ತುಮಕೂರು: ಮತ್ತೊಮ್ಮೆ ಮೂರನೇ ಬಾರಿ ಮೋದಿ ಪ್ರಧಾನಿಯಾಗಬೇಕು, ಹಾಗಾಗಿ ನನ್ನನ್ನ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಪಿ ಮೋರ್ಚಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಬಸವಣ್ಣನವರ ಅನುಯಾಯಿಯಾಗಿ ಬೆಳೆದುಕೊಂಡು ಬಂದಿದ್ದೇನೆ, ಸಮಾನದ ಕಟ್ಟಕಡೆಯವರನ್ನೂ ಮುಖ್ಯವಾಹಿನಿಗೆ ತರಬೇಕು ಎನ್ನುವುದು ನನ್ನ ಉದ್ದೇಶ, ಆ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇನೆ ಎಂದರು.
ದಲಿತ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಂಪತ್ತು, ದೇಶಕ್ಕೆ ದೊಡ್ಡದಾದ ಸಂವಿಧಾನ ಕೊಟ್ಟಿದ್ದಾರೆ, ನರೇಂದ್ರ ಮೋದಿ ಅವರ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ, ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿದೆ, ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ನಾನು ಈಗಾಗಲೇ ಓಡಾಡಿದ್ದೇನೆ, ಮಧುಗಿರಿ, ಕೊರಟಗೆರೆ, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಏನು ಅಂತಾ ಗೊತ್ತಾಗಿದೆ, ನನ್ನದೆ ಆದ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದೇನೆ, ಇದು ಭಾರತ ದೇಶದ ಚುನಾವಣೆಯಾಗಿದೆ, ದೇಶದ ಗೆಲುವಿಗೆ ನನಗೆ ಮತ ನೀಡಬೇಕು, ನಾನು ಕಾರ್ಯಕ್ರಮಕ್ಕೆ ಬರುವಾಗ 15- 16 ಕಡೆಯಲ್ಲಿ ಮಾತಾಡಿಕೊಂಡು ಬಂದೆ, ಅದರಲ್ಲಿ ದಲಿತ ಮುಖಂಡರು ಮಾತಾಡಿದರು, ಸೋಮಣ್ಣನವರೇ ನಿಮ್ಮ ಕಾರ್ಯವೈಖರಿ ನಮಗೆ ಗೊತ್ತಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು ಎಂದರು.
ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡಿಸಿದ್ದಾರೆ, ಅವರು ಹಳೆ ಸಿದ್ದರಾಮಯ್ಯ ಎಂಬ ಭಾವನೆ ಮೂಡಿದೆ, ಸಿದ್ದರಾಮಯ್ಯ ಅವರು ಯಾರದೋ ದುಡ್ಡನ್ನ ಯಾರಿಗೋ ಕೊಟ್ಟಿದ್ದಾರೆ, ಅಭಿವೃದ್ಧಿಗಾಗಿ ಇಟ್ಟಿದ್ದ ಹಣವನ್ನು ಮತ್ತೊಂದಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದ ವಿ.ಸೋಮಣ್ಣ, ದಲಿತ ಸಮುದಾಯ ಮುನ್ನಲೆಗೆ ಬರಬೇಕು, ಆ ನಿಟ್ಟಿನಲ್ಲಿ ಶ್ರಮಿಸುತ್ತೇನೆ, ಹಾಗಾಗಿ ಮೋದಿ ಅವರು ಸಮುದಾಯದ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ ಎಂದರು.
ಸೂರ್ಯಚಂದ್ರ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಸಂವಿಧಾನ ಇರುತ್ತದೆ, ಸಂವಿಧಾನ ಬದಲಾವಣೆ ಮಾತೇ ಇಲ್ಲ, ಸಂವಿಧಾನ ಬದಲಾವಣೆ ವಿಚಾರದಲ್ಲಿ ಅಪಪ್ರಚಾರ ಸರಿಯಲ್ಲ ಎಂದರು.
ವಿಶ್ವದ ಭೂಪಟದಲ್ಲಿ ಭಾರತ 5ನೇ ಸ್ಥಾನದಲ್ಲಿದೆ, ಮತ್ತೆ ಐದು ವರ್ಷಕ್ಕೆ ಮೂರನೇ ಸ್ಥಾನಕ್ಕೆ ಬಂದು ಮೊದಲ ಸ್ಥಾನಕ್ಕೆ ಏರುತ್ತೇವೆ, ಇದಕ್ಕೆ ಬಿಜೆಪಿ ಕಾರಣ, ಮೋದಿ ಅವರ ಅಭಿವೃದ್ಧಿ ಕೆಲಸ, ಚಿಂತನೆಗಳು ಕಾರಣ ಎಂದರು.
ಸೋಮಣ್ಣ ಹೊರಗಡೆಯಿಂದ ಬಂದವನ್ನಲ್ಲ, ತುಮಕೂರು ಜನರ ಮನವನ್ನ ಗೆದ್ದು ಋಣ ತೀರಿಸಲು ಬಂದಿದ್ದೇನೆ, ನಾನು ಎಲ್ಲಾ ಕಡೆ ಬರುತ್ತೇನೆ, ಅಭಿವೃದ್ಧಿಗೆ ಒತ್ತು ಕೊಡುತ್ತೇನೆ, ಈ ಚುನಾವಣೆ ದೇಶದ ಚುನಾವಣೆ, ಸೋಮಣ್ಣ ನಿಮಿತ್ತ ಮಾತ್ರ, ದೇಶಕ್ಕಾಗಿ ನನ್ನನ್ನ ಗೆಲ್ಲಿಸಬೇಕು, ತುಮಕೂರಲ್ಲಿ ನಡೆಯುತ್ತಿರುವುದೂ ಸಹ ನರೇಂದ್ರ ಅವರ ಚಿಂತನೆಯ ಚುನಾವಣೆ, ಎಲ್ಲಾ ವರ್ಗಕ್ಕೂ ಒಳ್ಳೆ ಕೆಲಸ ಮಾಡುತ್ತೀಯಾ ಎಂದು ವರಿಷ್ಠರು ನನ್ನನ್ನ ಕಳುಹಿಸಿಕೊಟ್ಟಿದ್ದಾರೆ, ನೀವು ಮಾಡುವ ಓಟು ನನಗಲ್ಲ, ನರೇಂದ್ರ ಮೋದಿಗೆ ಎಂದರು.
ರಾಹುಲ್ ಗಾಂಧಿ, ಸೋನಿಯಾಗಾಂಧಿ ಎಲ್ಲೆಲ್ಲಿ ಸ್ಪರ್ಧಿಸಿದ್ದಾರೆ ಎಂತಾ ಎಲ್ಲರಿಗೂ ಗೊತ್ತಿದೆ, ಅವರ ರೀತಿ ನಾನು ಹೊರಗಿನವನಾ? ನಾನು ಹೊರಗಿನವನಲ್ಲ, ಪಕ್ಕದವನು, ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭ ಸಂಬಂಧ ಇದೆ, ತುಮಕೂರು ಲೋಕಸಭಾ ಕ್ಷೇತ್ರವೂ ಸಹ ವಾರಣಾಸಿ ಮಾದರಿಯಲ್ಲಿ ಎತ್ತರಕ್ಕೆ ಬೆಳೆಯುತ್ತದೆ ಎಂದು ಭರವಸೆ ನೀಡಿದರು.
ಬಡವರ ಸಮಸ್ಯೆ ನಿವಾರಣೆ ಮಾಡಬೇಕು, ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ, ಬಡವರ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರು ನೂರಾರು ಯೋಜನೆ ತಂದಿದ್ದಾರೆ ಎಂದರು.
ಈ ಚುನಾವಣೆ ತುಂಬಾ ಸೂಕ್ಷ್ಮ ವಾಗಿದೆ, ನಿಮ್ಮ ನಿಮ್ಮ ಸ್ಥಳಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಲು ಮನದಟ್ಟು ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಸೋಮಣ್ಣ ತುಮಕೂರಿನಲ್ಲಿ ಮನೆ ಮಾಡಿದ್ದೇನೆ, ನಿಮ್ಮ ಜೊತೆಯಿರ್ತೀನಿ, ಎಲ್ಲೆಲ್ಲಿ ಸಾಧ್ಯನಾ ಎಲ್ಲಾ ಕಡೆ ಓಡಾಡ್ತೀನಿ, ನನಗೆ ಆಶೀರ್ವಾದ ಮತ ಕೊಡಿ, ನನ್ನನ್ನ ಗೆಲ್ಲಿಸಿ ಮೋದಿಯವರನ್ನು ಗೆಲ್ಲಿಸಿ ಎಂದರು.
ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ ಮಾತನಾಡಿ, ಸೋಮಣ್ಣ ಅವರ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು, ಅವರ ಗೆಲುವಾಗಿ ನಮ್ಮ ಮತ ನೀಡಬೇಕು ಎಂದು ಕರೆ ನೀಡಿದರು.
ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಕಾರ್ ಮಾತನಾಡಿ, ನಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿರುವ ಸೋಮಣ್ಣನವರು ನಮ್ಮ ಜಿಲ್ಲೆಗೆ ಹೊಸಬರೇನಲ್ಲ, ಮೊದಲಿನಿಂದಲೂ ಹಲವು ಚುನಾವಣೆಗಳ ಉಸ್ತುವಾರಿಯಾಗಿ ಜಿಲ್ಲೆಯನ್ನು ಬಲ್ಲವರಾಗಿದ್ದಾರೆ ಎಂದರು.
ಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್, ಎಂಎಲ್ ಸಿ ನವೀನ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡ ವೈಎಚ್.ಹುಚ್ಚಯ್ಯ, ಅನಿಲ್ ಕುಮಾರ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಓಂಕಾರ್, ಜಿಲ್ಲಾಧ್ಯಕ್ಷ ಅಂಜನಪ್ಪ, ಕಂಬದ ರಂಗಯ್ಯ ಇತರರು ಇದ್ದರು.
Comments are closed.