ಮಧುಗಿರಿ: ರಾಜ್ಯದ ಶೇ.90 ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಲಾಗಿದೆ ಎಂದು ಸಹಕಾರ ಸಚಿವಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ರ್ತೀ ಶಕ್ತಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಇಂದು ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದ್ದು, ತಾಂತ್ರಿಕ ಕಾರಣಗಳಿಂದ ಶೇ.10 ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿ ಎಲ್ಲರಿಗೂ ಗ್ಯಾರಂಟಿ ಯೋಜನೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಅನ್ನಭಾಗ್ಯ ಯೋಜನೆಯಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ, ಇದೊಂದು ಪುಣ್ಯದ ಕೆಲಸ, ಈ ಯೋಜನೆಯಿಂದ ಬಹಳಷ್ಟು ಕುಟುಂಬಗಳು ಹಸಿವಿನಿಂದ ಮುಕ್ತವಾಗಿವೆ, ಮಹಿಳೆಯರು ದೇಶದ ಪ್ರಗತಿಗೆ ಶ್ರಮಿಸುತ್ತಿದ್ದಾರೆ, ಹೆಣ್ಣು ಮಕ್ಕಳು ಕುಟುಂಬದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ, ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳ ಖಾತೆಗೆ ಪ್ರತೀ ತಿಂಗಳೂ 2 ಸಾವಿರ ಜಮೆ ಮಾಡಲಾಗುತ್ತಿದ್ದು, ಜನವರಿ ಮಾಹೆಯ ಅಂತ್ಯಕ್ಕೆ ತಾಲೂಕಿನಲ್ಲಿ 65 ಸಾವಿರ ಮಹಿಳೆಯರಿಗೆ 68.62 ಕೋಟಿ ಹಣ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ, ಹೆಣ್ಣು ಮಕ್ಕಳು ಪ್ರಗತಿಗೆ ಪೂರಕ, ಹಾಗಾಗಿ ಮಹಿಳೆಯರ ಖಾತೆಗೆ ಹಣ ಹಾಕಲಾಗುತ್ತಿದೆ, ಮುಂದೆಯೂ ಯಾವುದೇ ತೊಂದರೆಯಾಗದಂತೆ ನಿಮ್ಮೆಲ್ಲರ ಹಿತ ಕಾಯುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮಹಿಳೆಯರ ಹಕ್ಕುಗಳ ರಕ್ಷಣೆ ನೂರಾರು ವರ್ಷಗಳಿಂದಲೂ ಇದೆ, ಮಹಿಳೆಯರು ನೂರಾರು ವರ್ಷಗಳಿಂದ ಹೋರಾಟ ಮಾಡಿಕೊಂಡೆ ಬಂದಿದ್ದಾರೆ, ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿಯವರನ್ನು 18 ವರ್ಷಗಳ ಕಾಲ ದೇಶದ ಪ್ರಧಾನಿಯನ್ನಾಗಿ ಮಾಡಿ ಮಹಿಳೆ ಭಾರತದಲ್ಲಿ ಸದೃಡರಾಗಿದ್ದಾರೆ ಎಂದು ಇಡೀ ವಿಶ್ವಕ್ಕೆ ಸಂದೇಶ ನೀಡಿದೆ, ರಾಜೀವ್ ಗಾಂಧೀಯವರು ಮಹಿಳೆಯರಿಗೆ ರಾಜಕೀಯ ಹಕ್ಕುಗಳನ್ನು ನೀಡಿದ್ದಾರೆ, ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರ ಅವಧಿಯಲ್ಲಿ ಕಾಂಗ್ರೆಸ್ ವತಿಯಿಂದ ಸ್ತ್ರೀ ಶಕ್ತಿ ಯೋಜನೆ ಪ್ರಾರಂಭಿಸಿ 7 ಲಕ್ಷ ಮಹಿಳೆಯರನ್ನು ಸ್ವಾವಂಬಿಗಳನ್ನಾಗಿ ಮಾಡಲಾಯಿತು, ಆಗ ವಿರೋಧ ಪಕ್ಷದವರು ಮನೆಯಲ್ಲಿದ್ದವರನ್ನು ಬೀದಿಗೆ ತಂದರು ಎಂದು ನಮ್ಮ ವಿರುದ್ಧ ಟೀಕೆ ಮಾಡಿದರು, ಆದರೆ ನಮ್ಮ ಉದ್ದೇಶ ಮಹಿಳಾ ಸಬಲೀಕರಣ, ಇಂದು ಲಕ್ಷಾಂತರ ಸ್ತ್ರೀ ಶಕ್ತಿ ಸಂಘಗಳು ಆರಂಭವಾಗಿದ್ದು, ಸ್ತ್ರೀ ಶಕ್ತಿ ಸಂಘಗಳಿಗೆ ಅನೇಕ ಬದಲಾವಣೆ ತರುವ ಶಕ್ತಿ ಇದೆ ಎಂದರು.
ರಾಜ್ಯದಲ್ಲೇ ಮೊದಲ ಬಾರಿ ಮಧುಗಿರಿ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಯ ಪಾಸ್ ಮುದ್ರಿಸಿ ಎಲ್ಲಾ ಮನೆಗಳ ಫಲಾನುಭವಿಗಳ ಬಾಗಿಲಿಗೆ ಅಂಟಿಸುವ ಕೆಲಸ ಮಧುಗಿರಿಯಲ್ಲಿ ಮಾಡಲಾಗಿದೆ, ಇದರಿಂದ ಯಾವ ಮನೆಗೆ ಯೋಜನೆ ತಲುಪಿಲ್ಲ ಎಂಬುದನ್ನು ಗುರುತಿಸಿ ಅಂತಹ ಮನೆಗೆ ಯೋಜನೆ ತಲುಪಿಸಲು ಈ ಕಾರ್ಡ್ ಸಹಕಾರಿಯಾಗಲಿದೆ, ಇದೊಂದು ಮಾದರಿ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪರಂ, ರಾಜಣ್ಣನವರ ಐಡಿಯಾ ನಾನು ಕಾಪಿ ಮಾಡಿ ನನ್ನ ಕ್ಷೇತ್ರದಲ್ಲೂ ಇದೇ ಕೆಲಸ ಮಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.
ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ, ಇಂತಹ ಟೀಕೆಗಳಿಗೆ ನಾವು ಕೇರ್ ಮಾಡುವುದಿಲ್ಲ, ಮಹಿಳೆಯರ ಸಬಲೀಕರಣವೇ ನಮ್ಮ ಉದ್ದೇಶ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ನೀಡುತ್ತೇವೆ, ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯ ನಂತರ ನಿಲ್ಲಿಸಿ ಬಿಡುತ್ತಾರೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ವದಂತಿಗಳಿಗೆ ಕಿವಿಗೊಡಬೇಡಿ, 5 ವರ್ಷವೂ ಗ್ಯಾರಂಟಿ ಯೋಜನೆ ಮುಂದುವರಿಯಲಿದೆ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಮಾತನಾಡಿ, ಮಹಿಳೆಯರಿಗೆ ರಜೆ ಎಂಬುದೇ ಇಲ್ಲ, ಮಹಿಳೆಯರು 365 ದಿನದ 24 ಗಂಟೆಯೂ ದುಡಿಮೆ ಮಾಡುತ್ತಾರೆ, ಯಾವುದೇ ಸಮಾಜ ಅಳೆಯಬೇಕೆಂದರೆ ಹೆಣ್ಣು ಮಕ್ಕಳ ಸ್ಥಿತಿಗತಿ ಅಳೆಯಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು, ಮಹಿಳೆಯರ ಮೇಲೆ ಹೂಡಿಕೆ ಮಾಡಿದರೆ ದೇಶ ಬೆಳೆಯುತ್ತೆ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳಿರುತ್ತಾರೆ, ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ, ಸ್ತ್ರೀ ಶಕ್ತಿಯಿಂದಾಗಿ ಮಹಿಳೆಯರಿಗೆ ಶಕ್ತಿ ಬಂದಿದ್ದು, ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲೂ ಯಶಸ್ಸು ಗಳಿಸಿದ್ದಾರೆ, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಹೆಚ್ವಿನ ಒತ್ತು ನೀಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ, ನಾನು ಲೋಕಸಭಾ ಸದಸ್ಯನಾಗಿದ್ದಾಗ ಅಂಗನವಾಡಿ ನೌಕರರ ಗೌರವಧನ ಹೆಚ್ಚಿಸಬೇಕು ಎಂದು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ ಎಂದು ಸ್ಮರಿಸಿ ಅದರು ಮುಂದಿನ ದಿನಗಳಲ್ಲಿ ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾವಗಡ ಶಾಸಕ ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಪುತ್ರಿ ರಶ್ಮಿ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆ.ಜೆರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಆದಿನಾರಾಯಣ ರೆಡ್ಡಿ, ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮುಖಂಡರಾದ ಸುವರ್ಣಮ್ಮ, ಇಂದಿರಾದೇನಾ ನಾಯ್ಕ, ಮಂಜುಳಾ ಆದಿ ನಾರಾಯಣ ರೆಡ್ಡಿ ಇತರರು ಇದ್ದರು.
ಮಹಿಳೆಯರ ಕಷ್ಟ ಕಾಂಗ್ರೆಸ್ ನವರಿಗೆ ಮಾತ್ರ ಗೊತ್ತು, ಹಾಗಾಗಿ ನಾವು ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಿ 2 ಸಾವಿರ ನೀಡಿದ್ದೇವೆ, ಕಳೆದ 8 ತಿಂಗಳಲ್ಲಿ 36 ಸಾವಿರ ಕೋಟಿ ನೀಡಲಾಗಿದೆ, ಮುಂದಿನ ವರ್ಷ 58 ಸಾವಿರ ಕೋಟಿ ರೂ.ಗಳನ್ನು ಸಿಎಂ
ಸಿದ್ದರಾಮಣ್ಣ ಗೃಹ ಲಕ್ಷ್ಮೀ ಯೋಜನೆಗೆ ಮೀಸಲಿರಿಸಿದ್ದಾರೆ, ಮಹಿಳೆಯದ ಸಬಲೀಕರಣಕ್ಕೆ ಯಾವುದೇ ಪಕ್ಷ ಇಂತಹ ಯೋಜನೆ ನೀಡಿಲ್ಲ, ದೇಶದಲ್ಲೇ ಇಂತಹ ಯೋಜನೆ ಎಲ್ಲೂ ಜಾರಿಯಾಗಿಲ್ಲ.
ಡಾ.ಜಿ.ಪರಮೇಶ್ವರ್, ಗೃಹ ಸಚಿವ
Comments are closed.