ಶಿವನ ಪೂಜಿಸಿ ಶಿವರಾತ್ರಿ ಹಬ್ಬಾಚರಣೆ

ಶಿವ ದೇಗುಲಗಳಲ್ಲಿ ವಿಶೇಷ ಪೂಜೆ- ಜ್ಯೋತಿರ್ಲಿಂಗಗಳ ಮೆರವಣಿಗೆ

47

Get real time updates directly on you device, subscribe now.


ತುಮಕೂರು: ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾ ಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಅಭಿಷೇಕ, ವಿವಿಧ ಧಾರ್ಮಿಕ ಪೂಜೆಗಳೊಂದಿಗೆ ಶಿವನಾಮ ಸ್ಮರಣೆ ಮೊಳಗಿತು, ಮುಂಜಾನೆಯಿಂದಲೇ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ವಿಶೇಷವಾಗಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು.

ನಗರದ ಬಿ.ಹೆಚ್.ರಸ್ತೆಯ ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ಸ್ವಾಮಿ ದೇವಾಲಯ, ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ ಮತ್ತು ಬಸವಣ್ಣ ದೇವಾಲಯ, ಅಮರ ಜ್ಯೋತಿ ನಗರದ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗ, ಟಿಜಿಎಂಸಿ ಬ್ಯಾಂಕ್ ಆವರಣದ ಲಕ್ಷ್ಮಿ ದೇವಾಲಯ, ಹೊರಪೇಟೆಯ ಕಾಶಿ ವಿಶ್ವನಾಥ ದೇವಾಲಯ, ಸಿದ್ದರಾಮೇಶ್ವರ ಬಡಾವಣೆಯ ಈಶ್ವರ ದೇವಾಲಯ, ಸರಸ್ವತಿಪುರಂ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ನಸುಕಿನಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಗರದ ಹೊರಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಮುಂಜಾನೆಯಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿತು, ಬಿ.ಹೆಚ್. ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಭಕ್ತರಿಗಾಗಿ ವಿಶೇಷವಾಗಿ ಶಿವನ ವ್ಯವಸ್ಥೆ ಮಾಡಲಾಗಿದೆ.

ಭದ್ರಮ್ಮ ವೃತ್ತದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ಕಂಡು ಬಂದಿದ್ದು, ವಿಶೇಷ ಪೂಜಾ ಕೈಂಕರ್ಯ ನೆರವೇರಿದವು, ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಅಮರಜ್ಯೋತಿ ನಗರ ಸಾಯಿಬಾಬ ದೇವಾಲಯದ ಆವರಣದಲ್ಲಿರುವ ಶಿವಲಿಂಗಕ್ಕೆ ಭಕ್ತಾದಿಗಳು ಮುಂಜಾನೆಯಿಂದಲೇ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು, ಕ್ಯಾತ್ಸಂದ್ರದ ಹರಿಹರ ಕ್ಷೇತ್ರವೆಂದೇ ಪ್ರಸಿದ್ಧವಾದ ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ನಾಲ್ಕು ಯಾಮದ ಪೂಜೆ, ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು.

ತಾಲ್ಲೂಕಿನ ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿರುವ ಶ್ರೀವಿದ್ಯಾಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು, ಬೆಳಗ್ಗೆ 6.30 ರಿಂದ 12.30 ರವರೆಗೆ ವಿಶೇಷ ಪೂಜಾದಿ ನೆರವೇರಿತು,

ಶ್ರೀರಾಮನಗರದ ಅಮಾನಿಕೆರೆ ಸಮೀಪವಿರುವ ಅಖಿಲ ಉಪ್ಪಾರ ಸಂಘದ ವಿದ್ಯಾಭಿವೃದ್ಧಿ ಕಟ್ಟದ ಮೇಲ್ಭಾಗದಲ್ಲಿರುವ ಶಿವಲಿಂಗ ಮೂರ್ತಿಗೆ ಹಾಗೂ ಕುಣಿಗಲ್ ರಸ್ತೆಯಲ್ಲಿರುವ ಮಾರುತಿ ಬನಶಂಕರಿ, ಬಸವಣ್ಣ ದೇವಾಲಯದ ಮೇಲ್ಭಾಗದಲ್ಲಿರುವ ಶಿವನ ಬೃಹತ್ ಮೂರ್ತಿಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಈ ಎರಡು ಶಿವನಮೂರ್ತಿಗಳನ್ನು ಕಣ್ತುಂಬಿಕೊಂಡರು.
ಮುಂಜಾನೆಯಿಂದಲೇ ನಗರದ ಎಲ್ಲ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಂದ ಶಿವನಾಮ ಸ್ಮರಣೆ, ಭಜನೆ ಮೊಳಗಿದವು, ರಾತ್ರಿ ದೇವಾಲಯಗಳಲ್ಲಿ ಭಜನೆ, ಹರಿಕಥೆ, ದೇವರನಾಮ ನಡೆದವು.
ಜ್ಯೋತಿರ್ಲಿಂಗಗಳ ಮೆರವಣಿಗೆ
ತುಮಕೂರಿನ ವಿವಿಧ ರಸ್ತೆಗಳಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ವತಿಯಿಂದ ಶಿವರಾತ್ರಿ ಪ್ರಯುಕ್ತ ವಾಹನಗಳ ಮೇಲೆ ಸಾಮೂಹಿಕ ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಯಿತು.

Get real time updates directly on you device, subscribe now.

Comments are closed.

error: Content is protected !!