ಹೊಯ್ಸಳರ ಕಾಲದ ಶಿಲಾ ಶಾಸನ ಪತ್ತೆ

37

Get real time updates directly on you device, subscribe now.


ತುರುವೇಕೆರೆ: ಶಿಲಾ ಶಾಸನಗಳು ನಮ್ಮ ನಾಡಿನ ಐತಿಹಾಸಿಕ ಪರಂಪರೆ ಸಾರುವ ಮಹತ್ತರ ದಾಖಲೆಗಳಾಗಿದ್ದು ಇವುಗಳ ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಶಾಸನ ಅಧ್ಯಯನಕಾರ ಶಶಿಕುಮಾರ ನಾಯಕ್ ಹೇಳಿದರು.

ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನ ಕಾಳಂಜಿಹಳ್ಳಿ ಗ್ರಾಮದ ರಾಮೇಗೌಡರ ಮಗ ತಿಮ್ಮೇಗೌಡರ ಜಮೀನಿನಲ್ಲಿ ಹೊಯ್ಸಳರ ಕಾಲದ ಶಾಸನ ಪತ್ತೆಯಾಗಿದ್ದು, ಗ್ರಾಮಸ್ಥರ ಕೋರಿಕೆಯಂತೆ ಸ್ಥಳಕ್ಕೆ ಇತರರೊಂದಿಗೆ ಭೇಟಿ ನೀಡಿ ಶಾಸನದ ಅಧ್ಯನ ಮಾಡಿದಾಗ ಶಾಸನದ ಸಾರಾಂಶವೂ ಹೊಯ್ಸಳರ ಎರಡನೆ ವೀರ ಬಲ್ಲಾಳನು ರಾಜಧಾನಿ ದೋರ ಸಮುದ್ರದಿಂದ ಪೃಥ್ವಿ ರಾಜ್ಯವನ್ನು ಪರಿಪಾಲಿಸುತ್ತಿದ್ದಾಗ ಇವರ ಸಾಮಂತರಾದ ಮಾಚೆಯನಾಯಕ ರೊಜಬ್ಬೆ ನಾಯಕಿಯ ಮಕ್ಕಳು ಮಾರೆಯ ನಾಯಕ ಬೊಮ್ಮೆಯ ನಾಯಕರು, ಬಮ್ಮೆಯ ನಾಯಕರು ಮಾರವೆ ನಾಯಕಿತಿಯರ ಮಕ್ಕಳು ದೇವನಾಯಕ, ಮಾರೆಯ ನಾಯಕ, ಬೊಮ್ಮೆಯ ನಾಯಕರು ಆದರ್ಶ ಗುಣಗಳಿಂದ ನಿಗುರ್ಂದ ನಾಡಿನ ತಾವರೆಕೆರೆಯನ್ನು ಆಳ್ವಿಕೆ ಮಾಡುತ್ತಿದ್ದಾಗ ಇವರ ಅಧಿಕಾರಿ ಕೇತೆಯ ನಾಯಕ ಮಸಣಯ್ಯ ನಾಯಕರ ಆಳ್ವಿಕೆಯ ಸಮಯದಲ್ಲಿ ಕೋವಯ್ಯನ ಮಗ ಹೊನ್ನಯ್ಯನು ಕ್ರಿಸ್ತಶಕ 1172 ರಲ್ಲಿ ಹೊನ್ನಾಂಡಹಳ್ಳಿ (ಇದು ಇಂದಿನ ಕಾಳಂಜಿಹಳ್ಳಿಯೇ ಇರಬಹುದು) ಯಲ್ಲಿ ಕೆರೆಯನ್ನು ಕಟ್ಟಿಸಿ ತನ್ನ ತಂದೆ ಕೋವಯ್ಯನ ನೆನಪಿನಲ್ಲಿ ಕಾವೇಶ್ವರ ದೇವಾಲಯ ಕಟ್ಟಿಸಿ ಮಲ್ಲಿಕಂಜೀಯರ ತಮ್ಮನಾದ ಲೋಕಾಭರಣ ಪಂಡಿತರಿಗೆ ಮಾವಿನ ಕೆರೆಯ ಕೆಳಗೆ ಮೂರು ಸಲಗೆ ಗದ್ದೆ, ಒಂದು ಕೊಳಗ ಮತ್ತು ಒಂದು ಸಲಗೆ ಬೆದ್ದಲೆ ಜಮೀನು ಹಾಗೂ ದೇವರ ನಂದಾ ದೀಪಕ್ಕೆ ಪುಟ್ಟಾಚಾರಿ ಕೆರೆಯ ಬಳಿ ಹತ್ತು ಕೊಳಗ ಗದ್ದೆ ಹಾಗೂ ಒಂದು ಗಾಣವನ್ನು ದಾನವಾಗಿ ನೀಡಲಾಗಿದೆ, ಅಲ್ಲದೇ ಮತ್ತೊಂದು ಕೆರೆಯ ಬಳಿ ಹತ್ತು ಕೊಳಗ ಗದ್ದೆ, ಹತ್ತು ಕೊಳಗ ಬೆದ್ದಲು ಹಾಗೂ ಲೋಕಮಾಣಿಕ ಸೆಟ್ಟಿಯು ಹಟ್ಟಿವಣ ಎಂಬ ತೆರಿಗೆಯನ್ನು ದಾನವಾಗಿ ನೀಡಿದ್ದು ಇದು ಆ ಚಂದ್ರ ಸೂರ್ಯ ಇರುವವರೆಗೂ ಶಾಶ್ವತವಾಗಿರಬೇಕು, ಈ ದಾನವನ್ನು ರಕ್ಷಿಸಿದವರು ಗಂಗೆ ವಾರಣಾಸಿ ಶ್ರೀಪರ್ವತದಲ್ಲಿ ಸಬ್ರಾಹ್ಮಣರಿಗೆ ಸಾವಿರ ಹಸುವನ್ನು ದಾನ ಮಾಡಿದ ಪುಣ್ಯ ಲಭಿಸುತ್ತದೆ, ಇದನ್ನು ಹಾಳು ಮಾಡಿದವರು ಅದೇ ಗಂಗೆ ವಾರಣಾಸಿ ಶ್ರೀಪರ್ವತದಲ್ಲಿ ಸಾವಿರ ಹಸುಗಳನ್ನು ಕೊಂದ ಪಾಪಕ್ಕೆ ಹೋಗುವರು, ತಾನು ಕೊಟ್ಟಿದ್ದಾಗಲಿ ಅಥವಾ ಪರರು ಕೊಟ್ಟಿದ್ದ ದಾನವನ್ನು ಅಪಹರಿಸಿದವರು ಅರವತ್ತು ಸಾವಿರ ವರ್ಷಗಳ ಕಾಲ ಕ್ರಿಮಿಯಾಗಿ ಜನಿಸುವರು ಎಂಬ ಶಾಪಾಷಯವನ್ನು ನೀಡಿದ್ದು, ಈ ಶಾಸನವನ್ನು ದೇವರಾಯ ಬರೆದ ಎಂಬ ಮಾಹಿತಿ ನೀಡುತ್ತದೆ.

ಈ ಶಾಸನವನ್ನು ಶೋಧಿಸಿ ಅಧ್ಯಯನ ಮಾಡಿದವರು ಕೆ.ಧನಪಾಲ್, ಕಾಂತರಾಜ್, ಶಾಸನ ಅಧ್ಯಯನಕ್ಕೆ ಗ್ರಾಮಸ್ಥರಾದ ಕೃಷ್ಣೀಗೌಡ, ತಿಮ್ಮೆಗೌಡ, ರಾಮೇಗೌಡ, ಅಣ್ಣೆಗೌಡ, ನಾರಾಯಣ ಗೌಡ, ಯಕ್ಷಿತ್ ಸಹಕಾರ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!