ತುಮಕೂರು ಲೋಕಸಭಾ ಕ್ಷೇತ್ರ ನಾನು ಬಯಸಿರಲಿಲ್ಲ

ಹೈಕಮಾಂಡ್ ನನಗೆ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಿದೆ: ಸೋಮಣ್ಣ

57

Get real time updates directly on you device, subscribe now.


ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ನಾನು ಬಯಸಿರಲಿಲ್ಲ, ವಿಧಿ ಲಿಖಿತ, ಹಾಗಾಗಿ ಹೈಕಮಾಂಡ್ ನನಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಿದೆ ಎಂದು ಬಿಜೆಪಿ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ದೊಡ್ಡ ಪಕ್ಷದಲ್ಲಿ ಭಿನ್ನಮತ ಸಹಜ, ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ, ನಮ್ಮದೇನಿದ್ದರೂ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು, ಆ ನಿಟ್ಟಿನಲ್ಲಿ ತುಮಕೂರಿನ ಕೊಡುಗೆ ಇರಬೇಕು ಎಂಬುದಾಗಿದೆ, ಇದನ್ನು ಬಿಟ್ಟು ಬೇರೇನಿಲ್ಲ ಎಂದರು.

ತುಮಕೂರು ಜಿಲ್ಲೆ ಅತಿವೇಗವಾಗಿ ಬೆಳೆಯತ್ತಿರುವ ಜಿಲ್ಲೆ, ಇಲ್ಲಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ದೊರೆಯಬೇಕು ಎಂಬುದು ನಮ್ಮ ದೂರದೃಷ್ಟಿ, ಬೆಂಗಳೂರಿನಿಂದ ತುಮಕೂರಿನವರೆಗೆ ಪ್ಲೇಓವರ್ ಹಾಗೆಯೇ ಮೆಟ್ರೋ ರೈಲು ಬರಬೇಕೆಂಬ ಕನಸಿನ ಜೊತೆಗೆ, ತುಮಕೂರನ್ನು ಮತ್ತೊಂದು ವಾರಣಾಸಿ ಮಾಡಬೇಕೆಂಬ ಕನಸಿದೆ, ಅವಕಾಶ ಸಿಕ್ಕರೆ ಈ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದರು.
ತುಮಕೂರಿಗೂ ನನಗೂ ಸುಮಾರು 50 ವರ್ಷಗಳ ಅವಿನಾಭಾವ ಸಂಬಂಧ ಇದೆ, ಈ ಭಾಗದ ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ, ಸಿದ್ದಗಂಗಾ ಶ್ರೀಗಳು ಮತ್ತು ಬಾಲ ಗಂಗಾಧರನಾಥ ಶ್ರೀಗಳ ಆಶೀರ್ವಾದ ನನ್ನ ಮೇಲಿದೆ, ಮತದಾರರು ನನ್ನ ಪರವಾಗಿ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ, ಮಾಜಿ ಸಚಿವ ಬಿ.ಸಿ.ನಾಗೇಶ ಮನೆಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ ತಿಪಟೂರಿನ ಕರೆಗೋಡಿ ರಂಗಾಪುರ ಮಠಕ್ಕೂ ಭೇಟಿ ನೀಡಿ ಮಾತುಕತೆ ನಡೆಸಲಿದ್ದೇನೆ ಎಂದು ವಿ.ಸೋಮಣ್ಣ ನುಡಿದರು.

ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ನಿನ್ನೆ ದೂರವಾಣಿ ಕರೆ ಮಾಡಿದ್ದೆ, ಆದರೆ ಅವರು ಈಗ ಬರುವುದು ಬೇಡ ಎಂದು ಸ್ವಲ್ಪ ಬೇಸರದಿಂದಲೇ ಮಾತನಾಡಿದರು, ಇನ್ನು 3- 4 ದಿನ ಕಳೆದ ಬಳಿಕ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ, ಎಲ್ಲವೂ ಸರಿ ಹೋಗಲಿದೆ, ಪಕ್ಷದ ನಾಯಕರು ಎಲ್ಲವನ್ನೂ ಸರಿ ಮಾಡಲಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು, ಮುಖಂಡರು ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ, ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಸಂಕಲ್ಪ ನಮ್ಮೆಲ್ಲರದ್ದಾಗಿದೆ ಎಂದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಲೋಕಸಭೆಯಲ್ಲಿ ಎರಡು ಸೀಟು ಇದ್ದಾಗಲೂ ತುಮಕೂರಿನಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಗೆದಿದ್ದಾರೆ, ಮಲ್ಲಿಕಾರ್ಜುನಯ್ಯ, ಜಿ.ಎಸ್.ಬಸವರಾಜು ಅವರು ನಿರಂತರವಾಗಿ ಪಕ್ಷದಿಂದ ಗೆದಿದ್ದಾರೆ, ಹಾಗಾಗಿ ಈ ಬಾರಿಯೂ ಗೆಲುವು ನಮ್ಮದೆ, ಜೆ.ಸಿ.ಮಾಧುಸ್ವಾಮಿ ಅವರಿಗೆ ಪಕ್ಷ ಎಲ್ಲವನ್ನು ನೀಡಿದೆ, ಶಾಸಕರನ್ನಾಗಿ ಮಾಡಿ, ಸಚಿವರನ್ನಾಗಿಯೂ ಮಾಡಿದೆ, ಅವರು ಪಕ್ಷಕ್ಕೆ ಕೃತಜ್ಞರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಸುರೇಶ್ ಗೌಡ, ಜ್ಯೋತಿ ಗಣೇಶ್, ರವಿಶಂಕರ್ ಹೆಬ್ಬಾಕ, ಎಂ.ಡಿ.ಲಕ್ಷ್ಮಿ ನಾರಾಯಣ್, ಶಿವಪ್ರಸಾದ್, ಮಧುಗಿರಿ ಮಾಜಿ ಶಾಸಕ ವೀರಭದ್ರಯ್ಯ,ಗುಬ್ಬಿ ಹೊನ್ನಗಿರಿಗೌಡ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಬಾವಿಕಟ್ಟೆ ನಾಗಣ್ಣ, ರಾಜಪ್ಪ, ಡಾ.ಪರಮೇಶ್, ರುದ್ರೇಶ ಮತ್ತಿತರರು ಹಾಜರಿದ್ದರು.

ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ: ಸ್ವಾಮೀಜಿ
ತುಮಕೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ.
18 ವರ್ಷ ತುಂಬಿದ ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ, ನಮ್ಮ ಸಂವಿಧಾನ ಅರ್ಥ ಮಾಡಿಕೊಂಡು ನಾವು ಈ ದೇಶದ ಪ್ರಜೆಗಳಾಗಿ ಪ್ರಜಾ ಪ್ರಭುತ್ವದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಈ ಮೂಲಕ ಜನರ ಪ್ರತಿನಿಧಿಯಾಗಿ ಕಷ್ಟ ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಶ್ರೀಗಳು ಸಲಹೆ ಮಾಡಿದ್ದಾರೆ.
ನಮ್ಮ ದೇಶದ ದುರಂತ ಎಂದರೆ ಶೇ.40 ರಿಂದ 70 ರಷ್ಟು ಮಾತ್ರ ಮತದಾನವಾಗುತ್ತಿದೆ ಅಷ್ಟೆ, ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಶೇ.100 ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು, ಆಗ ಮಾತ್ರ ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣವಾಗಲಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!