ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ಯಾವುದೇ ಕಾರಣಕ್ಕೂ ಮರುಕಳಿಸಬಾರದು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಿಕೆ, ನಿರಂತರ ಪೊಲೀಸ್ ಗಸ್ತು ಮತ್ತು ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ವ್ಯಾಪಕ ಪ್ರಚಾರ ಮುಂತಾದ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ಇದುವರೆಗೂ ಕೈಗೊಳ್ಳಲಾಗಿರುವ ಪೊಲೀಸ್ ಗಸ್ತು, ಸಿಸಿ ಕ್ಯಾಮೆರಾ ಅಳವಡಿಸುವಿಕೆ ಕುರಿತಂತೆ ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ ಅವರು ಜಿಲ್ಲೆಯ ದೇವರಾಯನ ದುರ್ಗ, ಬೆಟ್ಟ- ಗುಡ್ಡ ಸೇರಿದಂತೆ ಇತರೆ ನಿರ್ಜನ ಪ್ರದೇಶಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕು, ಪೊಲೀಸ್ ಭಯವಿದ್ದಲ್ಲಿ ಅಪರಾಧ ಪ್ರಕರಣ ಯಾವುದೇ ಕಾರಣಕ್ಕೂ ಜರುಗುವುದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮಹಿಳೆಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯರ ಮಕ್ಕಳಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಇಲಾಖೆಯ ಸೌಲಭ್ಯಗಳನ್ನು ಸಂತ್ರಸ್ತರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ವ್ಯಾಪಕವಾಗಿ ಹೆಚ್ಚುತ್ತಿದ್ದು, ಈ ಕುರಿತಂತೆ ಪೋಷಕರು ಹಾಗೂ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ, ಮೊಬೈಲ್, ಇನ್ಸ್ಟಾಗ್ರಾಮ್, ರೀಲ್ಸ್ಗಳ ಮೂಲಕ ಪ್ರಸಾರವಾಗುವ ಅಶ್ಲೀಲ ದೃಶ್ಯಾವಳಿಗಳೂ ಸಹ ಅಪರಾಧ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿವೆ ಎಂದು ತಿಳಿಸಿದರು.
ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಸಖಿ ಒನ್ ಸ್ಟಾಪ್ ಸೆಂಟರ್ ನ್ನು ಸಂಪರ್ಕಿಸಿದಲ್ಲಿ ಅವರಿಗೆ ಎಲ್ಲಾ ರೀತಿಯಿಂದಲೂ ನ್ಯಾಯೋಚಿತವಾಗಿ ಪರಿಹಾರ ದೊರಕಲಿದೆ ಎಂದು ತಿಳಿಸಿದರು.
ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದ ಬಾಲಕನೊಬ್ಬನಿಗೆ ನೀಡಲಾದ ಅನಸ್ತೇಷಿಯಾ ಪ್ರಭಾವದಿಂದ ಬಾಲಕ ದೇಹದ ಸ್ವಾಧೀನ ಕಳೆದುಕೊಂಡಿದ್ದು, ಆತನ ತಾಯಿ ಕಳೆದ ಎರಡೂವರೆ ವರ್ಷದಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ, ಬಾಲಕನ ತಾಯಿಗೆ 15 ಸಾವಿರ ಚೆಕ್ಕನ್ನು ನೀಡುವ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗಿದ್ದು, ಈ ಕುರಿತಂತೆಯೂ ಸಹ ವಕೀಲರ ಮೂಲಕ ಹೋರಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಾಂತ್ವನ ಕೇಂದ್ರದ ಸಮಾಲೋಚಕರೊಂದಿಗೆ ಮಾತನಾಡಿ, ಅವರ ಕುಂದುಕೊರತೆ ಆಲಿಸಿ ಸಮಾಲೋಚಕರ ವೇತನ ಹೆಚ್ಚಿಸಲು ಅವರೊಂದಿಗೆ ನಿಂತು ಹೋರಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Comments are closed.