ದೇಶದ ಅಭಿವೃದ್ಧಿಗೆ ಶ್ರಮಿಸಲು ಬಂದಿದ್ದೇನೆ

ನಾನು ರಾಜಕಾರಣಿಯಾಗಲು ರಾಜಕೀಯಕ್ಕೆ ಬಂದಿಲ್ಲ: ಮಂಜುನಾಥ್

28

Get real time updates directly on you device, subscribe now.


ಕುಣಿಗಲ್: ನಾನು ರಾಜಕಾರಣಿಯಾಗಲು ರಾಜಕೀಯಕ್ಕೆ ಬಂದಿಲ್ಲ, ರಾಷ್ಟ್ರಕಾರಣಿಯಾಗಿ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಬಂದಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಹೇಳಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ತಾಲೂಕು ಜೆಡಿಎಸ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮುಖಂಡರು, ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಟೀಕೆಗಳು ಸಾಯುತ್ತವೆ, ನಾವು ಮಾಡುವ ಸಾಧನೆ ಸದಾ ಜನಮನದಲ್ಲಿ ಹಸಿರಾಗಿರುತ್ತದೆ, ಚುನಾವಣೆ ಸೇತುವಂತೆ ಇರಬೇಕು ಹೊರತು ಗೋಡೆಗಳಂತೆ ಇರಬಾರದು, ಮನಸುಗಳನ್ನು ಬೇರೆ ಮಾಡಬಾರದು ಒಗ್ಗೂಡಿಸಬೇಕು, ತಾವು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾದ ಹಿನ್ನೆಲೆಯಲ್ಲಿ ಡಿ.ನಾಗರಾಜಯ್ಯ ಹಾಗೂ ಸಹೋದರ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಒಗ್ಗೂಡುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ, ನಾನಾಗಿ ರಾಜಕೀಯಕ್ಕೆ ಬಂದಿಲ್ಲ, ರಾಜಕೀಯ ನನ್ನನ್ನು ಎಳೆದು ತಂದಿದೆ ಎಂದರು.

ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತಷ್ಟು ಶಕ್ತಿ ತುಂಬಲು, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರಲು, ಬಡಜನತೆ, ಯುವ ಜನತೆ, ರೈತರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ರಾಜಕೀಯಕ್ಕೆ ಬಂದಿದ್ದು ತಾವು ರಾಜಕೀಯ ಮಾಡೊಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಅವರು ತಾವು ವೈದ್ಯರಾಗಿ ಸೇವೆ ಸಲ್ಲಿಸುವಾಗ ಮೊದಲು ಚಿಕಿತ್ಸೆ ನಂತರ ಹಣ, ಹಾಗೆಯೇ ಈಗ ಮತದಾರರಲ್ಲಿ ಮನವಿ ಮಾಡುವುದು ಮೊದಲು ಮತ ನೀಡಿ ನಂತರ ನಿರಂತರ ಉತ್ತಮ ಸೇವೆ ಪಡೆಯಿರಿ ಎಂದು ಮನವಿ ಮಾಡುತ್ತೇನೆ, ಬೇರೆಯವರು ಚುನಾವಣೆಯಲ್ಲಿ ಆಮೀಷ ನೀಡುತ್ತಾರೆ, ಆಮೀಷ ಎಂಬುದು ವಿಷ ಇದ್ದಂತೆ, ಅದರಿಂದ ಸಮಸ್ಯೆಗಳು ಹೆಚ್ಚು ಎಂದ ಅವರು ಬಿಜೆಪಿ- ಜೆಡಿಎಸ್ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಈ ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ತಮ್ಮನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಈಬಾರಿ ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಧರ್ಮ ಹಾಗೂ ಅಧರ್ಮದ ನಡುವೆ ಚುನಾವಣೆ ನಡೆಯುತ್ತಿದ್ದು, ಸಹೃದಯಿ, ಜನಪರ ವ್ಯಕ್ತಿತ್ವದ, ಸಜ್ಜನರಾದ ಡಾ.ಮಂಜುನಾಥ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೂಲಕ ಮತದಾರರು ಧರ್ಮಪರ ನಿಲ್ಲಬೇಕಿದೆ, ಮತದಾರರು ಚುನಾವಣೆ ಸಮಯದಲ್ಲಿ ಐದು ಸಾವಿರ ರೂ.ನ ಕೂಪನ್ ಕಾರ್ಡ್ ಎಂದು ನಕಲಿ ಕಾರ್ಡ್ ನೀಡಿ ಜನರ ದಾರಿ ತಪ್ಪಿಸುವ ಕಾಂಗ್ರೆಸ್ ಪಕ್ಷದವರ ಬಗ್ಗೆ ಎಚ್ಚರದಿಂದ ಇರಬೇಕು, ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರಿದ್ದು ಈ ಬಾರಿ ಹೃದಯವಂತ ವೈದ್ಯರನ್ನು ಆಯ್ಕೆ ಮಾಡುವ ಮೂಲಕ ಇಡೀ ದೇಶವೆ ಮೆಚ್ಚುವಂತೆ ಮಾಡಬೇಕೆಂದರು.

ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ನಾನು ಹಾಗೂ ನನ್ನ ತಮ್ಮ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಇಬ್ಬರೂ ಒಂದಾಗಲು ಕಳೆದ ಹತ್ತು ವರ್ಷಗಳಿಂದ ಒಮ್ಮತವಾಗಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸಿದ ಕುತಂತ್ರದಿಂದ ಸಾಧ್ಯವಾಗಿರಲಿಲ್ಲ, ಈಬಾರಿ ಇಬ್ಬರೂ ಒಂದಾಗಿ ಚುನಾವಣೆ ನಡೆಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗಿಂತ ಹೆಚ್ಚಿನ ಮತ ಮೈತ್ರಿ ಅಭ್ಯರ್ಥಿಗೆ ಬರುವಂತೆ ಮಾಡುತ್ತೇವೆ, ಕಾರ್ಯಕರ್ತರು ತಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯ ಬಿಟ್ಟು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದರು.
ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು ಮಾತನಾಡಿ, ಕಾಂಗ್ರೆಸ್ ನವರು ಜೆಡಿಎಸ್ ಬಗ್ಗೆ ಕುಟುಂಬ ರಾಜಕಾರಣ ಎಂದು ಟೀಕೆ ಮಾಡಿದ್ದಲ್ಲದೆ ಡಿಸಿಎಂ ಹಾಗೂ ಅವರ ಸಹೋದ ಡಾ.ಮಂಜುನಾಥ ಅವರ ಬಗ್ಗೆ ಹೇಳಲು ಏನು ಇಲ್ಲದೆ ಅವರ ವಿರುದ್ಧ ಕುಟುಂಬ ರಾಜಕಾರಣ ಎಂದು ಟೀಕೆ ಮಾಡಿದ್ದರು, ಆದರೆ ಈಗ ಇದೆ ಕಾಂಗ್ರೆಸ್ ಪಕ್ಷ ರಾಜ್ಯದ 22 ಲೋಕಸಭೆ ಕ್ಷೇತ್ರದ ಪೈಕಿ 12 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರ ಸಂಬಂಧಿಗಳನ್ನೆ ಕಣಕ್ಕಿಳಿಸಿದ್ದಾರೆ, ಇದಕ್ಕೆ ಏನು ಹೇಳಬೇಕು ಎಂದರು.

ಮಾಜಿ ಶಾಸಕ ಎ.ಮಂಜು ಮಾತನಾಡಿ, ಮಾಗಡಿ ಶಾಸಕ ಬಾಲಕೃಷ್ಣ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಹೃದ್ರೋಗ ತಜ್ಞ ಡಾ.ಮಂಜುನಾಥ್ ವೈದ್ಯಕೀಯ ವೃತ್ತಿ ಮಾಡಿಕೊಂಡಿರಲಿ ಎಂದು ಹೇಳುತ್ತಾರೆ, ಅದೆ ಇವರ ಸಹೋದ್ಯೋಗಿ ಕುಣಿಗಲ್ ಶಾಸಕ ಡಾ.ರಂಗನಾಥ್ ಇನ್ನು ವಯಸ್ಸಲ್ಲೆ ಇದ್ದು ವೈದ್ಯರಾಗಿದ್ದಾರೆ, ಇವರಿಗೆ ಏಕೆ ಆ ಮಾತು ಹೇಳೊಲ್ಲಾ, ಡಾ.ಮಂಜುನಾಥ್ ಪೂರ್ಣಾವಧಿ ಸೇವೆ ಮಾಡಿ ಜನಸೇವೆಗೆ ರಾಜಕೀಯಕ್ಕೆ ಬಂದಿದ್ದಾರೆ, ವಿರೋಧಿಗಳ ಹಾಗೆ ಬಂಡೆ, ರಿಯಲ್ ಎಸ್ಟೇಟ್, ಕಿಕ್ ಬ್ಯಾಕ್ ದಂಧೆ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದರು.
ಎಂಎಲ್ಸಿ ದೇವೆಗೌಡ, ಮಾಜಿ ಶಾಸಕ ತಿಮ್ಮರಾಯಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಾಂಜನಪ್ಪ, ಮುಖಂಡರಾದ ಎ.ಪಿ.ರಂಗನಾಥ್, ಅಯಿಶಾಬೀ, ಲಿಯಾಖತ್, ಹರೀಶ ನಾಯಕ, ಕಲ್ಲನಾಯಕನಹಳ್ಳಿ ಶಿವಣ್ಣ, ಪುಟ್ಟಸ್ವಾಮಿಗೌಡ, ತಮ್ಮಣ್ಣಗೌಡ, ಪ್ರಕಾಶ, ವಸಂತ, ಮಾರುತಿ, ದೀಪು, ಧನಂಜಯ, ಹರೀಶ್, ಶಿವಣ್ಣ, ಲೋಕೇಶ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!