ಸಮೂಹವನ್ನು ಅಜ್ಞಾನಿಗಳೆಂದೇ ಕರೆಯಬಹುದು ಎಂದರು.
ಲಿಂಗ ತಾರತಮ್ಯದ ಹಲವಾರು ಅಡೆತಡೆಗಳನ್ನು ಮುರಿದು ತಮ್ಮ ಹಕ್ಕುಗಳಿಗಾಗಿ ಶ್ರಮಿಸಿ ರಾಜಕೀಯ, ಕಲೆ, ಸಾಹಿತ್ಯ, ವಿಜ್ಞಾನ, ಕಾನೂನು ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವ ಹೆಣ್ಣು ಸಂಸ್ಕಾರದ, ಸಂಸಾರದ ಬೆನ್ನೆಲುಬಾಗಿದ್ದಳು, ಕಾಲ ಬದಲಾದಂತೆ, ಆಧುನಿಕತೆಯ ಅಂಧಕಾರದಲ್ಲಿ ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದ್ದಾಳೆ ಎಂದು ಕಳವಳ ವ್ಯಕ್ತಪಡಿಸಿದರು.

ವರದಿಯ ಪ್ರಕಾರ ಭಾರತದಲ್ಲಿ ಮಹಿಳಾ ಸಾಕ್ಷರತೆಯ ಪ್ರಮಾಣ ಶೇ.70.3 ರಷ್ಟಿದೆ, ಇದು 100% ಆಗುವುದು ಯಾವಾಗ? ಮೂಲಭೂತ ಹಕ್ಕುಗಳು ಸಮಾನವಾಗಿ ಇರುವಾಗಲೂ ಸಹ ಆ ಹಕ್ಕುಗಳನ್ನು ಪಡೆಯುವುದರಲ್ಲಿ ಮಹಿಳೆ ಏಕೆ ಹಿಂದೆ ಬಿದ್ದಿದ್ದಾಳೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬೇಕು ಎಂದರು.
ಕೈ ಮುಗಿಯುವುದು ದಾಸ್ಯದ ಸಂಕೇತವಲ್ಲ, ಹಾಗೆಯೇ ಇತ್ತೀಚೆಗೆ ಚಂದ್ರಯಾನ ಯಶಸ್ವಿಗೊಳಿಸಿದ ಮಹಿಳಾ ಸಾಧಕಿಯರ ಬಳಿ ಹೋಗಿ ಮನು ಧರ್ಮವನ್ನು ಬೋಧಿಸುವುದೂ ಸರಿಯಲ್ಲ, ಮಹಿಳೆಯು ತನ್ನ ಕರ್ತವ್ಯ, ಹಕ್ಕು, ಕಾನೂನು ಅರಿಯಬೇಕು, ಇನ್ನೊಬ್ಬರಿಗೆ ತಿಳಿಸಬೇಕು ಎಂದರು.

ಮಾನವೀಯ ಹಕ್ಕುಗಳ ನೆಲೆಯಲ್ಲಿ ಸರ್ವತೋಮುಖವಾಗಿ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ವಿಷಯದ ಅಡಿಯಲ್ಲಿ ಆಚರಿಸುತ್ತಿರುವ ಮಹಿಳಾ ದಿನಾಚರಣೆಯ ಅರ್ಥ ಮಹಿಳೆಯರಿಗೆ ಯಾರೂ ಸ್ವಾತಂತ್ರ್ಯ ಕೊಡಬೇಕಾಗಿಲ್ಲ, ಆಕೆ ಎಂದಿಗೂ ಸ್ವತಂತ್ರಜೀವಿ, ಸಮಾನ ನೆಲೆಯಲ್ಲಿ ಹುಟ್ಟಿರುವ ಮಹಿಳೆಗೆ ಸಮಾನತೆ ಎಂಬುದು ನೀಡುವ ಗೌರವವಾಗಬಾರದು, ಪಡೆದುಕೊಳ್ಳುವ ಹಕ್ಕಾಗಬೇಕು ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮಹಿಳೆಯರನ್ನು ಗೌರವಿಸುವುದೆಂದರೆ ಸಮಾನತೆ, ಆರ್ಥಿಕ ಸ್ವಾತಂತ್ರ್ಯ, ವಿದ್ಯಾರ್ಹತೆ ಕಲ್ಪಿಸಿಕೊಡುವುದು, ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪ ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋರಾಡಿ ಇಂದು ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವವರು ಮಹಿಳೆಯರು, ಹೆಣ್ಣು ಮಕ್ಕಳ ಸಾಧನೆಗಳನ್ನು ಗುರುತಿಸುವಲ್ಲಿ, ಹೊರ ತರುವಲ್ಲಿ ಪುರುಷರ ಪಾತ್ರ ಮಹತ್ವದ್ದಾಗಬೇಕು ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಹೆಣ್ಣಿಗೆ ಹೆಣ್ಣು ಶತ್ರುವಾಗಬಾರದು, ಆರ್ಥಿಕ ಭದ್ರತೆ, ವಿದ್ಯಾರ್ಹತೆ ಹೆಣ್ಣಿನ ಹಕ್ಕು, ಹೆಣ್ಣನ್ನುಅಪಾಯದ ನೆಲೆಯಲ್ಲಿ ನಡೆಸಿಕೊಳ್ಳುವ, ನೋಡುವ ಸಮಾಜದಿಂದ ದೇಶದ ಪ್ರಗತಿಯಾಗುವುದಿಲ್ಲ, ಸಂಸಾರದ ಶಕ್ತಿಯಾಗಿರುವ ಹೆಣ್ಣು ಸಮಾಜದ ಬಲವೂ ಹೌದು, ಪುರುಷ ಹೆಣ್ಣಿನ ಧ್ವನಿಯಾದಾಗ ಮಾತ್ರ ನಾಯಕನಾಗುತ್ತಾನೆ ಎಂದರು.

ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎ.ಎಂ.ಮಂಜುನಾಥ, ಉಪನ್ಯಾಸಕಿ ಆಶಾರಾಣಿ ಕೆ. ಬಗ್ಗನಡು, ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಜಾನೆ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!