ಗುಬ್ಬಿ: ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದ್ದು ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ವಿವಾದಿತ ಹೇಳಿಕೆಗಳನ್ನು ನೀಡುವುದು ಸಂಸದ ಅನಂತ್ ಕುಮಾರ್ ಹೆಗಡೆಯವರ ಚಾಳಿಯಾಗಿದೆ, ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.
ತಾಲ್ಲೂಕಿನ ಕಡಬ ಹೋಬಳಿಯ ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಅನುದಾನದಲ್ಲಿ 20 ಲಕ್ಷ ರೂ. ಗಳ ನೂತನ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಗುದ್ದಲಿ ಪೂಜೆ ಹಾಗೂ ಕೋಣೆ ಮಾದೇನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಮತ್ತು ನೈರ್ಮಲ್ಯ ಇಲಾಖೆಯ 69.39 ಲಕ್ಷ ರೂ. ಅನುದಾನದಲ್ಲಿ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹಿಂದುತ್ವ, ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಜನರಲ್ಲಿ ಸಾಮರಸ್ಯ ಕದಡಿ ಕೋಮು ಸಂಘರ್ಷ ಸೃಷ್ಟಿಸುವುದು ಇವರ ಕೆಲಸವಾಗಿದೆ, ಸಂವಿಧಾನ ತಿದ್ದುಪಡಿ ಮಾಡಿದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಕಿಡಿಕಾರಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗೋಮಾಳವನ್ನು ಸಾರ್ವಜನಿರಿಗೆ, ನಿವೇಶನ ಇಲ್ಲದವರಿಗೆ, ಉದ್ಯಾನ ವನಕ್ಕೆ ಮೀಸಲಿಡಲಾಗುತ್ತದೆ, ಈಗಾಗಲೇ ನೂರು ಗ್ರಾಮಗಳ ಗೋಮಾಳವನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸಲಾಗಿದೆ,
ಈ ಹಿಂದೆ 38 ಶಾಲಾ ಕಟ್ಟಡಗಳು, 90 ಅಂಗನವಾಡಿ ಕಟ್ಟಡ ನೀಡಲಾಗಿತ್ತು, ಮಾರ್ಚ್ ನಂತರ ಎಲ್ಲಿ ಶಾಲಾ ಕಟ್ಟಡಗಳ ಕೊರತೆ ಇದೆ ನೋಡಿ ಶಾಲಾ ಕಟ್ಟಡ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಹನುಮಂತ ರಾಜು, ಉಪಾಧ್ಯಕ್ಷೆ ಕವಿತ ಮಂಜುನಾಥ್, ಪಿಡಿಒ ಮಂಜುಳಾ ಪಾಟೀಲ್, ಸದಸ್ಯರಾದ ಕೆ.ಎಸ್.ರಮೇಶ್, ಮೊದಿನಾಲಿ, ಪಾಂಡಣ್ಣ, ರತ್ನಮ್ಮ, ನರಸಿಂಹೇಗೌಡ, ಜಯಲಕ್ಷ್ಮಮ್ಮ, ನಾಗರಾಜು, ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
Comments are closed.