ಕುಣಿಗಲ್: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಕಗ್ಗೆರೆ ಶ್ರೀತೋಂಟದ ಸಿದ್ದಲಿಂಗೇಶ್ವರ ಮಹಾ ಸ್ವಾಮಿಯ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗಿನಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀಸ್ವಾಮಿಯವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು, ಮಹಾ ರಥೋತ್ಸವದ ಕಾರ್ಯಕ್ರಮದಲ್ಲಿ ಯಡಿಯೂರು ಬಾಳೆಹೊನ್ನೂರು ಖಾಸಾ ಶಾಖ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶಿವಕುಮಾರ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
ನಂದಿ ಧ್ವಜ ಪೂಜೆ ಸಲ್ಲಿಸುವ ಮುನ್ನ ರಥೋತ್ಸವಕ್ಕೆ ಚಾಲನೆ ನೀಡುವ ಷಟ್ ಸ್ಥಳ ಧ್ವಜ ವಾಡಿಕೆಯಂತೆ ಹರಾಜು ಹಾಕಲಾಯಿತು,
ಕಳೆದಬಾರಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿ ಗೌಡ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ನಡುವೆ ತುರುಸಿನ ಪೈಪೋಟಿ ನಡೆದು ಶಾಸಕರು ಹದಿನಾರು ಲಕ್ಷ ರೂ. ಹರಾಜು ಕೂಗಿ ತಮ್ಮದಾಗಿಸಿಕೊಂಡಿದ್ದರು, ಈ ಬಾರಿ ಲೋಕಸಭೆ ಚುನಾವಣೆ ಇರುವ ಕಾರಣ ಸಂಸದರ ಪರವಾಗಿ ಅವರ ಅಭಿಮಾನಿ ಗೌಡಗೆರೆ ಗಂಗಣ್ಣ 2.30 ಲಕ್ಷ ರೂ.ಗೆ ಹರಾಜು ಕೂಗಿ ಧ್ವಜ ತಮ್ಮದಾಗಿಸಿಕೊಂಡ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯ ನಿರ್ಮಾಣ ಕಾರ್ಯಕ್ಕೆ ದೇವಾಲಯ ನೆಲಸಮ ಗೊಳಿಸಲಾಗಿದ್ದು ದೇವಾಲಯ ಕಾಮಗಾರಿ ವಿಳಂಭ ಆಗುತ್ತಿರುವ ಬಗ್ಗೆ ಭಕ್ತರಾದ ಅಶೋಕ್, ನಾಗರಾಜ್ ಇತರರು ಅಸಮಧಾನ ವ್ಯಕ್ತಪಡಿಸಿದರು, ಕುಣಿಗಲ್ ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಉರಿ ಬಿಸಿಲನ್ನು ಲೆಕ್ಕಿಸದೆ ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ರಥ ಎಳೆಯುವ ಮೂಲಕ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾದರು.
ಕಗ್ಗೆರೆ ಕ್ಷೇತ್ರಕ್ಕೆ ಸಾಗುವ ವಿವಿಧ ಮಾರ್ಗಗಳಲ್ಲಿ ಭಕ್ತರ ದಾಹ ತಣಿಸಲು ಗ್ರಾಮಸ್ಥರು ಅರವಟ್ಟಿಗೆ ಸ್ಥಾಪಿಸಿ ನೀರು ಮಜ್ಜಿಗೆ, ಹೆಸರು ಬೇಳೆ, ಪಾನಕ ನೀಡಿದರು, ಶ್ರೀಕ್ಷೇತ್ರದಲ್ಲಿ ಮಹಾ ರಥೋತ್ಸವ ನೆರವೇರಿದ ನಂತರ ಹರಕೆ ಹೊತ್ತಿದ್ದ ಹಲವಾರು ಭಕ್ತರು ಅನ್ನದಾಸೋಹ ನೆರವೇರಿಸಿದರು, ಯಡಿಯೂರು ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಶ್ರೀಕ್ಷೇತ್ರದ ವತಿಯಿಂದ ನೀರು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
Comments are closed.