ತುಮಕೂರು: ಕೇಂದ್ರ ಚುನಾವಣಾ ಆಯೋಗ ಮಧ್ಯಾಹ್ನ ಚುನಾವಣಾ ದಿನಾಂಕ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೊಳಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತರಾತುರಿಯಲ್ಲಿ ಸ್ಮಾರ್ಟ್ಸಿಟಿ ವತಿಯಿಂದ 8.78 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ಸುಮಾರು 8.78 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಜಾಗದಲ್ಲಿ ಈಗಾಗಲೇ ವೈದ್ಯಕೀಯ ಕಟ್ಟಡ ನಿರ್ಮಾಣ ಮಾಡಲಾಗಿದೆ, ಈ ಕಟ್ಟಡಕ್ಕೆ ಪೀಠೋಪಕರಣ ಹಾಕಲು 10 ಲಕ್ಷ ರೂ., ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಸಲುವಾಗಿ ಟ್ರಾಫಿಕ್ ನಿಯಮಗಳ ಕುರಿತ ಬೋರ್ಡ್ಗಳನ್ನು ಅಳವಡಿಸಲು 2.29 ಕೋಟಿ ರೂ. ಜಿಮ್ನಾಸ್ಟಿಕ್ ಗೆ ಸುಮಾರು 70 ಲಕ್ಷರೂ., ಮೈದಾನದ ಸುತ್ತಲೂ ವಾಕಿಂಗ್ ಪಾತ್ ನಿರ್ಮಾಣ ಮಾಡಲು 8.78 ಕೋಟಿ ರೂ. ವೆಚ್ಚದಲ್ಲಿ ಅಡಿಗಲ್ಲು ಹಾಕಲಾಗಿದೆ ಎಂದರು.
ಮೈದಾನದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗುತ್ತಿದೆ, ಇದರಿಂದ ಜನಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು..
ಸ್ಮಾರ್ಟ್ಸಿಟಿ ಅಭಿವೃದ್ಧಿ ಕಾರ್ಯ ಕೇವಲ 6 ವಾರ್ಡ್ಗಳಿಗೆ ಮಾತ್ರ ಸೀಮಿತವಾಗಿದೆ, ಉಳಿದ ವಾರ್ಡ್ಗಳಿಗೂ ಅನುಕೂಲವಾಗುವಂತೆ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ಈ ಸಂಬಂಧ ಕ್ಯಾಬಿನೆಟ್ ನಲ್ಲಿ ನಡೆದ ಬಜೆಟ್ ಚರ್ಚೆಯ ಸಂದರ್ಭದಲ್ಲೂ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ನಗರದ ಬೇರೆ ವಾರ್ಡ್ಗಳಲ್ಲೂ ಸಹ ಸ್ಮಾರ್ಟ್ಸಿಟಿ ಕಾಮಗಾರಿ ನಡೆಯಬೇಕು, ಇಲ್ಲದಿದ್ದರೆ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ, ಹಾಗಾಗಿ ಇಡೀ ತುಮಕೂರು ಸ್ಮಾರ್ಟ್ ಆಗಬೇಕು, ಈ ನಿಟ್ಟಿನಲ್ಲಿ ಹಂತ ಹಂತವಾಗಿ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ, ಜನ ಸಮುದಾಯಕ್ಕೆ ಅನೇಕ ಸವಲತ್ತು ದೊರೆಯಬೇಕು ಎಂಬ ಉದ್ದೇಶದಿಂದ ತುರ್ತಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ನಗರದ ಎಸ್. ಮಾಲ್ ಬಳಿ ಸೇತುವೆ ಚಿಕ್ಕದಾಗಿದ್ದು, ರಸ್ತೆ ಅಗಲೀಕರಣ ಮಾಡಿದ ಮೇಲೆ ಆ ಜಾಗವನ್ನು ಹಾಗೆಯೇ ಬಿಡಲಾಗಿತ್ತು, ಇದೀಗ ಮೂರೂವರೆ ಕೋಟಿ ರೂ. ಮಂಜೂರಾಗಿದ್ದು, ಸೇತುವೆ ಅಗಲೀಕರಣ ಕಾಮಗಾರಿಗೂ ಸಹ ಪ್ರಾರಂಭವಾಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಯಿಂದ ತುಮಕೂರಿಗೆ ಪ್ರವೇಶಿಸುವ ಜಾಗದಲ್ಲಿ ಎರಡು ಪ್ರವೇಶ ದ್ವಾರಗಳನ್ನು ಹಾಕುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಮನವಿ ಮಾಡಿದ್ದರೂ ಇದುವರೆಗೂ ಪ್ರವೇಶ ದ್ವಾರಗಳ ನಿರ್ಮಾಣವಾಗಿಲ್ಲ, ಕೇಂದ್ರ ಹೆದ್ದಾರಿ ಸಚಿವರಿಗೆ ಮನವಿ ಮಾಡಿ ಎರಡು ಪ್ರವೇಶ ದ್ವಾರಗಳನ್ನು ಹಾಕಿಸುವಂತೆ ಸ್ಥಳೀಯ ಶಾಸಕರಿಗೆ ತಿಳಿಸಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸೇರಿದಂತೆ ಸ್ಮಾರ್ಟ್ಸಿಟಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
Comments are closed.