ಮಾ.25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ – ಸಕಲ ಸಿದ್ಧತೆ

ಪ್ರತಿ ಪರೀಕ್ಷಾ ಕೊಠಡಿಗೂ ಸಿಸಿ ಕ್ಯಾಮೆರಾ ಅಳವಡಿಸಿ: ಜಿಲ್ಲಾಧಿಕಾರಿ

38

Get real time updates directly on you device, subscribe now.


ತುಮಕೂರು: ಜಿಲ್ಲೆಯ 129 ಕೇಂದ್ರಗಳಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೊಠಡಿಗೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಪರೀಕ್ಷಾ ಕೊಠಡಿಗೆ 24 ವಿದ್ಯಾರ್ಥಿಗಳಂತೆ ಪ್ರತಿ ವಿದ್ಯಾರ್ಥಿಗೂ ಡೆಸ್ಕ್ ವ್ಯವಸ್ಥೆ ಮಾಡಬೇಕು, ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಮುಖ್ಯ ಅಧಿಕ್ಷಕರು, ಕಸ್ಟೋಡಿಯನ್, ಜಾಗೃತದಳ, ಪೊಲೀಸ್ ಎಸ್ಕಾರ್ಟ್, ಕೊಠಡಿ ಮೇಲ್ವಿಚಾರಕರು ಹಾಗೂ ಡಿ ದರ್ಜೆ ನೌಕರರನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು, ಜಿಲ್ಲಾ ಹಂತ ಹಾಗೂ ತಾಲ್ಲೂಕು ಹಂತದಲ್ಲಿ ಜಾಗೃತದಳ ಹಾಗೂ ಸ್ಥಾನಿಕ ಜಾಗೃತದಳ ಸಿಬ್ಬಂದಿ ನೇಮಿಸಬೇಕೆಂದರಲ್ಲದೆ, ಪೊಲೀಸ್ ರಕ್ಷಣೆಯೊಂದಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್ ಸಾಗಿಸಬೇಕು ಎಂದು ನಿರ್ದೇಶಿಸಿದರು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುವಾಗುವಂತೆ ಕೊಠಡಿಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು, ಯಾವುದೇ ಗೊಂದಲ, ಭಯ ಉಂಟಾಗದಂತೆ ಪರೀಕ್ಷಾ ಆತಂಕ ದೂರ ಮಾಡಬೇಕು, ಯಾವುದೇ ಲೋಪ ದೋಷವಿಲ್ಲದೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದರಲ್ಲದೆ, ಪರೀಕ್ಷೆ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಬೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ರಂಗಧಾಮಯ್ಯ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಸರ್ಕಾರಿ, ವಸತಿ ಶಾಲೆ, ಅನುದಾನಿತ, ಅನುದಾನ ರಹಿತ ಸೇರಿದಂತೆ ಒಟ್ಟು 752 ಶಾಲೆಗಳಿದ್ದು, 2024ರ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಟ್ಟು 36642 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದೊಳಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 48 ಮಾರ್ಗಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

ನಿಷೇದಾಜ್ಞೆ ಜಾರಿ
ಜಿಲ್ಲೆಯಾದ್ಯಂತ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗಳನ್ನು ಸುಸೂತ್ರವಾಗಿ, ಲೋಪದೋಷವಿಲ್ಲದಂತೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಮತ್ತ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.
ನಿಷೇಧಾಜ್ಞೆಯು ಮಾರ್ಚ್ 25 ರಿಂದ ಏಪ್ರಿಲ್ 6 ರ ವರೆಗೆ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆವರೆಗೆ ಜಾರಿಯಲ್ಲಿರುತ್ತದೆ, ನಿಷೇಧಾಜ್ಞೆಯನ್ವಯ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ರಾಕ್ಸ್ ಮತ್ತು ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು, ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಅನಧಿಕೃತ ವ್ಯಕ್ತಿಗಳು ಯಾರೂ ನಿರ್ಬಂಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ, ನಿಷೇಧಾಜ್ಞೆ ಉಲ್ಲಂಸಿ ನಿರ್ಬಂದಿತ ಪ್ರದೇಶದೊಳಗೆ ಪ್ರವೇಶಿಸುವ ಅನಧಿಕೃತ ವ್ಯಕ್ತಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಎಂದು ಕಂಡು ಬಂದಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 107 ಮತ್ತು 110ರಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪರೀಕ್ಷಾ ವೇಳಾಪಟ್ಟಿ

ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ವೇಳಾಪಟ್ಟಿಯನ್ವಯ ಮಾರ್ಚ್ 25ರಂದು ಪ್ರಥಮ ಭಾಷೆಯಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ, ಮಾ.27 ರಂದು ಸಮಾಜ ವಿಜ್ಞಾನ, ಮಾ.30 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಏ.2ರಂದು ಗಣಿತ, ಸಮಾಜ ಶಾಸ್ತ್ರ, ಏ.3 ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-4 ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್-4, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- 4, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಹಾಗೂ ಅರ್ಥಶಾಸ್ತ್ರ, ಏ.4 ರಂದು ತೃತೀಯ ಭಾಷೆಯಾದ ಹಿಂದಿ, ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ,ತುಳು ಹಾಗೂ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಅಪರೆಲ್ ಮೇಡ್ ಅಪ್ಸ್ ಮತ್ತು ಹೋಂ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್, ಏ.6ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ವಿಷಯಗಳ ಪರೀಕ್ಷೆ ನಡೆಯಲಿದೆ.

Get real time updates directly on you device, subscribe now.

Comments are closed.

error: Content is protected !!