ಕುಣಿಗಲ್: ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಾಲಿ ಕಾಂಗ್ರೆಸ್ ಸರ್ಕಾರದ 18ಕ್ಕೂ ಹೆಚ್ಚು ಮಂದಿ ಶಾಸಕರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಹೋದರೆ ಸಾಕು ಅಂತಿದ್ದಾರೆ, ಈ ಪೈಕಿ ತುಮಕೂರು ಜಿಲ್ಲೆಯ ಇಬ್ಬರು ಶಾಸಕರು ಇದ್ದಾರೆ, ಆನಪರ ಅಭಿವೃದ್ಧಿ ಕಾರ್ಯ ಮಾಡದೆ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ನೀಡದೆ ರಾಜ್ಯದ ಜನರನ್ನು ಕಷ್ಟಕ್ಕೆ ಈಡುಮಾಡಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಸ್ವಪಕ್ಷೀಯರೆ ಬೇಸರಗೊಂಡಿದ್ದು ಇನ್ನು ರಾಜ್ಯದ ಜನರು ಸರ್ಕಾರ ಹೋದರೆ ಸಾಕು ಎನ್ನುತ್ತಿದ್ದಾರೆ ಎಂದರು.
ಈಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸಜ್ಜನ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಪಕ್ಷ ಕಣಕ್ಕಿಳಿಸಿದ್ದು, ಇವರ ವರ್ಛಸ್ಸು ತಡೆಯಲಾರದೆ ಡಿಕೆ ಸಹೋದರರು ಕೀಳು ಮಟ್ಟದ ಮಾತನಾಡುತ್ತಿದ್ದಾರೆ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಈಬಾರಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕೆಂದರು.
ಶಾಸಕ ಮುನಿರತ್ನಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಡಾ.ಮಂಜುನಾಥ್ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಡಿಕೆ ಸಹೋದರರು ಮಹಿಳೆಯರ ಮತ ಸೆಳೆಯಲು ಹರಕು, ಮುರುಕು ಸೀರೆಯನ್ನೆಲ್ಲಾ ಹಂಚಿದ್ದಾರೆ, ಸಜ್ಜನ, ಹೃದ್ರೋಗ ತಜ್ಞ ಡಾ.ಮಂಜುನಾಥ್ ವಿರುದ್ಧ ಅವಹೇಳನಕಾರಿ ಮಾತು ಆರಂಭಿಸಿದ್ದಾರೆ, ದೇಶದಲ್ಲಿ ಪ್ರಧಾನಿ ಮೋದಿಜಿಯವರ ಆಡಳಿತ ಮೆಚ್ಚಿ ಮಾಜಿ ಪ್ರಧಾನಿ ದೇವೇಗೌಡರು ಈಬಾರಿ ಎನ್ಡಿಎ ಸೇರಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಈಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲ್ಲಲಿದ್ದಾರೆ, ತಾಲೂಕಿನಲ್ಲಿ ಬಿಜೆಪಿಯ ಡಿ.ಕೃಷ್ಣಕುಮಾರ್, ಜೆಡಿಎಸ್ ನ ಡಿ.ನಾಗರಾಜಯ್ಯನವರು, ಜೆಡಿಎಸ್, ಬಿಜೆಪಿ ವರಿಷ್ಠರು ಒಗ್ಗೂಡಿಸಿ ತಾಲೂಕಿನಲ್ಲಿ ಚುನಾವಣೆ ಮಾಡಲಿದ್ದು ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತ ಗಳಿಸಿ ಕೊಡಲು ಎರಡೂ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕೆಂದರು.
ತಾಲೂಕು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಬಂದಿದ್ದಕ್ಕೆ ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮಗಳ ಮನೆಗೆ ನುಗ್ಗಿ ಘೋಷಣೆ ಕೂಗುತ್ತಾರೆ, ಇಂತಹ ಆಡಳಿತದಿಂದ ದೂರ ಇರಬೇಕೆಂದರೆ ಜನರು ಎಚ್ಚೆತ್ತುಕೊಂಡು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತ ನೀಡಬೇಕು, ಸಂಸದರು ಕೇಂದ್ರದ ಯಾವುದೇ ಅನುದಾನ ತಾಲೂಕಿಗೆ ತಂದಿಲ್ಲ, ಸಂಸದ, ಶಾಸಕರು ಸೇರಿಕೊಂಡು ಪಕ್ಷ ರಾಜಕಾರಣ ಮಾಡುತ್ತಾ ಬಿಜೆಪಿ, ಜೆಡಿಎಸ್ ಅಧಿಕಾರರೂಢ ಗ್ರಾಪಂಗಳಿಗೆ ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ, ಈಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ಗಳಿಸಲು ಕಾರ್ಯಕರ್ತರು ಶ್ರಮ ಪಡಬೇಕು ಎಂದರು.
ಪ್ರಭಾರಿಗಳಾದ ಗೋಪಿನಾಥ ರೆಡ್ಡಿ, ಕೇಶ ವಪ್ರಸಾದ್, ವಸಂತ್, ತಾಲೂಕು ಅಧ್ಯಕ್ಷ ಬಲರಾಮ, ಪ್ರಮುಖರಾದ ವೆಂಕಟೇಶ, ದೇವರಾಜು, ದಿಲೀಪ್, ಧನುಶ್, ಗೋಪಿ, ನಾಗೇಶ್, ದಿನೇಶ್, ರೂಪಾ, ನಟರಾಜ, ತಿಮ್ಮಪ್ಪ ಇತರರು ಇದ್ದರು.
Comments are closed.