ಕ್ಷೇತ್ರದ ಜನ ನನ್ನ ಕೈ ಹಿಡಿಯಲಿದ್ದಾರೆ: ಎಸ್ಪಿಎಂ

45

Get real time updates directly on you device, subscribe now.


ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ವ್ಯಕ್ತಪಡಿಸಿದರು.
ನಾನು ಈ ಹಿಂದಿನ ಅವಧಿಯಲ್ಲಿ ಸಂಸದನಾಗಿದ್ದಾಗ 5 ವರ್ಷಗಳ ಕಾಲ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೆ, ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ, ಹಾಗಾಗಿ ಕ್ಷೇತ್ರದ ಜನತೆ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಖಂಡಿತ ಕ್ಷೇತ್ರದ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದರು.

ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾತನಾಡಿ, 100ಕ್ಕೂ 101 ಭಾಗದಷ್ಟು ನನ್ನ ಮೇಲೆ ಜನತೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ, ಹಾಗೆಯೇ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಎಲ್ಲರೂ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಹಾಗಾಗಿ ಈ ಬಾರಿ ಎಲ್ಲರೂ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.

ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ, ಈಗ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ, ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಠಗಳು, ದೇವಾಲಯಗಳಿಗೂ ತೆರಳಿ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇ ಗೌಡರನ್ನು ಗೆಲ್ಲಿಸಿಕೊಳ್ಳಲು ಜಿಲ್ಲೆಯ ಎಲ್ಲಾ ಮುಖಂಡರು, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ ನೇತೃತ್ವದಲ್ಲಿ ನಾವೆಲ್ಲರೂ ಶ್ರಮ ವಹಿಸಿ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ರಫಿಕ್ ಅಹಮದ್, ಗೌರಿಶಂಕರ್, ಮುಖಂಡರಾದ ಕಲ್ಲಹಳ್ಳಿ ದೇವರಾಜು, ಇಕ್ಬಾಲ್ ಅಹಮದ್, ನಯಾಜ್ ಅಹಮದ್, ಜೆ.ಕುಮಾರ್, ಮಹೇಶ್, ನರುಗನಹಳ್ಳಿ ವಿಜಯಕುಮಾರ್, ಷಣ್ಮುಖಪ್ಪ, ಸುಜಾತ, ಹಾಲನೂರು ಲೇಪಾಕ್ಷ್, ಆಟೋ ರಾಜು, ಜಿ.ಡಿ.ವಿಜಯಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!