ಹಿಂಸೆಯ ವೇಗ ನಿಯಂತ್ರಣಕ್ಕೆ ಅಹಿಂಸೆಯೇ ಮದ್ದು: ರಾಜಗೋಪಾಲ್

586

Get real time updates directly on you device, subscribe now.

ತುಮಕೂರು: ಜಾಗತಿಕ ಮಟ್ಟದಲ್ಲಿ ಹಿಂಸೆ ವೇಗವಾಗಿ ವ್ಯಾಪಿಸುತ್ತಿದೆ, ಅಮೆರಿಕಾ ವಿಜ್ಞಾನಿ ಫೆಡರೇಶನ್ ವರದಿ ಪ್ರಕಾರ ಜಗತ್ತನ್ನು ಕ್ಷಣ ಮಾತ್ರದಲ್ಲಿ ನಾಶಪಡಿಸುವ ಅಣ್ವಸ್ತ್ರಗಳು ವೇಗವಾಗಿ ಉತ್ಪಾದನೆಯಾಗುತ್ತಿವೆ, ಇಂತಹ ಸಂದರ್ಭದಲ್ಲಿ ಅಹಿಂಸೆಯ ವೇಗ ತೀವ್ರವಾಗಬೇಕು ಎಂದು ಏಕ್ತಾ ಪರಿಷತ್ ಸಂಸ್ಥಾಪಕ, ಹಿರಿಯ ಗಾಂಧಿವಾದಿ ಪಿ.ವಿ.ರಾಜಗೋಪಾಲ್ ತಿಳಿಸಿದರು.
ತಾಲ್ಲೂಕಿನ ದೊಡ್ಡಹೊಸೂರು ರೈತ ರವೀಶ್ ತೋಟದಲ್ಲಿ ನಿರ್ಮಾಣಗೊಂಡ ಗಾಂಧಿ ಸಹಜ ಬೇಸಾಯಾಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಹಿಂಸೆಯ ಬಗ್ಗೆ ಮಾತನಾಡಲು ಹಿಂಜರಿಯುವ ಸಂದರ್ಭದಲ್ಲಿ ಗಾಂಧಿ ಸಹಜ ಬೇಸಾಯಾಶ್ರಮ ನಡೆಸುತ್ತಿರುವ ಪ್ರಯೋಗ ಶ್ಲಾಘನೀಯ, ಅಹಿಂಸಾತ್ಮಕ ಕೃಷಿಯನ್ನು ಉದ್ದೇಶವಾಗಿಟ್ಟುಕೊಂಡಿರುವುದು ಮಾತ್ರವಲ್ಲ, ಗಾಂಧಿ ತತ್ವಗಳು, ಗ್ರಾಮ ಸ್ವರಾಜ್ಯ, ಸಹಜ ಬೇಸಾಯದಲ್ಲಿ ಯುವಕರ ಭಾಗವಹಿಸುವಿಕೆ, ಜಾಗತಿಕ ತಾಪಮಾನ ಈ ವಿಷಯಗಳನ್ನ ಕೇಂದ್ರೀಕರಿಸಿಕೊಂಡು ಕಾರ್ಯ ನಿರ್ವಹಿಸಲು ಮುಂದಾಗಿದೆ.
ಮಾತೃ ಸ್ವರೂಪವನ್ನ ಶೋಷಿಸುತ್ತಿದ್ದೇವೆ, ಗಂಗೆಯನ್ನ ಮಾಲಿನ್ಯ ಮಾಡಿದ್ದೇವೆ, ಭೂಮಿಗೆ ವಿಷವುಣಿಸುತ್ತಿದ್ದೇವೆ, ಹಾಗೆಯೇ ಸರಸ್ವತಿ, ಲಕ್ಷ್ಮೀ ಇವರನ್ನು ಮಾತೆ ಎಂದು ಕರೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
2003 ರಿಂದ 2019ರ ವರೆಗೆ ಜಾಗತಿಕ ಮಟ್ಟದಲ್ಲಿ ಯುದ್ಧಕ್ಕೋಸ್ಕರ ಖರ್ಚಾದ ಹಣ 1900 ಬಿಲಿಯನ್ ಡಾಲರ್, ಸುಮಾರು 30 ಯುರೋಪಿಯನ್ ದೇಶಗಳ ಬಜೆಟ್ ಇದಾಗಿದೆ, ಅಹಿಂಸೆ ಬಗ್ಗೆ ಯುವಜನರಲ್ಲಿ ತಪ್ಪುಕಲ್ಪನೆ ಬಿಂಬಿಸಲಾಗುತ್ತದೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಶ್ರಮಜೀವಿ ಆಶ್ರಮದ ಹಿರಿಯಗಾಂಧಿವಾದಿ, ರಂಗಕರ್ಮಿ ಪ್ರಸನ್ನ ಮಾತನಾಡಿ, ಶ್ರಮ ಜೀವನದಲ್ಲಿ ನೆಮ್ಮದಿಯಿತ್ತು, ನಾವೀಗ ಅಸಹಜ ಪ್ರಾಣಿಯಾಗಿದ್ದೇವೆ, ಈ ಆಶ್ರಮ ಕ್ರಮವಾಗಿ ಸಹಜ ಪ್ರಾಣಿಯನ್ನಾಗಿಸಬೇಕಿದೆ ಎಂದರು.
ರಾಮ, ಸೀತೆ, ಲಕ್ಷ್ಮಣರಿಗೆ ತಮ್ಮ 14 ವರ್ಷಗಳ ವನವಾಸದ ಆಶ್ರಮದ ದಿನಗಳು ಸುಖ ಶಾಂತಿ, ನೆಮ್ಮದಿ ನೀಡಿದವು,
ವೇಗ, ಆವೇಗ, ಉದ್ವೇಗ ಕಳೆದುಕೊಳ್ಳದೆ ಸಹಜ ಬೇಸಾಯ ಮಾಡಲು ಸಾಧ್ಯವಿಲ್ಲ, ಸಹಜ ಬೇಸಾಯ ಬದುಕಿನ ಅಂಗ ಎಂದರು.
ಭಾಷೆಯ ಅಳಿವಿಗೂ ಅಸಹಜ ಜೀವನ ಶೈಲಿಯೇ ಕಾರಣ, ಇವೆಲ್ಲವನ್ನು ಸಮಗ್ರವಾಗಿ ನೋಡುವುದನ್ನುಆಶ್ರಮ ಹೇಳಿಕೊಡಬೇಕು, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಗೊತ್ತಿಲ್ಲ, ಅದನ್ನು ಹೇಳಿಕೊಡುವುದು, ಮರು ರೂಪಿಸುವ ಕೆಲಸ ಆಗಬೇಕಿದೆ ಎಂದರು.
ರಾಷ್ಟ್ರೀಯ ಸ್ವಾಭಿಮಾನ್ ಪರಿಷತ್ತಿನ ರಾಷ್ಟ್ರೀಯ ಸಂಯೋಜಕ ಬಸವರಾಜ್ ಪಾಟೀಲ್ ವೀರಾಪುರ ಮಾತನಾಡಿ, ಕೃಷಿ ಅತಿಹೆಚ್ಚು ವೃತ್ತಿ ನೀಡುವ ಉದ್ಯಮ, ಬದಲಾವಣೆಯೆಂಬುದು ಇಲ್ಲಿಂದಲೇ ಆಗಬೇಕು, ಫುಕುವೋಕಾ ನಾರಾಯಣರೆಡ್ಡಿ ಅವರ ತೋಟಕ್ಕೆ ಭೇಟಿ ನೀಡಿದ್ದ ಸುಸಂದರ್ಭವನ್ನು ಪ್ರಸ್ತಾಪಿಸುತ್ತಾ, ನಾರಾಯಣರೆಡ್ಡಿಯವರು 18 ರಾಜ್ಯಗಳ ವಿಧಾನಸಭೆಯನ್ನುದ್ದೇಶಿಸಿ ಸಹಜ ಕೃಷಿಯನ್ನುದ್ದೇಶಿಸಿ ಮಾತನಾಡಿದ್ದಾರೆ, ವರ್ತೂರು ನಾರಾಯಣರೆಡ್ಡಿಯ ನಂತರ ಸಹಜ ಕೃಷಿಯನ್ನು ಮುನ್ನಡೆಸುವ ಕಾರ್ಯವನ್ನು ಸಹಜ ಕೃಷಿ ವಿಜ್ಞಾನಿ ಡಾ.ಎಚ್.ಮಂಜುನಾಥ್ ಅವರು ಆಶ್ರಮದ ಮೂಲಕ ಮಾಡುತ್ತಿದ್ದಾರೆ, ಇದು ದೇಶಾದ್ಯಂತ ವ್ಯಾಪಿಸಬೇಕಿದೆ ಎಂದರು.
ಸಂತೋಷದಿಂದ ಸಹಜ ಬೇಸಾಯ ಮಾಡಬೇಕು, ಇದು ಭಾವನೆಗಳು, ಅನುಭವಗಳ ಮೂಲಕ ಎಲ್ಲಾ ಕಡೆಯೂ ಪಸರಿಸುತ್ತೆ, ಮೊದಲೇ ಫುಕುವೋಕ ಅವರನ್ನುಓದಿದ್ದೆ, ಆದರೆ ಡಾ.ಮಂಜುನಾಥ್ ಅವರ ಸಂಪರ್ಕಕಕ್ಕೆ ಬಂದ ಮೇಲೆ ಸಹಜ ಬೇಸಾಯ ಅಳವಡಿಸಿಕೊಂಡೆ, ಆಶ್ರಮ ಎಂದರೆ ಶ್ರಮವನ್ನು ಒಳಗೊಂಡಿರುತ್ತದೆ, ಅದು ಹೆಗ್ಗೋಡು ಪ್ರಸನ್ನಅವರ ಚರಕ ಸಂಸ್ಥೆಗೆ ಭೇಟಿ ಕೊಟ್ಟಾಗ ಅರಿವಾಯಿತು, ರಾಜ್ಯ, ದೇಶಗಳನ್ನು ಮೀರಿ ಸಹಜ ಕೃಷಿ ಹರಡುವ ಭರವಸೆ ಇದೆ ಎಂದು ಮಹಿಮ ಪಟೇಲ್ ತಿಳಿಸಿದರು.
ಇದೇ ವೇಳೆ ಗುಡ್ಅರ್ಥ್ ಸಂಸ್ಥೆಯ ಮುಖ್ಯಸ್ಥ ಸ್ಟಾನ್ಲಿಜಾರ್ಜ್ ಮಾತನಾಡಿ, ಜೀವ ವೈವಿಧ್ಯತೆಯ ಜೊತೆಗೆ ರಾಜಕೀಯ, ಆರ್ಥಿಕತೆ ಕೃಷಿ ಎಲ್ಲವೂ ಸಹಜತೆ ಮತ್ತು ಆಧ್ಯಾತ್ಮಿಕತೆ ಒಳಗೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕಿ ಅಭಿದಾಬೇಗಂ, ಸಹಜ ಬೇಸಾಯ ಶಾಲೆಯ ಸಿ.ಯತಿರಾಜು, ಬಿ.ಮರುಳಯ್ಯ, ಡಾ.ನಾಗೇಂದ್ರ, ಡಾ.ಮಂಜುನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!