ಮಾದರಿ ವ್ಯಕ್ತಿತ್ವ ದಿಂದ ಕೌಟುಂಬಿಕ ಸಮಸ್ಯೆ ನಿಯಂತ್ರಣ

11

Get real time updates directly on you device, subscribe now.


ತುಮಕೂರು: ಇತ್ತೀಚಿನ ದಿನಗಳಲ್ಲಿ ಕೌಂಟುಂಬಿಕ ವಿವಾದಗಳು ಹೆಚ್ಚಾಗಿ ಸಂಸಾರಗಳಲ್ಲಿ ಸುಖ, ಶಾಂತಿ ಇಲ್ಲವಾಗಿದೆ, ಕುಟುಂಬದ ಸಮಸ್ಯೆಯನ್ನು ಕುಟುಂಬ ಹಂತದಲ್ಲೇ ನಿವಾರಿಸಿ ಕೊಳ್ಳುವಂತಾಗಬೇಕು, ಆದರೆ ಈಗಿನವರ ನಕಾರಾತ್ಮಕ ಮನಸ್ಥಿತಿಗಳು ಇಂತಹ ಸಮಸ್ಯೆ ಹೆಚ್ಚಾಗಲು ಕಾರಣವಾಗಿವೆ ಎಂದು ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಹೇಳಿದರು.

ಸ್ಲಂ ಜನಾಂದೋಲನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಂದರ್ಭದಲ್ಲಿ ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಸಂವಿಧಾನ ಎಂಬ ವಿಚಾರದ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ಕುಟುಂಬದ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ಹಲವು ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ದೊರೆಯುತ್ತದೆ ಎಂದರು.

ತುಮಕೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮೂರೂವರೆ ಸಾವಿರ ಕೌಟುಂಬಿಕ ವಿವಾದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ, ಕೌಟುಂಬಿಕ ಸಮಸ್ಯೆಗಳಿಗೆ ದೊಡ್ಡ ಕಾರಣಗಳಿರುವುದಿಲ್ಲ, ಸಣ್ಣ ವಿಚಾರಗಳೂ ದೊಡ್ಡದಾಗಿ ನ್ಯಾಯಾಲಯದ ಮೆಟ್ಟಿಲು ಏರುವಂತಾಗಿದೆ, ಇದಕ್ಕೆ ಮುಖ್ಯ ಕಾರಣ, ಗಂಡ, ಅತ್ತೆ, ಸೊಸೆ ಮುಂತಾದವರು ಕೇವಲ ಪಾತ್ರವಾಗದೆ, ಜವಾಬ್ದಾರಿಯುತ ವ್ಯಕ್ತಿತ್ವವಾಗಿ ರೂಪುಗೊಳ್ಳಬೇಕು, ತಂದೆ ತಾಯಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ಮನೆಯಲ್ಲಿ ಮಕ್ಕಳು ಮೊದಲು ತಂದೆ ತಾಯಿಯನ್ನು ಅನುಕರಿಸುತ್ತಾರೆ, ಮುಂದೆ ತಾವೂ ತಮ್ಮ ತಂದೆ ತಾಯಿಯಂತಾಗಬೇಕು ಎಂದು ಮಕ್ಕಳು ಬಯಸುವಂತಹ ವ್ಯಕ್ತಿತ್ವವನ್ನು ತಂದೆ ತಾಯಿ ಬೆಳೆಸಿಕೊಳ್ಳಬೇಕಾಗುತ್ತದೆ, ಎಷ್ಟು ಜನ ತಂದೆ ತಾಯಿಗೆ ನೀವೂ ನಮ್ಮಂತೆ ಆಗಿರಿ ಎಂದು ಮಕ್ಕಳಿಗೆ ಹೇಳುವ ಧೈರ್ಯವಿದೆ ಹೇಳಿ ಎಂದು ಪ್ರಶ್ನಿಸಿದರು.

ಮಹಿಳೆಯರನ್ನು ಮತದಾನದ ಹಕ್ಕಿನಿಂದ, ಶಿಕ್ಷಣದಿಂದ ದೂರವಿಡುತ್ತಿದ್ದ ಕಾಲವಿತ್ತು, ಮಹಿಳೆಯ ಶೋಷಣೆ ಹೆಚ್ಚಾಗಿ ನಡೆಯುತ್ತಿದ್ದವು, ಹಲವರ ಹೋರಾಟಗಳ ನಂತರ ಮಹಿಳೆಯರ ರಕ್ಷಣೆಗೆ ಕಾನೂನುಗಳು ಜಾರಿಗೆ ಬಂದಿವೆ, ಸಂವಿಧಾನ ಮಹಿಳೆಯರಿಗೆ ಸಮಾನ ಹಕ್ಕು ನೀಡಿದೆ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥವಾಗಿ ದುಡಿಯುತ್ತಿದ್ದಾರೆ, ದುಡಿಯುವ ಸ್ಥಳದಲ್ಲಿ ಮಹಿಳೆ ಮೇಲೆ ಆಗುವ ಶೋಷಣೆ ತಡೆಗೆ 2013ರಲ್ಲಿ ಕಾನೂನು ಜಾರಿಗೆ ಬಂದಿದೆ, ಎಲ್ಲವನ್ನೂ ಬಳಿಸಿಕೊಂಡು ಮಹಿಳೆಯರು ದುಡಿಮೆಯೊಂದಿಗೆ ಆರ್ಥಿಕ ಸ್ವಾವಲಂಬಿಗಳಾಗುವ ಜೊತೆಗೆ ತಮ್ಮ ಕುಟುಂಬವನ್ನು ಸರಿದಾರಿಯಲ್ಲಿ ಸಾಗಿಸುವವಲ್ಲಿ ಹೆಚ್ಚಿನ ಜವಬ್ದಾರಿ ವಹಿಸಬೇಕು, ಅಂತಹ ಶಕ್ತಿಯೂ ಮಹಿಳೆಯರಿಗಿದೆ, ಆ ಮೂಲಕ ಆದರ್ಶವಾದ ಸಂಸಾರ, ಸಮಾಜ ನಿರ್ಮಾಣಕ್ಕೂ ಮಹಿಳೆಯರು ಕಾರಣರಾಗಬೇಕು ಎಂದು ನ್ಯಾಯಾಧೀಶೆ ನೂರುನ್ನೀಸ ಹೇಳಿದರು.

ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಕೊಳಗೇರಿ ಹಿತರಕ್ಷಣಾ ಸಮತಿ, ಸ್ಲಂ ಜನಾಂದೋಲನದ ಹೋರಾಟ ಮೂಲಕ ಕೊಳಗೇರಿ ನಿವಾಸಿಗಳಿಗೆ ಸಿಗಬೇಕಾದ ಅನೇಕ ಸವಲತ್ತುಗಳನ್ನು ಸರ್ಕಾರದಿಂದ ದೊರಕಿಸಿಕೊಡಲು ಸಾಧ್ಯವಾಯಿತು, ಇದರ ಫಲವಾಗಿ ದಿಬ್ಬೂರು, ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ನಿರ್ಮಾಣವಾದವು, ಇನ್ನೂ ಅನೇಕ ವಸತಿ ರಹಿತ ಕುಟುಂಬಗಳಿಗೆ ಸರ್ಕಾರ ನಿವೇಶನ ನೀಡಬೇಕು ಎಂದು ಸತತ ಹೋರಾಟ ಮಾಡುತ್ತಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗದೆ ಹೋರಾಟ ಮುಂದುವರೆದಿದೆ ಎಂದರು.
ನಗರದ ಬಳಿ ಸರ್ಕಾರ ನಿಗಧಿಪಡಿಸಿರುವ ಜಮೀನಿನಲ್ಲಿ ವಸತಿರಹಿತ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡಿದ್ದು, ಲೋಕಸಭಾ ಚುನಾವಣೆ ಒಳಗೆ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ, ನಗರದ ಅನೇಕ ಕೊಳಗೇರಿಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ, ನಗರ ಪಾಲಿಕೆಯಿಂದ ತಡೆಗೋಡೆ ನಿರ್ಮಿಸಿಕೊಡಲು ಕೇಳಲಾಗಿದೆ, ನಮ್ಮ ವಿವಿಧ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಎ.ನರಸಿಂಹಮೂರ್ತಿ ಅವರು ನ್ಯಾಯಾಧೀಶರಾದ ನೂರುನ್ನೀಸ ಅವರಿಗೆ ಈ ವೇಳೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮತಿ ಅಧ್ಯಕ್ಷೆ ಅನುಪಮಾ ನರಸಿಂಹಮೂರ್ತಿ, ಕಾರ್ಯದರ್ಶಿ ಟಿ.ಜಿ.ಅರುಣ್, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಗಳ ಕಾವೇರಿ, ಸುಧಾ, ಮಹಿಳಾ ಸಾಂತ್ವನ ಕೇಂದ್ರದ ಪಾರ್ವತಮ್ಮ ರಾಜಕುಮಾರ್, ಮಾತಂಗಿ ಮಹಿಳಾ ಸಂಘಟನೆಯ ಶಾರದಮ್ಮ, ಗುಲ್ನಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!