ಎಲೆಕ್ಟ್ರಿಕ್ ಬೈಕ್ ಅಗ್ನಿಗೆ ಆಹುತಿ

36

Get real time updates directly on you device, subscribe now.


ಕುಣಿಗಲ್: ಮಂಗಳವಾರ ಸಂಜೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಎಲೆಕ್ಟ್ರಿಕ್ ಬೈಕ್ ಅಗ್ನಿಗೆ ಆಹುತಿಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ತಾಲೂಕು ಆಡಳಿತ ಸೌಧದ ಸಿಬ್ಬಂದಿ ಮಲ್ಲೇಶ್ ಮಂಗಳವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ತಮಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಚಾಲನೆ ಮಾಡಲು ಮುಂದಾದರು, ಬೈಕ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು, ಆತಂಕಗೊಂಡ ಮಲ್ಲೇಶ್ ಎಲೆಕ್ಟ್ರಿಕ್ ಬೈಕ್ ಬಿಟ್ಟು ಬೆಂಕಿ ನಂದಿಸಲು ಮುಂದಾದರು, ಕಚೇರಿಯ ಇತರೆ ಸಿಬ್ಬಂದಿ ಮಣ್ಣು, ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು, ಎಲೆಕ್ಟ್ರಿಕ್ ಬೈಕ್ ನ ಕಪ್ಪು ಹೊಗೆ ಮುಗಿಲೆತ್ತರಕ್ಕೆ ಕಾಣಿಸಿಕೊಂಡ ಕಾರಣ ತಾಲ್ಲೂಕು ಕಚೇರಿಗೆ ಬೆಂಕಿ ಬಿದ್ದಿದೆ ಎಂಬ ವದಂತಿ ಹಬ್ಬಿ ಕೆಲ ನಾಗರಿಕರು ತಾಲೂಕು ಆಡಳಿತ ಸೌಧದ ಮುಂದೆ ಜಮಾವಣೆಗೊಂಡರು, ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಇದ್ದ ಕುಣಿಗಲ್ ಪೊಲೀಸ್ ಠಾಣಾ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿದ್ದ ಅಗ್ನಿ ನಂದಕ ಉಪಕರಣ ತೆಗೆದುಕೊಂಡು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.

ಕಳೆದ ವಾರವಷ್ಟೆ ತಾಲೂಕು ಆಡಳಿತ ಸೌಧ ಉದ್ಘಾಟನೆಯಾಗಿದ್ದು, ಹಲವಾರು ಆಧುನಿಕ ಸೇವೆಯುಳ್ಳ ತಾಲೂಕು ಆಡಳಿತ ಸೌಧದಲ್ಲಿ ಅಗ್ನಿನಂದಕ ಉಪಕರಣ ವ್ಯವಸ್ಥೆ ಮಾಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಯಿತು, ಅಗ್ನಿ ನಂದಿಸುವಷ್ಟರಲ್ಲಿ ಇಡೀ ಬೈಕ್ ಬೆಂಕಿಗೆ ಆಹುತಿಯಾಗಿ ತಾಲೂಕು ಆಡಳಿತ ಸೌಧದ ಮುಂಭಾಗದ ಕಟ್ಟಡ ಬೆಂಕಿಯ ಕೆನ್ನಾಲಿಗೆ ಸಿಕ್ಕು ಕರಕಲಾಯಿತು, ಇನ್ನಾದರೂ ತಾಲೂಕು ಆಡಳಿತ ಸಿಬ್ಬಂದಿ ಎಚ್ಚೆತ್ತು ಅಗ್ನಿ ಅವಘಡ ನಿಯಂತ್ರಿಸುವ ನಿಟ್ಟಿನಲ್ಲಿ ಅಗ್ನಿನಂದಕ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!