ತುಮಕೂರು: ಸಾಮಾಜಿಕ ಮಾನದಂಡಗಳು ದೇಶದ ಆರ್ಥಿಕ ಸ್ಥಿತಿಗತಿಗೆ ಪೂರಕವಾಗದಿರುವುದೇ ಎಲ್ಲಾ ಸಮಸ್ಯೆಗಳಿಗೂ ಕಾರಣ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಆರ್.ಬಸವರಾಜು ಅಭಿಪ್ರಾಯಪಟ್ಟರು.
ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಆಯೋಜಿಸಿದ್ದ ಬದಲಾವಣೆಗಾಗಿ ಸಹಭಾಗಿತ್ವದ ಭವಿಷ್ಯ ಎಂಬ ಪರಿಕಲ್ಪನೆಯಲ್ಲಿ ವಿಶ್ವ ಸಮಾಜ ಕಾರ್ಯ ದಿನ- 2024 ಕಾರ್ಯಕ್ರಮದಲ್ಲಿ ಮಾತನಾಡಿ, ಪಂಜಾಬ್ ರಾಜ್ಯದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಪ್ರಮಾಣ ಶೇ.65.5 ರಷ್ಟಿದೆ, ಭಾರತದ ಗ್ರಾಮೀಣ ಭಾಗದಲ್ಲಿ ಬಡತನ, ಮೂಲ ಸೌಕರ್ಯಗಳಾದ ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ಅಸಮರ್ಪಕ ಆರೋಗ್ಯ ಸೌಲಭ್ಯಗಳು, ಅನಕ್ಷರತೆ, ನಿರುದ್ಯೋಗ ಮತ್ತು ಕೃಷಿ ಸವಾಲುಗಳು ಇಂದಿಗೂ ಚಾಲ್ತಿಯಲ್ಲಿವೆ, ಇಂತಹ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಪರಿಹಾರ ನೀಡಬೇಕಾದವರು ಸಮಾಜ ಕಾರ್ಯದವರು ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಗಳನ್ನು ಶಿಬಿರಗಳ ಮೂಲಕ ಬಗೆಹರಿಸುವ ಕಾರ್ಯವಾಗಬೇಕು, ನಗರ ಪ್ರದೇಶದ, ಮೂಲಭೂತ ಸೌಕರ್ಯ ವಂಚಿತ ಪ್ರದೇಶಗಳಲ್ಲಿ ಶಿಬಿರ ಏರ್ಪಡಿಸಬೇಕು, ಅಲ್ಲಿನ ಸವಾಲುಗಳನ್ನು ಸಮಸ್ಯೆಗಳೆಂದು ಭಾವಿಸದೆ, ದೇಶದ ಅಭಿವೃದ್ಧಿಗಾಗಿ ದುಡಿಮೆ ಎಂದು ಕಾರ್ಯ ನಿರ್ವಹಿಸಬೇಕು ಎಂದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಕ್ಷಣ ಮತ್ತು ಸಮಾಜದ ನಡುವಿನ ಉತ್ತಮ ಸಂಪರ್ಕ ಕೊಂಡಿ ಸಮಾಜ ಕಾರ್ಯ, ನಾವು ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಒಂದು ಕಡೆ ಸುಧಾರಿಸುತ್ತಿದ್ದೇವೆ, ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಸಮತೋಲನ ಸಾಧಿಸಲು ನಮಗೆ ಸಮಸ್ಯೆಗಳಿವೆ ಎಂದರು.
ಸಮಾಜ ಕಾರ್ಯ ವಿದ್ಯಾರ್ಥಿಗಳು ಗ್ರಾಮೀಣ ಸ್ಥಿತಿಗತಿಗಳಿಗೆ ತೆರೆದುಕೊಳ್ಳಬೇಕು, ಅಭಿವೃದ್ಧಿಯ ಶೂನ್ಯ ಸಂಪರ್ಕವಿರುವ ಗ್ರಾಮಗಳನ್ನು ಸುಧಾರಿಸುವ ಸವಾಲುಗಳನ್ನು ತೆಗೆದುಕೊಳ್ಳಬೇಕು, ಬದಲಾವಣೆ ತರಲು ನಾವು ಮೊದಲು ಬದಲಾಗಬೇಕು ಎಂದು ತಿಳಿಸಿದರು.
ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಮಾಜದ ವಿಭಿನ್ನ ಮಾನದಂಡಗಳ ಮೇಲೆ ತಯಾರಿಸಿದ್ದ ಮಾದರಿಗಳನ್ನು ವೀಕ್ಷಿಸಿದರು.
ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ಬಿ.ರಮೇಶ್ ಮಾತನಾಡಿ, ಸಹಯೋಗ, ಸುಸ್ಥಿರತೆ, ಸ್ಥಳೀಯ ಸಂಪರ್ಕದಿಂದ ಸಮಾಜವನ್ನು ಅರ್ಥ ಮಾಡಿಕೊಳ್ಳುವುದು, ಮಹಿಳೆಯರ ಉನ್ನತಿ, ಮಾನಸಿಕ ಅಸ್ವಸ್ಥರ ಮತ್ತು ವಿಶೇಷಚೇತನರ ಮೇಲೆ ಕಾಳಜಿ ಇರಬೇಕು ಎಂದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ ಹಾಜರಿದ್ದರು.
Comments are closed.