ಚಿಕ್ಕನಾಯಕನ ಹಳ್ಳಿ: ವಿ.ಸೋಮಣ್ಣ ಪರ ನಾನು ಯಾವುದೇ ಕಾರಣಕ್ಕೂ ಪ್ರಚಾರ ಮಾಡುವುದಿಲ್ಲ, ಮನೆಯಲ್ಲಿ ಕೂತವನಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡುತ್ತೇನೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೈಕೊಟ್ಟರು, ಬಿಜೆಪಿ ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಂಸದ ಜಿ.ಎಸ್.ಬಸವರಾಜು ಅವರ ರಿಯಲ್ ಎಸ್ಟೇಟ್ ಕೆಲಸಗಳಿಗೆ ನಾನು ತಡೆ ಆಗುತ್ತೇನೆ ಎಂಬ ಕಾರಣಕ್ಕೆ ಅವರು ನನ್ನ ಮೇಲೆ ಮುನಿಸಿಕೊಂಡಿದ್ದಾರೆ, ನನಗೆ ಅವರಿಗೆ ಯಾವುದೇ ವೈಯಕ್ತಿಕ ಮುನಿಸು ಇಲ್ಲ, ಕಾಂಗ್ರೆಸ್ ಗೆಲ್ಲಿಸುವ ಉದ್ದೇಶದಿಂದಲೇ ಇವರು ವಿ.ಸೋಮಣ್ಣನಿಗೆ ಟಿಕೆಟ್ ಕೊಡುವಂತೆ ಮಾಡಿದ್ದಾರೆ, ನಾನು ಸ್ಪರ್ಧಿಸಿದರೆ ನನ್ನನು ಸೋಲಿಸಲು ಸಾಧ್ಯವಿಲ್ಲ ಎಂಬ ಉದ್ದೇಶ ಜಿ.ಎಸ್.ಬಸವರಾಜು ಅವರದ್ದು, ಇವರಿಗೆ ಪಕ್ಷದ ಗೆಲುವಿಗಿಂತ ಸಚಿವ ರಾಜಣ್ಣನ ಸ್ನೇಹ ಮುಖ್ಯವಾಗಿದೆ, ನಾನು ಎಂದೂ ಸಹ ಲೋಕಸಭೆ ಟಿಕೆಟ್ ಕೋಡಿ ಎಂದು ಕೇಳಿಲ್ಲ, ಬಿ.ಎಸ್.ಯಡಿಯೂರಪ್ಪ ಅವರು ಮನೆಗೆ ಕರೆಸಿಕೊಂಡು ನಿನಗೆ ಬಿ ಫಾರಂ ಕೊಡುತ್ತೇನೆ, ಚುನಾವಣೆ ತಯಾರಿ ಮಾಡಿಕೊ ಎಂಬ ಭರವಸೆ ನೀಡಿದ್ದರು, ಆದರೆ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ, ನನಗೆ ಇದು ನೋವಾಗಿದೆ ಎಂದರು.
ನೋವಿದೆ ಇವತ್ತು ಬರಬೇಡ ಅಂದೇ ಅಷ್ಟೇ: ನನಗೆ ಮನಸ್ಸು ಸರಿಯಿಲ್ಲ, ಕೋಪದಲ್ಲಿ ಮಾತನಾಡುವುದು ಬೇಡ, ಸ್ವಲ್ಪ ದಿನ ಕಳೆಯಲಿ, ನಂತರ ಮಾತನಾಡೋಣ ಎಂದು ವಿ.ಸೋಮಣ್ಣನಿಗೆ ಹೇಳಿದ್ದು ನಿಜ, ಇದರಲ್ಲಿ ಮನೆಗೆ ಬರಬೇಡ ಎಂದು ಹೇಳಿಲ್ಲ, ನನ್ನ ಮನೆ ಎಲ್ಲರಿಗೂ ತೆರೆದಿರುತ್ತದೆ ಎಂದರು.
ಸಭೆ ಮಾಡಲಾಗುತ್ತದೆ: ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಬಿಡುವ ಯೋಚನೆ ಇಲ್ಲ, ಪಕ್ಷ ನನಗೆ ಯಾವುದೇ ನೋವು ನೀಡಿಲ್ಲ, ಕಾಂಗ್ರೆಸ್ ಪಕ್ಷ ಸೇರುವ ಉದ್ದೇಶ ನನಗೆ ಇಲ್ಲ, ಚುನಾವಣೆ ಕಾವು ಹೆಚ್ಚಾದ ಮೇಲೆ ನಮ್ಮ ಕಾರ್ಯಕರ್ತರ ಸಭೆ ಕರೆಯಲಾಗುತ್ತದೆ, ನಂತರ ಎಲ್ಲರ ಅಭಿಪ್ರಾಯದ ಮೇಲೆ ಒಂದು ತೀರ್ಮಾನ ಮಾಡಲಾಗುತ್ತದೆ ಎಂದರು.
ವಿ.ಸೋಮಣ್ಣನಿಗೆ ಬೆಂಬಲವಿಲ್ಲ: ನಾನು ಸ್ಪಷ್ಟವಾಗಿ ಹೇಳುತ್ತೇನೆ, ವಿ.ಸೋಮಣ್ಣನಿಗೆ ಈ ಚುನಾವಣೆಯಲ್ಲಿ ಬೆಂಬಲ ನೀಡುವುದಿಲ್ಲ, ಹೊರಗಿನವರು ಬಂದು ನಮ್ಮ ಜಿಲ್ಲೆಯಲ್ಲಿ ಆಡಳಿತ ಮಾಡಲು ಯಾವುದೇ ಅವಕಾಶ ಮಾಡಲು ನಾವು ಸಿದ್ಧವಿಲ್ಲ ಎಂದರು.
Comments are closed.