ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಯಭಾರಿಗಳಂತೆ ನಾವು ಕೆಲಸ ಮಾಡಬೇಕೆಂದು ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಕರೆ ನೀಡಿದರು.
ನಗರದ ಶೆಟ್ಟಿಹಳ್ಳಿ ಅಂಡರ್ಪಾಸ್ನ ತರಕಾರಿ ಮಹೇಶ್ ಬಿಲ್ಡಿಂಗ್ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ರೈತಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ, ರೈತಪರ ಯೋಜನೆಗಳನ್ನು ರೈತಮೋರ್ಚಾ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತಲುಪುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತರ ಹಿತಾಶಕ್ತಿ ಆಧರಿಸಿ ಜಾರಿಗೆ ತರಲಾಗಿದೆ, ಕೃಷಿ ಲಾಭಾದಾಯಕ ಅಲ್ಲವೆಂದು ಬೇರೆ ಬೇರೆ ವೃತ್ತಿ ಅಲವಂಬಿಸಿದ್ದ ಯುವಕರು, ಮತ್ತೆ ಕೃಷಿಯತ್ತ ಆಸಕ್ತಿ ವಹಿಸುತ್ತಿದ್ದಾರೆ, ಕೃಷಿ ಬದುಕಿನ ಕಡೆಗೆ ಆಸಕ್ತಿ ಹೊಂದಿರುವವರನ್ನು ಬೆಳೆಸುವ ಕಾರ್ಯ ರೈತ ಮೋರ್ಚಾದಿಂದ ಆಗಬೇಕಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂದು ಹೇಳಿದರು.
ದೇಶದಲ್ಲಿ ಶೇ.100 ಕ್ಕೆ ಶೇ.40 ರಷ್ಟು ರೈತ ವರ್ಗದ ಜನರಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಶೇ.11 ರಷ್ಟಿದ್ದ ಜಿಡಿಪಿಯು ಬಿಜೆಪಿ ಸರ್ಕಾರ ಅವಧಿಯಲ್ಲಿ ಶೇ. 18ಕ್ಕೆ ಏರಿಕೆ ಮಾಡಲಾಗಿದೆ, ಆರ್ಥಿಕವಾಗಿ ಚೇತರಿಕೆ ಕಾಣಲು ಹಲವಾರು ಯೋಜನೆಗಳನ್ನು ತಂದಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಡಾ.ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸ್ವಾಮಿನಾಥನ್ ವರದಿ ಸಲ್ಲಿಸಿ, ಅನುಮೋದನೆ ಪಡೆದಿದ್ದರೂ ಆದು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ, ನಂತರ ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು, ಆದಾಯವನ್ನು ದ್ವಿಗುಣಗೊಳಿಬೇಕೆನ್ನುವ ರೈತ ಪರ ನಿಲುವುಗಳನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಆದ್ದರಿಂದ ಯುವ ಮೋರ್ಚಾದ ಪದಾಧಿಕಾರಿಗಳು ರೈತರಿಗೆ ಯೋಜನೆ ಅಥವಾ ನೂತನ ಮಸೂದೆಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದು ಸೂಚಿಸಿದರು.
ಕೃಷಿ ಪ್ರಧಾನ ದೇಶದಲ್ಲಿ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ, ಪ್ರತಿಯೊಬ್ಬ ಕೃಷಿಕ ಸ್ವಾವಲಂಬಿ ಹಾಗೂ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬೇಕಿರುವುದರಿಂದ ಸರ್ಕಾರದ ನೀಡಿರುವ ಕೃಷಿಪರ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸುಮಾರು 73 ವರ್ಷಗಳ ಕಾಂಗ್ರೆಸ್ ಸರ್ಕಾರದ ಸುಧೀರ್ಘ ಅವಧಿಯಲ್ಲಿ ಕೇವಲ ಒಂದೇ ಒಂದು ಭಾರಿ ದೇಶದ ರೈತರ ಸುಮಾರು 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಬಿಟ್ಟರೆ ರೈತರ ಆದಾಯ ದ್ವಿಗುಣಕ್ಕೆ ಯಾವುದೇ ಹೊಸ ಯೋಜನೆ ಜಾರಿಗೆ ತಂದಿಲ್ಲ, ಇದರಿಂದ ರೈತರು ಕೃಷಿಕ್ಷೇತ್ರದಿಂದ ವಿಮುಖರಾಗ ತೊಡಗಿದ್ದರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು ರೈತರ ಆದಾಯ ದ್ವಿಗುಣಗೊಳ್ಳಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಇಂದು ಯುವ ಸಮೂಹ ಕೃಷಿಯತ್ತ ಮುಖಮಾಡಿದೆ ಎಂದು ಹೇಳಿದರು.
ರೈತರ ಆರ್ಥಿಕತೆಯಲ್ಲಿ ಬದಲಾವಣೆ ತರಲು ಸಾಕಷ್ಟು ಪ್ರಯತ್ನಗಳು ನಡೆದಿವೆ, ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಪ್ರಯೋಗಗಳು ಭಾಜಪದ ಕೃಷಿ ಮೋರ್ಚಾಗಳ ಮೂಲಕ ಆಗುತ್ತಿದೆ, 2014ರಲ್ಲಿ ಅಧಿಕಾರ ಪಡೆದ ಭಾಜಪದಿಂದ 2022ರ ವೇಳೆಗೆ ಪ್ರತಿ ರೈತನ ಆದಾಯ ದ್ವಿಗುಣಗೊಳಿಸುವಲ್ಲಿ ಪ್ರಯತ್ನ ಸಾಗಿದೆ, ಕೃಷಿ ಸಮ್ಮಾನ್ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಫಸಲ್ ಭಿಮಾ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆ, ಗುಣಮಟ್ಟದ ಬೀಜಗಳ ಉತ್ಪಾದನೆ, ರಸ ಗೊಬ್ಬರ, ನೀರಾವರಿ, ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆಗಳನ್ನು ರೈತರಿಗೆ ಸಕಾಲದಲ್ಲಿ ನೀಡುವ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪ್ರಧಾನಿಗಳು ಹೆಚ್ಚು ಗಮನ ಹರಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರ ಬಂದ ನಂತರ ರೈತರ ಉತ್ಪನ್ನ ಮತ್ತು ವಾಣಿಜ್ಯ ಮಸೂದೆ, ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ಈ ಎಲ್ಲಾ ಮಸೂದೆಗಳು ಕಂಪನಿ ಹಾಗೂ ರೈತರ ಒಪ್ಪಂದದ ಮೇರೆಗೆ ಕೃಷಿ ಮಾಡುವುದು ಹಾಗೂ ರೈತರ ಇಚ್ಛಾಶಕ್ತಿಗೆ ಅನುಗುಣವಾಗಿ ಕೃಷಿ ಮಸೂದೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಳೆದ ಮಾರ್ಚ್ 26 ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಿದ್ದು, ಈ ಯೋಜನೆಯ ಅಂದಾಜು ವೆಚ್ಚ 21,473 ಕೋಟಿ ರೂ. ಗಳಾಗಿದ್ದು, ರಾಜ್ಯದ ಮೊಟ್ಟಮೊದಲ ರಾಷ್ಟ್ರೀಯ ಯೋಜನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಶೇ.60 ರಷ್ಟು ಅಂದರೆ 16,125 ಕೋಟಿ ರೂ. ಉಳಿದ ಶೇ.40 ರಷ್ಟು ರಾಜ್ಯ ಸರ್ಕಾರದಿಂದ ನಿಗದಿ ಮಾಡಲಾಗಿದ್ದು, ಇದರಿಂದ 1.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ನಂತರ ಭಾಜಪ ರೈತ ಮೋರ್ಚಾದ ನೂತನ ಜಿಲ್ಲಾ ಪದಾಧಿಕಾರಿಗಳು ತಾವು ಮಾಡಬೇಕಿರುವ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಸ್.ಶಿವಶಂಕರ್, ಬಿಜೆಪಿ ಮುಖಂಡ ಲಕ್ಷ್ಮೀಶ್, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ಶ್ರೀಧರ್, ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಮೇಶ್, ಜಿಲ್ಲಾ ಕಾರ್ಯದರ್ಶಿ ಕೆ.ಸಿ.ಹರೀಶ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಸರ್ಕಾರ ರೈತಪರ ಯೋಜನೆ ಜಾರಿಗೊಳಿಸಿದೆ
Get real time updates directly on you device, subscribe now.
Prev Post
Comments are closed.