ಶಿರಾ: ಶಿರಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ(84) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಕೊನೆಯ ಉಸಿರೆಳೆದಿದ್ದಾರೆ.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ಚಿರತೆಹಳ್ಳಿಯ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ, ರಾಜಕೀಯವಾಗಿ ಬೆಳೆದು ಒಮ್ಮೆ ಶಾಸಕರಾಗಿ ಮೂರು ಬಾರಿ ಸಂಸದರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಕೆಲಸ ನಿರ್ವಹಿಸಿದ ಕೀರ್ತಿ ಮೂಡಲಗಿರಿಯಪ್ಪ ರವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಸಿಪಿ ಮೂಡಲಗಿರಿಯಪ್ಪ 1985 ರಲ್ಲಿ ಮೊದಲ ಬಾರಿಗೆ ಶಿರಾ ಕ್ಷೇತ್ರದಿಂದ ಆಯ್ಕೆಗೊಂಡು ವಿಧಾನಸಭೆ ಪ್ರವೇಶಿಸಿದರು. ನಂತರ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಅವರು 1989, 1991 ಮತ್ತು 1998 ರಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿದ್ದರು.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಲಕ್ಷ್ಮಿದೇವಮ್ಮ, ಪುತ್ರ ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಮತ್ತು ಪುತ್ರಿ ಡಾ ಕವಿತಾ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಂಸ್ಕಾರ: ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿರಾ ನಗರದ ಕುಂಚಿಟಿಗರ ಸಂಘದ ಆಭರಣದಲ್ಲಿ ಶನಿವಾರ ಸಂಜೆ ಅವಕಾಶ ಕಲ್ಪಿಸಲಾಗಿತ್ತು. ಭಾನುವಾರ ಅವರ ಹುಟ್ಟೂರಾದ ಚಿರತಹಳ್ಳಿಯ ತೋಟದಲ್ಲಿ (ಗಣೇಶ ಗುಡಿ ಎಸ್ಟೇಟ್) ಬೆಳಗ್ಗೆ 10 ಗಂಟೆಯಿಂದ ಅಂತಿಮ ಸಂಸ್ಕಾರ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕ ಟಿ.ಬಿ. ಜಯಚಂದ್ರ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೂಡಲಗಿರಿಯಪ್ಪ ರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Comments are closed.