ತುಮಕೂರು: ಬರ ಪರಿಹಾರದ ಹಣ ಬಿಡುಗಡೆಗೆ ಎನ್ ಡಿಆರ್ ಎಫ್ ನಲ್ಲಿ ತನ್ನದೆ ಆದ ನಿಯಮಗಳಿದ್ದು, ರಾಜ್ಯ ವಿಟಲೈಜ್ ಸರ್ಟಿಫಿಕೇಟ್ ನೀಡದ ಹೊರತು ಅನುದಾನ ಬಿಡುಗಡೆ ಅಸಾಧ್ಯ ಎಂದು ತುಮಕೂರು ನಗರ ಶಾಸಕ ಬಿ.ಜಿ.ಜೋತಿಗಣೇಶ್ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಎಲ್ಲಾ ಸರಕಾರಗಳೂ ಇದೇ ನಿಯಮ ಅನುಸರಿಸಿಕೊಂಡು ಬಂದಿವೆ, ಹಾಗಾಗಿ ಮೊದಲು ರಾಜ್ಯ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿ, ವಿನಾಕಾರಣ ಕೇಂದ್ರ ಸರಕಾರವನ್ನು ದೂರುವುದು ಸರಿಯಲ್ಲ ಎಂದರು.
ಹಾಲಿ ಸಂಸದರು ಜಿಲ್ಲೆಗೆ ಯಾವ ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಮುಂದಿನ ಸೋಮವಾರ ನಡೆಯುವ ಸಮಾರಂಭದಲ್ಲಿ ಅಂಕಿ ಅಂಶಗಳ ಸಮೇತ ಬಿಡುಗಡೆ ಮಾಡಲಿದ್ದಾರೆ, ಹಿಂದೆ ತಂದಿರುವ ಅನುದಾನ, ಅನುಷ್ಠಾನಗೊಂಡಿರುವ ಯೋಜನೆಗಳು, ಮುಂದೆ ತರಲಿರುವ ಯೋಜನೆಗಳ ಕುರಿತು ಸೋಮಣ್ಣ ಅವರು ಎಲ್ಲ ವಿವರ ಹಂಚಿಕೊಳ್ಳಲಿದ್ದಾರೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಕೃಷಿ ಕ್ಷೇತ್ರವನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ, ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ಕೃಷಿಕರು ಕೈ ಕಟ್ಟಿಕುಳಿತಿದ್ದಾರೆ, ರಾಗಿ ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲದೆ ಬೆಂಬಲ ಬೆಲೆ ಸರಿಯಾಗಿ ನಿಗದಿಯಾಗದೇ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಕೃಷಿ ಚಟುವಟಿಕೆಗೆ ಸರಿಯಾದ ಗಮನ ಕೊಡದ ರಾಜ್ಯ ಸರಕಾರ ಕೇವಲ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಕಾಲಹರಣ ಮಾಡುತ್ತಿದೆ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲ, ಜಾನುವಾರುಗಳಿಗೆ ಮೇವು ಇಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗಿದೆ, ಜನ ಸಮಾನ್ಯರಿಗೆ ಕುಡಿಯಲು ನೀರು ಇಲ್ಲ, ಹೊಸ ಬೋರ್ ಕೊರೆಯಲು ಅವಕಾಶ ಇಲ್ಲ, ಈ ರೀತಿಯಾದ ಸಂಕಷ್ಟದ ಸುಳಿಯಲ್ಲಿ ರಾಜ್ಯ ಸಿಲುಕಿದೆ, ಈ ಸಮಸ್ಯೆ ನಿಭಾಯಿಸುವ ಬದಲು ಮೋದಿವರನ್ನು ಟೀಕಿಸುತ್ತಾ ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಸುಮಾರು 800 ಜನ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಸರಕಾರದ ನೀತಿಗಳು ಇದೇ ರೀತಿ ಮುಂದುವರೆದರೆ ಮತ್ತಷ್ಟು ರೈತರು ಅದೇ ದಾರಿ ಹಿಡಿಯಲಿದ್ದಾರೆ, ಕುಡಿಯುವ ನೀರು, ಜನ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ, ಒಂದೇ ಒಂದು ಗೋಶಾಲೆ ತೆರೆದಿಲ್ಲ, ಆಡಳಿತ ಪಕ್ಷದ ಶಾಸಕರಾಗಲಿ, ಸಚಿವರಾಗಲಿ ಗ್ರಾಮೀಣ ಭಾಗಗಳಿಗೆ ಹೋಗಿ ಜನರ ಕಷ್ಟ ಸುಖ ಆಲಿಸುತ್ತಿಲ್ಲ, ಜನ ತಿರುಗಿ ಬೀಳುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಿವಪ್ರಸಾದ್ ಹರಿಹಾಯ್ದರು.
ಮೋದಿ ನೇತೃತ್ವದಲ್ಲಿ ಕೃಷಿ ಸಮ್ಮಾನ್ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ, ಆದರೂ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರ ಕೃಷಿಯನ್ನು ನಿರ್ಲಕ್ಷಿಸಿದೆ ಎಂದು ಹೇಳುತ್ತಿದ್ದು, ಈ ಮಾತನ್ನು ಹೇಳಲು ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು,
ದೇಶದ ಕೃಷಿಕರು ಸಾಮಾನ್ಯ ಜನರು ಇವುಗಳೆಲ್ಲವನ್ನು ಗಮನಿಸುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಜೆ.ಜಗದೀಶ್, ಮುಖಂಡರಾದ ಟಿ.ಆರ್.ಸದಾಶಿವಯ್ಯ, ವೇದಮೂರ್ತಿ, ಸತ್ಯಮಂಗಲ ಜಗದೀಶ್ ಇತರರು ಇದ್ದರು.
Comments are closed.