ತುಮಕೂರು: ನಗರ ಸಮೀಪದ ದೇವರಾಯನ ದುರ್ಗ ಅರಣ್ಯ ಪ್ರದೇಶದ ಪ್ರಾಣಿ, ಪಕ್ಷಿಗಳಿಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ತಂಡ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ, ಅರಣ್ಯದಲ್ಲಿ 20 ಕಡೆ ತೊಟ್ಟಿಗಳನ್ನು ಇಟ್ಟು ನಿತ್ಯ ನೀರು ತುಂಬಿಸಿ ಬೇಸಿಗೆಯಲ್ಲಿ ವನ್ಯ ಜೀವಿಗಳ ದಾಹ ತಣಿಸುವ ಕಾರ್ಯ ಆರಂಭಿಸಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರು ಬುಧವಾರ ಅಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯುವ ಮೋರ್ಚಾ ಸ್ಥಾಪಿಸಿರುವ ನೀರಿನ ಸೇವೆಗೆ ಚಾಲನೆ ನೀಡಿದರು, ಈ ವೇಳೆ ಮಾತನಾಡಿದ ಅವರು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಕೊಡುವುದು ಮಾನವೀಯ ಕಾರ್ಯ, ಬೇಸಿಗೆ ಬಿಸಿಲಿಗೆ ದೇವರಾಯನ ದುರ್ಗ ಅರಣ್ಯ ಪ್ರದೇಶದ ಕೆರೆ ಕಟ್ಟೆಗಳು ಬತ್ತಿ ಹೋಗಿವೆ, ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಪರಿಸ್ಥಿತಿ ಎದುರಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಯುವ ಮೋರ್ಚಾ ಗೆಳೆಯರು ಕಾಡಿನ ನಡುವೆ ತೊಟ್ಟಿಗಳನ್ನು ಇಟ್ಟು ನಿಯಮಿತವಾಗಿ ನೀರು ತುಂಬಿಸಿ ನೆರವಾಗುವ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಹಿಂದೆ ನಮ್ಮ ಹಿರಿಯರು ದಾರಿಹೋಕರ ನೀರಿನ ದಾಹ ತಣಿಸಲು ಅರವಂಟಿಕೆ ವ್ಯವಸ್ಥೆ ಮಾಡುತ್ತಿದ್ದರು, ಅದೇ ಮಾದರಿಯಲ್ಲಿ ಯುವ ಮೋರ್ಚಾ ಗೆಳೆಯರು ಪ್ರಾಣಿ, ಪಕ್ಷಿಗಳಿಗೆ ಬೇಸಿಗೆ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ, ನಮ್ಮ ಪರಿಸರದ ಭಾಗವಾಗಿರುವ ಪ್ರಾಣಿ, ಪಕ್ಷಿಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ, ಪ್ರತಿಯೊಬ್ಬರು ಇಂತಹ ಕಾರ್ಯದಲ್ಲಿ ತೊಡಗಿಕೊಂಡು ಮಾನವೀಯತೆ ಮೆರೆಯಬೇಕು ಎಂದು ರವಿಶಂಕರ್ ಹೆಬ್ಬಾಕ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಹೆಚ್.ನವಚೇತನ್ ಮಾತನಾಡಿ, ಸಿದ್ಧಗಂಗಾ ಮಠ ಸರ್ಕಲ್ನಿಂದ ದುರ್ಗದಹಳ್ಳಿ ಸರ್ಕಲ್ ವರೆಗೆ 20 ಸಿಮೆಂಟ್ ತೊಟ್ಟಿಗಳನ್ನು ಇಟ್ಟಿದ್ದೇವೆ, ನೀರು ಖಾಲಿಯಾದಂತೆ ತುಂಬಿಸುತ್ತೇವೆ, ಮನುಷ್ಯರಾದರೆ ಬೇಕಾದ್ದನ್ನು ಕೇಳಿ ಪಡೆಯುತ್ತಾರೆ, ಯಾರನ್ನೂ ಕೇಳಲಾಗದ ಪ್ರಾಣಿಗಳು ಬೇಸಿಗೆಯಲ್ಲಿ ನೀರು, ಆಹಾರ ಸಿಗದೆ ನರಳುತ್ತವೆ, ಮಳೆಗಾಲ ಆರಂಭವಾಗಿ ಕೆರೆಕಟ್ಟೆಗಳು ತುಂಬುವ ವರೆಗೂ ತೊಟ್ಟಿಗಳಿಗೆ ನೀರು ತುಂಬಿಸುವುದಾಗಿ ಹೇಳಿದರು.
ಬೇಸಿಗೆಯಲ್ಲಿ ಎಲ್ಲಾ ಕಡೆ ಕುಡಿಯುವ ನೀರಿನ ಅಭಾವ ಉಂಟಾಗಿದೆ, ಪ್ರಾಣಿ, ಪಕ್ಷಗಳೂ ನೀರಿಲ್ಲದೆ ಬಸವಳಿದಿವೆ, ಸಂಘ ಸಂಸ್ಥೆಗಳು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು, ಸಾರ್ವಜನಿಕರು ತಮ್ಮ ಮನೆಗಳ ಮೇಲೆ ಆಹಾರ ಧಾನ್ಯ, ಕುಡಿಯುವ ನೀರು ಇಟ್ಟರೆ ಪ್ರಾಣಿ, ಪಕ್ಷಗಳಿಗೆ ಅನುಕೂಲವಾಗುತ್ತದೆ, ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ವಿನಂತಿಸಿಕೊಂಡರು.
ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನುಷ್, ಧನುಷ್ ಗಂಗಟ್ಕಾರ್, ಮುಖಂಡರಾದ ಸಂದೀಪ್ ಗೌಡ, ಪ್ರತಾಪ್, ನಾಗೇಂದ್ರ ಚೆನ್ನಬಸಪ್ಪ, ಬಾಳಾರಾಧ್ಯ, ಗಂಗೇಶ್ ಹದ್ದಿನಕಲ್ಲು ಮೊದಲಾದವರು ಭಾಗವಹಿಸಿದ್ದರು.
Comments are closed.