ಸಂಶೋಧನೆ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಿ

21

Get real time updates directly on you device, subscribe now.


ತುಮಕೂರು: ಸಂಶೋಧನೆ ಆಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟು, ಸ್ವಯಂ ಉದ್ಯೋಗ ಪ್ರೋತ್ಸಾಹಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಉದ್ದೇಶ ಎಂದು ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ ತಿಳಿಸಿದರು.
ವಿವಿ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕ್ರೀಡೆ, ಯೋಗ ಮತ್ತು ಆರೋಗ್ಯದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಭಾವ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟು ಬಹುಶಿಸ್ತೀಯ ವಿಧಾನವನ್ನು ಪ್ರೋತ್ಸಾಹಿಸುತ್ತದೆ, ಸಂಶೋಧನೆಗಳಿಂದ ಅಭಿವೃದ್ಧಿ ಎಂಬ ಗುರಿ ಹೊಂದಿರುವ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳು ಇಚ್ಛೆಯ ಅನುಸಾರ ವಿಷಯಗಳನ್ನು ಆರಿಸಿಕೊಂಡು ಆಳವಾದ ಸಂಶೋಧನೆ ನಡೆಸುವ ಅವಕಾಶವಿದೆ ಎಂದರು.

ದೈಹಿಕ ಶಿಕ್ಷಣ ಮತ್ತು ಕ್ರೀಡೆ ಜೀವನ ಶೈಲಿಯ ಬದಲಾವಣೆ, ಕೌಶಲ್ಯಾಧಾರಿತ ಶಿಕ್ಷಣ, ಆರೋಗ್ಯ ವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ, ಶಿಕ್ಷಣ ತಜ್ಞರು ನಿಶ್ಚಲವಾಗದೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ದೊಡ್ಡ ಆಯಾಮಗಳಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಂವಹನ ಕೌಶಲ್ಯವಿರಬೇಕು, ಗುಣಮಟ್ಟದ ಬರೆವಣಿಗೆ ಮತ್ತು ಓದುವ ಕೌಶಲ್ಯವನ್ನು ನಿತ್ಯಅಭ್ಯಾಸ ಮಾಡಬೇಕು, ಸ್ವಯಂ ವಿಶ್ವಾಸಾರ್ಹವಾಗಿಸುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆಯ ಪರ್ವವನ್ನು ಕೆಲವೇ ವರ್ಷಗಳಲ್ಲಿ ಸೃಷ್ಟಿಸಲಿದೆ ಎಂದು ಹೇಳಿದರು.

ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪೋಷಕರು ಮಕ್ಕಳನ್ನು ಕ್ರೀಡಾ ಕ್ಷೇತ್ರಕ್ಕೆ ಕಳುಹಿಸುವ ಮನಸ್ಸು ಮಾಡುತ್ತಿಲ್ಲ, ಪರದೆ ಆಧಾರಿತ ಚಟುವಟಿಕೆಗಳು ಮಾತ್ರ ನಡೆಯುತ್ತಿವೆ, ಯಾವುದೇ ದೈಹಿಕ ಚಟುವಟಿಕೆ ಇಲ್ಲವಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ, ಪಾಲಕರು ಅಧ್ಯಯನದಲ್ಲಿ ಮಕ್ಕಳ ಆಶಯಗಳತ್ತ ಗಮನ ಹರಿಸಬೇಕು ಎಂದರು.

ಕ್ರೀಡೆ ಮತ್ತು ದೈಹಿಕ ಶಿಕ್ಷಣದಿಂದ ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ, ಬದುಕನ್ನು ಎದುರಿಸುವ ಆತ್ಮ ವಿಶ್ವಾಸ ಮೂಡುತ್ತದೆ, ಶೀಘ್ರದಲ್ಲೇ ವಿವಿಯಲ್ಲಿ ಯೋಗ ಡಿಪ್ಲೊಮಾ ಕೋರ್ಸ್ ತೆರೆಯಲು ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಕ್ರೀಡೆ, ಯೋಗ ಮತ್ತು ಆರೋಗ್ಯದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಭಾವ ಕುರಿತ 70 ಸಂಶೋಧನ ಪ್ರಬಂಧಗಳು ಮಂಡನೆಯಾದವು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎ.ಎಂ. ಮಂಜುನಾಥ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!