ತುಮಕೂರು: ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ ತುಮಕೂರು ವತಿಯಿಂದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆ ಮತ್ತು ವಿಶ್ವ ಜಲಸಂಗ್ರಹ ದಿನದ ಅಂಗವಾಗಿ ಮಳೆ ನೀರು ಸಂಗ್ರಹ ಮತ್ತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾರ್ಚ್ 17 ರಂದು ಬೆಳಗ್ಗೆ 10 ಗಂಟೆಗೆ ಅಮಾನಿಕೆರೆ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಜಯಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂವತೈದು ವರ್ಷಗಳಿಂದ ಸರಕಾರ ಹಾಗೂ ಪ್ಲಂಬರ್ ಗಳು ಮಳೆ ನೀರು ಸಂಗ್ರಹ ಕುರಿತಂತೆ ಜನರಿಗೆ ಮಾಹಿತಿ ನೀಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಸರಕಾರ ಮತ್ತು ಜನರು ಮಳೆಕೊಯ್ಲು ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಮಹಾ ನಗರಗಳಲ್ಲಿ ನೀರಿನ ಕೊರತೆಯೇ ಉಂಟಾಗುತ್ತಿರಲಿಲ್ಲ, ಹಾಗಾಗಿ ಜನರಿಗೆ ಮಳೆ ನೀರಿನ ಸಂಗ್ರಹ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್ ಮಾಡಿದೆ ಎಂದರು.
ನೀರು ಒಂದು ಅಮೂಲ್ಯವಾದ ಪ್ರಕೃತಿ ದತ್ತ ವಸ್ತು, ಇದನ್ನು ಮಿತವ್ಯಯದಿಂದ ಬಳಸಿದರೆ ಮಾತ್ರ ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಜೀವಜಲ ನೀಡಲು ಸಾಧ್ಯ, ಅತಿಯಾದ ಕೊಳವೆ ಬಾವಿ ನೀರು ಬಳಕೆಯಿಂದ ಜನ, ಜಾನುವಾರು ಹಲವಾರು ರೋಗ, ರುಜಿನ ಬರುತ್ತಿದ್ದು, ವಿಷಮುಕ್ತ, ಶುದ್ಧ ಜೀವ ಜಲವೆಂದರೆ ಅದು ಮಳೆ ನೀರು ಮಾತ್ರ, ಹಾಗಾಗಿ ಮಳೆನೀರು ಕೊಯ್ಲು ಯೋಜನೆಯನ್ನು ಸರಕಾರ ಕಡ್ಡಾಯಗೊಳಿಸ ಬೇಕೆಂಬುದು ನಮ್ಮ ಅಸೋಸಿಯೇಷನ್ ನ ಒತ್ತಾಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಗಂಗಸಂದ್ರ ರಾಜು ಮಾತನಾಡಿ, ತುಮಕೂರು ಜಿಲ್ಲಾ ಪ್ಲಂಬರ್ ಅಸೋಸಿಯೇಷನ್, ವಾಹಿನಿ ಪೈಪ್ ಸಹಕಾರದಲ್ಲಿ ಮಾರ್ಚ್ 17 ರಂದು ಅಮಾನಿಕೆರೆ ಗಾಜಿನಮನೆಯಲ್ಲಿ ಹಮ್ಮಿಕೊಂಡಿರುವ ಮಳೆನೀರು ಸಂಗ್ರಹ ಮತ್ತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ವಾಹಿನಿ ಇರಿಗೇಷನ್ ನ ನಿರ್ದೇಶಕ ಆನಂದ್.ಆರ್. ಮತ್ತು ಹೇಮರಾಜ್ ಸೆಂಚ ವಹಿಸುವರು, ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದ ಜಿ.ಎಸ್.ಬಸವರಾಜು, ಅತಿಥಿಗಳಾಗಿ ಸ್ಥಳೀಯ ಶಾಸಕರಾದ ಜೋತಿಗಣೇಶ್, ಬಿ.ಸುರೇಶಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜೋವತಿ, ಮಹಾ ನಗರ ಪಾಲಿಕೆ ಆಯುಕ್ತರಾದ ಅಶ್ವಿಜ.ಬಿ.ವಿ, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗಿರೀಶ್, ಮಳೆ ನೀರು ತಜ್ಞರಾದ ಶಿವಕುಮಾರ್, ವಕೀಲರು, ಸಂಘದ ಸಲಹೆಗಾರ ಡಿ.ಶಿವಣ್ಣ, ಕಾರ್ಮಿಕ ನಿರೀಕ್ಷಕ ವೆಂಕಟೇಶ ಬಾಬು, ನಗರ ಠಾಣೆ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ತುಮಕೂರು ಜಿಲ್ಲಾ ಫ್ಲಂಬರ್ ಅಸೊಸಿಯೇಷನ್ ಉಸ್ತುವಾರಿ ಮಂಜುನಾಥ್ ಮಾತನಾಡಿ, 30*40 ನಿವೇಶನದಲ್ಲಿ ನಿರ್ಮಿಸಿರುವ 10 ಚದುರ ಮೀಟರ್ ಮನೆಗೆ 15- 20 ಸಾವಿರ ರೂ. ಗಳಲ್ಲಿ ಮಳೆನೀರು ಕೊಯ್ಲ ಕೆಲಸ ಮಾಡಬಹುದು, ನಾಲ್ಕು ಜನರಿರುವ ಮನೆಗೆ ಒಂದು ದಿನದ ಮಳೆ ನೀರನ್ನು ಒಂದು ತಿಂಗಳು ಬಳಕೆ ಮಾಡಬಹುದು, ಇದರಿಂದ ಶುದ್ಧ, ಯಾವುದೇ ಹಾನಿಕಾರಕ ಖನಿಜಾಂಶಗಳಿಲ್ಲ, ನೀರು ಬಳಸುವುದರ ಜೊತೆಗೆ, ವಿದ್ಯುತ್ ಉಳಿತಾಯದ ಜೊತೆಗೆ ಅಂತರ್ಜಲ ಎತ್ತುವುದು ಸಹ ತಪ್ಪಲಿದೆ, ಹಾಗಾಗಿ ಮಹಾ ನಗರಪಾಲಿಕೆ ಮಳೆ ನೀರು ಕೊಯ್ಲು ಯೋಜನೆಯನ್ನು ತುಮಕೂರು ಜಿಲ್ಲೆಯಲ್ಲಿ ಕಡ್ಡಾಯಗೊಳಿಸ ಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಫ್ಲಂಬರ್ ಅಸೋಸಿಯೇಷನ್ ನ ಉಪಾಧ್ಯಕ್ಷ ಕುಮಾರನಾಯ್ಕ್, ಕಟ್ಟಡ ನಿರ್ಮಾಣ ಸಂಘದ ಅಶ್ವಥನಾರಾಯಣ, ಪದಾಧಿಕಾರಿಗಳಾದ ಕೆ.ಮರಿಹನುಮಯ್ಯ, ಹನುಮಂತರಾಯಪ್ಪ, ಬಸವರಾಜು, ಬಿ.ಎನ್.ಕುಮಾರ್, ತಮ್ಮಯ್ಯ, ಶಿವಕುಮಾರ್ ಮತ್ತಿತರರು ಹಾಜರಿದ್ದರು.
Comments are closed.