ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಏಪ್ರಿಲ್ 15 ರಂದು ನಡೆಯಲಿರುವ ಮಹಾ ರಥೋತ್ಸವ ದಿನದಂದು ವಾಹನದ ದಟ್ಟಣೆ ನಿಯಂತ್ರಿಸುವ ಸಲುವಾಗಿ ಏಕ ಮುಖ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಯಡಿಯೂರು ಜಾತ್ರೆ ಏಪ್ರಿಲ್ 8 ರಿಂದ 23ರ ವರೆಗೆ ಜರುಗಲಿದ್ದು, ಈ ಅವಧಿಯಲ್ಲಿ ದೇವಾಲಯದ ಗರ್ಭ ಗುಡಿಯಲ್ಲಿ ಬಂಗಾರದ ಆಭರಣಗಳ ರಕ್ಷಣೆಗಾಗಿ ಇಬ್ಬರು ಸಶಸ್ತ್ರ ಆರಕ್ಷಕ ಸಿಬ್ಬಂದಿ ಹಾಗೂ ಜಾತ್ರಾ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಆರಕ್ಷಕ ಸಿಬ್ಬಂದಿ ನಿಯೋಜಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಜಾತ್ರಾ ಅವಧಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು, ತುರ್ತು ಚಿಕಿತ್ಸಾ ವಾಹನ ಒದಗಿಸುವುದರೊಂದಿಗೆ ಚಿಕಿತ್ಸೆ ನೀಡಲು ಔಷಧಿಯೊಂದಿಗೆ ಸಿಬ್ಬಂದಿ ನಿಯೋಜಿಸಬೇಕೆಂದರಲ್ಲದೆ, ಭಕ್ತಾದಿಗಳಿಗೆ ಉಚಿತವಾಗಿ ವಿತರಿಸಲಾಗುವ ಪ್ರಸಾದ ವಿತರಣೆ ಮಾಡುವ ಮುನ್ನ ಆರೋಗ್ಯ ವೈದ್ಯಾಧಿಕಾರಿಗಳು ಆಹಾರ ಗುಣಮಟ್ಟ ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.
ಜಾತ್ರೆ ಸಮಯದಲ್ಲಿ ನಿರಂತರ 3 ಫೇಸ್ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂ ಇಲಾಖೆಗೆ, ರಥದ ದೃಢತೆ ಬಗ್ಗೆ ದೃಢೀಕರಣ ಪತ್ರ ನೀಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು, ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸ್ಥಳೀಯ ಪಂಚಾಯತಿಗೆ ನಿರ್ದೇಶಿಸಿದರು.
ಜಾತ್ರೆಗೆ ಬರುವ ಜಾನುವಾರುಗಳಿಗೆ ಸೋಂಕು ರೋಗ ಬಾರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರಲ್ಲದೆ ಏಪ್ರಿಲ್ 15 ರಂದು ನಡೆಯಲಿರುವ ಮಹಾ ರಥೋತ್ಸವ ಹಾಗೂ 17 ರಂದು ನಡೆಯಲಿರುವ ಬೆಳ್ಳಿ ಪಲ್ಲಕ್ಕಿ ಉತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯಡಿಯೂರು ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯ ವರೆಗೆ ಎಲ್ ಇ ಡಿ ಲೈಟಿಂಗ್ ವ್ಯವಸ್ಥೆ ಹಾಗೂ ಸ್ವಾಗತ ಬೋರ್ಡ್ಗಳನ್ನು ಅಳವಡಿಸಬೇಕೆಂದರಲ್ಲದೆ, ಜಾತ್ರೆ ಅವಧಿಯಲ್ಲಿ ಕುಣಿಗಲ್ ಪುರಸಭೆಯಿಂದ 20 ಸ್ವಚ್ಛತಾ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜಿಸುವ, ಮದ್ಯ ಮಾರಾಟ ಹಾಗೂ ಮಾಂಸದ ಅಂಗಡಿಗಳನ್ನು ತೆರೆಯದಂತೆ ನಿಷೇಧಾದೇಶ ಹೊರಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಮುಜರಾಯಿ ತಹಶೀಲ್ದಾರ್ ಸವಿತಾ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ, ಗಿರೀಶ್ ಬಾಬು ರೆಡ್ಡಿ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಹಾಗೂ ಪ್ರಧಾನ ಅರ್ಚಕರು ಹಾಜರಿದ್ದರು.
ಏ.8 ರಿಂದ ಎಡೆಯೂರು ಜಾತ್ರೆ
ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವ ಏಪ್ರಿಲ್ 8 ರಿಂದ 23ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ,
ಜಾತ್ರೆ ಪ್ರಯುಕ್ತ ಏಪ್ರಿಲ್ 8 ರಂದು ಹುಲಿ ವಾಹನೋತ್ಸವ, 9ರಂದು ಮಹಾ ಗಣಪತಿ ಪೂಜೆ, ಧ್ವಜಾರೋಹಣ, ಮಹಾರಥಕ್ಕೆ ಕಳಶಾರೋಹಣ, ಪಾಲಕಿ ಉತ್ಸವ, ವೃಷಭ ವಾಹನೋತ್ಸವ, ಕೈಯಡ್ಡೆ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, 10ರಂದು ವಿಶೇಷ ಪೂಜೆ ಉತ್ಸವಗಳು, 11ರಂದು ನಂದಿ ವಾಹನೋತ್ಸವ, 12 ರಂದು ಗಜವಾಹನೋತ್ಸವ, ಬಸವ ವಾಹನೋತ್ಸವ, 13 ರಂದು ಫಲಹಾರ ವಿತರಣಾ ಸೇವೆ, ಪುಷ್ಪರಥ, 14ರಂದು ಕ್ಷೀರಾಭಿಷೇಕ, ಹುತ್ತದ ವಾಹನೋತ್ಸವ, ಉಯ್ಯಾಲೋತ್ಸವ, ಚಂದ್ರ ಮಂಡಲೋತ್ಸವ, ಗದ್ದುಗೆಗೆ ಅಷ್ಟೋತ್ತರ ಸೇವೆ, ಪುಷ್ಪಾಲಂಕೃತ ಭೂ ಕೈಲಾಸ ಉತ್ಸವ, 15ರ ಬೆಳಗ್ಗೆ 11.30 ಗಂಟೆಗೆ ನಂದಿ ಧ್ವಜಪೂಜೆ, ಮ.12 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಹರಗುರು ಚರಮೂರ್ತಿಗಳವರಿಂದ ಮಹಾರಥೋತ್ಸವ, ಸಂಜೆ 5 ಗಂಟೆಗೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಹಾಗೂ ರಾತ್ರಿ 10 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ, 16 ರಂದು ಭಿಕ್ಷಾಟನಾ ಲೀಲೆ, ಬಿಲ್ವವೃಕ್ಷ ವಾಹನೋತ್ಸವ, 17ರಂದು ಶೇಷ ವಾಹನೋತ್ಸವ, ಬೆಳ್ಳಿಪಲ್ಲಕ್ಕಿ ಉತ್ಸವ, 18 ರಿಂದ 23ರ ವರೆಗೆ ವಿವಿಧ ಉತ್ಸವ ಜರುಗಲಿವೆ.
Comments are closed.