ತುಮಕೂರು: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಸುಮಾರು 3500ಕ್ಕೂ ಹೆಚ್ಚು 108 ಸಿಬ್ಬಂದಿಗೆ ವೇತನ ಕಡಿತಗೊಳಿಸುವುದರ ಜೊತೆಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ, ಇದರಿಂದ ಮನೆ ನಿರ್ವಹಣೆ ಕಷ್ಟವಾಗಿದೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಮಂಜುನಾಥ್.ಸಿ. ತಿಳಿಸಿದ್ದಾರೆ.
ಜಿಲ್ಲಾ ಪ್ರತಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿವಿಕೆ ಎಎಂಆರ್ ಐ ಸಂಸ್ಥೆಯ ಅಡಿಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ 750ಕ್ಕೂ ಹೆಚ್ಚು 108 ಆ್ಯಂಬುಲೆನ್ಸ್ ಚಾಲಕರು, ಸ್ಟಾಪ್ ನರ್ಸ್ಗಳಿಗೆ ಕಳೆದ ಡಿಸೆಂಬರ್ ನಿಂದ ಇದುವರೆಗೂ ವೇತನ ನೀಡಿಲ್ಲ, ಹಾಲಿ ನೀಡುತ್ತಿದ್ದು ಮಾಸಿಕ 36 ಸಾವಿರ ವೇತನದಲ್ಲಿ 2023ರ ಮಾರ್ಚ್ನಿಂದ ನವೆಂಬರ್ ವರೆಗಿನ ವೇತನದಲ್ಲಿ ಮಾಸಿಕ 6 ಸಾವಿರ ರೂ.ಕಡಿತ ಮಾಡಿ, ಮೂವತ್ತು ಸಾವಿರ ರೂ. ಗಳಂತೆ ನೀಡಲಾಗಿದೆ, ಅಲ್ಲದೆ ಡಿಸೆಂಬರ್ 2023ರಿಂದ 2024ರ ಫೆಬ್ರವರಿ ವರೆಗೆ ನೀಡಬೇಕಾಗಿದ್ದ ವೇತನ ನೀಡಿಲ್ಲ ಎಂದು ದೂರಿದರು.
ಸರಕಾರ ಮತ್ತು ನಮಗೆ ವೇತನ ನೀಡುವ ಜಿವಿಕೆ ಇಎಂಆರ್ ಸಿ ಸಂಸ್ಥೆ ಕಳೆದ ಐದು ವರ್ಷಗಳಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ, 2023ರ ಡಿಸೆಂಬರ್ ನಿಂದ ಇದುವರೆಗೂ ವೇತನ ಬಿಡುಗಡೆಯಾಗದ ಕಾರಣ ಮಕ್ಕಳಿಗೆ ಶಾಲಾ ಫೀ ಕಟ್ಟಲು ಸಾಧ್ಯವಾಗದೆ ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಿಲ್ಲ, ಮನೆ ಬಾಡಿಗೆ, ದಿನನಿತ್ಯದ ಖರ್ಚುಗಳಿಗೆ ಹಣವಿಲ್ಲದೆ ಸಾಲ, ಸೋಲ ಮಾಡಿ, ಇಲ್ಲವೇ ಮನೆಯಲ್ಲಿ ವಡವೆ, ವಸ್ತ್ರ ಅಡವಿಟ್ಟು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಸರಕಾರದ ಮುಂದೆ ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘದಿಂದ ಹಲವಾರು ಬೇಡಿಕೆ ಮುಂದಿಟ್ಟಿದೆ, ಆದರೆ ಯಾವ ಮನವಿಗೂ ಸರಕಾರ ಸ್ಪಂದಿಸಿಲ್ಲ, ಕನಿಷ್ಠ ವೇತನವನ್ನಾದರೂ ಆಯಾಯ ತಿಂಗಳು ನೀಡಿದರೆ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂಬ ಮನವಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಿಂದ ಹಿಡಿದು ಆಯುಕ್ತರು, ನಿರ್ದೇಶಕರು, ಆರೋಗ್ಯ ಮಂತ್ರಿಗಳ ವರೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಸರಕಾರ ಈಗಲಾದರೂ ನಮ್ಮ ಮನವಿಗೆ ಸ್ಪಂದಿಸಿ ವೇತನ ಬಿಡುಗಡೆ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಮಂಜುನಾಥ್ ತಿಳಿಸಿದರು.
ತುಮಕೂರು ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಮೂವತೈದು 108 ಆ್ಯಂಬುಲೆನ್ಸ್ಗಳಿದ್ದು, ಇವುಗಳಲ್ಲಿ ಐದಾರು ಆ್ಯಂಬುಲೆನ್ಸ್ಗಳು ಕೆಲಸ ಮಾಡುತ್ತಿಲ್ಲ, ಉಳಿದಂತೆ 28 ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ, ಒಂದು ದಿನಕ್ಕೆ ಕನಿಷ್ಠವೆಂದರೂ 5- 6 ಟ್ರಿಪ್ ಒಂದು ವಾಹನ ಮಾಡುತ್ತದೆ, ಮೂರು ಪಾಳಿಯಲ್ಲಿ ಕೆಲಸ ಮಾಡುವ 75 ಜನ ವಾಹನ ಚಾಲಕರು, 85 ಕ್ಕೂ ಹೆಚ್ಚು ಜನ ಸ್ಟಾಫ್ ನರ್ಸ್ಗಳಿಗೆ ಕಳೆದ ಮೂರುವರೆ ತಿಂಗಳಿಂದ ವೇತನವಿಲ್ಲ, ಪರೀಕ್ಷಾ ಸಮಯದಲ್ಲಿ ಮಕ್ಕಳ ಶಾಲಾ ಶುಲ್ಕ ಕಟ್ಟಿಲ್ಲ ಅಂತ ಮಕ್ಕಳನ್ನು ಶಾಲೆಗೆ ಸೇರಿಸುತ್ತಿಲ್ಲ, ವಿಧಿಯಿಲ್ಲ ಶಾಲಾ ಆಡಳಿತ ಮಂಡಳಿ ಕೈಕಾಲು ಹಿಡಿದು ಪರೀಕ್ಷೆ ಬರಯಲು ಅನುಮತಿ ಪಡೆಯಲಾಗಿದೆ, ಮನೆ ಬಾಡಿಗೆ ಕಟ್ಟಿಲ್ಲ, ದಿನಸಿ ಮತ್ತಿತರ ಸಮಸ್ಯೆ ಎದುರಿಸುತ್ತಿದ್ದೇವೆ, ಸರಕಾರ ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಬಾಕಿ ಇರಿಸಿಕೊಂಡಿರುವ ವೇತನ ಬಿಡುಗಡೆ ಮಾಡಬೇಕು, ಮುಂದಿನ 10 ದಿನಗಳ ಒಳಗೆ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಮುಷ್ಕರ ಅನಿವಾರ್ಯ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರು ಇಲಾಖೆಯಿಂದ ಹಲವಾರು ರೀತಿಯ ತೊಂದರೆ ಅನುಭವಿಸುತ್ತಿದ್ದೇವೆ, ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವಿದ್ದರೂ ಮಾಡುತ್ತಿಲ್ಲ, ಅಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿ ಕಿರುಕುಳ ಸಹಿಸಿಕೊಳ್ಳಬೇಕಿದೆ, ಒಂದು ವೇಳೆ ಸರಕಾರದ ವಿರುದ್ಧ ಮಾತನಾಡಿದರೆ ನಮ್ಮನ್ನು ಟರ್ಮಿನೇಟ್ ಮಾಡಲಾಗುತ್ತದೆ, ಸಂಸ್ಥೆಯ ವಿರುದ್ಧ ಮಾತನಾಡಿದರೂ ನಮ್ಮನ್ನು ಕೆಲಸದಿಂದ ಕಿತ್ತು ಹಾಕುತ್ತಾರೆ, ಕಳೆದ 8-10 ವರ್ಷಗಳಿಂದ ಕೆಲಸ ಮಾಡಿರುವ ನಾವುಗಳು ಒಂದು ರೀತಿ ಅಡ್ಡ ಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಿದ್ದೇವೆ, ನಮಗೆ ಆಗುತ್ತಿರುವ ನೋವು ಹೇಳಿಕೊಂಡರೂ ಕಷ್ಟ, ಬಿಟ್ಟರೂ ಕಷ್ಟ ಎನ್ನುವಂತಾಗಿದೆ, ದಯಮಾಡಿ ಸರಕಾರ ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ವೇತನ ಬಿಡುಗಡೆ ಮಾಡಿ, ಸುಗಮ ಜೀವನ ನಡಸಲು ಸಹಕರಿಸಲಿ ಎಂದು ಮನವಿ ಮಾಡಿದರು.
Comments are closed.