ಕಡ್ಡಾಯ ಮತದಾನಕ್ಕೆ ಅರಿವು ಅಗತ್ಯ: ಸಿಇಒ

44

Get real time updates directly on you device, subscribe now.


ತುಮಕೂರು: ದೇಶದ ಎಲ್ಲಾ ನಾಗರಿಕರು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ, ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಮತ ಜಾಗೃತಿ ಹಾಗೂ ರೇಷ್ಮೆ ಬೆಳೆಗಾರರ ಜಾಥಾ ಹಾಗೂ ತಾಂತ್ರಿಕ ಸಂವಾದದಲ್ಲಿ ಮಾತನಾಡಿ, ದೇಶದಲ್ಲಿ ಮತದಾನ ಕಡ್ಡಾಯವಾಗಿಲ್ಲ, ಆದರೂ ಚುನಾವಣಾ ಆಯೋಗ ಮತದಾನ ಜಾಗೃತಿಯನ್ನು ತನ್ನ ಧ್ಯೇಯನ್ನಾಗಿ ಅಳವಡಿಸಿಕೊಂಡು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಸದೃಢ ದೇಶ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಕಾರ್ಯಕ್ರಮ ರೂಪಿಸಿದೆ ಎಂದರು.

ಪ್ರಪಂಚದ ಶೇ.50 ರಷ್ಟು ದೇಶಗಳು ಪ್ರಜಾ ಪ್ರಭುತ್ವವನ್ನು ಒಪ್ಪಿಕೊಂಡಿದ್ದು, ಭಾರತ ಇಂದು ಬೃಹತ್ ಪ್ರಜಾ ಪ್ರಭುತ್ವ ಹೊಂದಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ನಮ್ಮ ಜವಾಬ್ದಾರಿ ಅರಿತು ಅದನ್ನು ಪಾಲನೆ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಆದರ್ಶ ನೀಡಬಹುದು ಎಂದರು.
ಈ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಮತದಾರರಿಗೆ, ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು, ಮತದಾನ ಹೆಚ್ಚಳ ಮಾಡುವ ಮೂಲಕ ಸದೃಢ ವ್ಯವಸ್ಥೆಗಾಗಿ ಉತ್ತಮ ವ್ಯಕ್ತಿಯನ್ನು ಆರಿಸುವ ಪಣತೊಡೋಣ ಎಂದು ಕರೆ ನೀಡಿದರು.
ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗೆ ನಿರಂತರವಾಗಿ ತಾಂತ್ರಿಕ ಅರಿವು ಮೂಡಿಸುವಲ್ಲಿ ಜಿಲ್ಲೆ ಮುಂದಿದೆ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ, ಬಹುವಿಧ ಬೆಳೆಗಳ ಮೂಲಕ ರೈತರು ಆರ್ಥಿಕ ಕ್ಷಮತೆ ಹೆಚ್ಚಿಸಿ ಕೊಳ್ಳಬಹುದಾಗಿದ್ದು, ಬಯೋಟ್ರಿಯನ್ ಉತ್ಪಾದನೆಯಲ್ಲಿ ರಾಜ್ಯಕ್ಕೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದರು.

ನರೇಗಾ, ಹನಿ ನೀರಾವರಿ ಸೇರಿದಂತೆ ತಾಂತ್ರಿಕ ವಿಚಾರದಲ್ಲಿಯೂ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿರುವುದಕ್ಕೆ ರೈತರು ಮತ್ತು ಇಲಾಖೆಗಳ ನಡುವಿನ ಒಡನಾಟ ಕಾರಣವಾಗಿದ್ದು, ಒಂದು ಕುಟುಂಬದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ರೇಷ್ಮೇ ಭೂಮಿ ವಿಸ್ತೀರ್ಣಕ್ಕೆ ಅವಕಾಶವಿದ್ದು, ಸರ್ಕಾರದ ಯೋಜನೆಗಳನ್ನೇ ಸದ್ಭಳಕೆ ಮಾಡಿಕೊಳ್ಳಲು ರೈತರು ಮುಂದಾದರೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯಲಿದೆ, ರೇಷ್ಮೆ ಉತ್ಪನ್ನಗಳ ಮೌಲ್ಯವರ್ಧನೆ ಕಡೆಗೆ ಇಲಾಖೆ ಮುತುವರ್ಜಿ ವಹಿಸಬೇಕೆಂದು ಕರೆ ನೀಡಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಪ್ರಜಾ ಪ್ರಭುತ್ವದಲ್ಲಿ ಚುನಾವಣೆಗೆ ಪ್ರಾಮುಖ್ಯತೆ ಹೆಚ್ಚಿದ್ದು, ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ರೇಷ್ಮೆ ಬೆಳೆಗಾರರು ವಿಜ್ಞಾನಿಗಳೊಂದಿಗೆ ಸಂವಾದ ಮಾಡುವ ಮೂಲಕ ರೇಷ್ಮೆ ಬೆಳೆ ಕಾಪಾಡುವ ನಿಟ್ಟಿನಲ್ಲಿ ಅವಶ್ಯಕವಾಗಿರುವ ತಾಂತ್ರಿಕ ಅರಿವು ಮೂಡಿಸಲು ತಾಂತ್ರಿಕ ಕಾರ್ಯಾಗಾರ ಅವಶ್ಯಕವಾಗಿದ್ದು, ರೈತರು ಕಾರ್ಯಾಗಾರದ ಸದುಪಯೋಗ ಪಡೆಯಬೇಕೆಂದರು.

ಸಮಾರಂಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಉಪ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಚೇತನಾ, ರೇಷ್ಮೆ ಬೆಳೆಗಾರ ಸ್ವಾಮಿ ಸೇರಿದಂತೆ ಇತರರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಮತಜಾಗೃತಿ ಕುರಿತು ಕಿರು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು, ನಗರದ ಬಿಜಿಎಸ್ ವೃತ್ತದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ವರೆಗೆ ರೇಷ್ಮೆ ಬೆಳೆಗಾರರ ಜಾಥಾ ಹಮ್ಮಿಕೊಂಡು ಮತ ಜಾಗೃತಿ ಮೂಡಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!