ಮಾ.28 ರಿಂದ ನಾಮಪತ್ರ ಸಲ್ಲಿಕೆ- ಸಕಲ ಸಿದ್ಧತೆ

ಓರ್ವ ಅಭ್ಯರ್ಥಿಗೆ 4 ನಾಮಪತ್ರ ಸಲ್ಲಿಸಲು ಅವಕಾಶ: ಡೀಸಿ

22

Get real time updates directly on you device, subscribe now.


ತುಮಕೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ- 2024ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವೇಳಾಪಟ್ಟಿ ಅನ್ವಯ ಮಾರ್ಚ್ 28 ರಿಂದ ಏಪ್ರಿಲ್ 4ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಓರ್ವ ಅಭ್ಯರ್ಥಿಗೆ ಗರಿಷ್ಠ 4 ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನಾಮಪತ್ರಗಳ ಪೂರ್ವ ಪರಿಶೀಲನೆ, ನಮೂನೆಗಳನ್ನು ಸಿದ್ಧಪಡಿಸುವುದು, ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡುವುದು ಸೇರಿದಂತೆ ಮತ್ತಿತರ ಪ್ರಕ್ರಿಯೆಗಳ ಬಗ್ಗೆ ಸಭೆ ನಡೆಸಿ ಮಾತನಾಡಿ, ನಾಮಪತ್ರವನ್ನು ಮಾರ್ಚ್ 28 ರಿಂದ ಏಪ್ರಿಲ್ 4ರ ವರೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳಿಂದ ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ 29ರ ಗುಡ್ ಫ್ರೈಡೆ ಹಾಗೂ ಮಾ.31ರ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರು ಯಾವುದೇ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರಬೇಕು, ಅಭ್ಯರ್ಥಿಯು 25 ವರ್ಷ ವಯೋಮಿತಿಯವರಾಗಿದ್ದು, ಭಾರತೀಯ ನಾಗರಿಕರಾಗಿರಬೇಕು, ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಓರ್ವ ಸೂಚಕರನ್ನು ಹೊಂದಲು ಅವಕಾಶವಿದ್ದು, ಈ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು, ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ 10 ಜನ ಸೂಚಕರು ಕಡ್ಡಾಯವಾಗಿ ಇರಬೇಕು, ಎಲ್ಲಾ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು ಎಂದು ತಿಳಿಸಿದರು.

ಓರ್ವ ಅಭ್ಯರ್ಥಿಯು ಗರಿಷ್ಠ 4 ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಒಂದು ನಾಮಪತ್ರದ ಜೊತೆ ಪೂರ್ಣ ಪ್ರಮಾಣದ ದಾಖಲಾತಿ ನೀಡಿದಲ್ಲಿ ಉಳಿಕೆ ನಾಮಪತ್ರಗಳಿಗೆ ಕೇವಲ ನಾಮಪತ್ರ ಮಾತ್ರ ಸಲ್ಲಿಸಿದರೆ ಸಾಕು, ನಾಮಪತ್ರ ಸ್ವೀಕರಿಸುವ ಕೋಣೆಯಲ್ಲಿ ಒಂದು ಸಿಸಿ ಟಿವಿ, ಒಂದು ಗೋಡೆ ಗಡಿಯಾರ (ಸರಿಯಾದ ವೇಳೆ ತೋರಿಸುವುದು) ಅಳವಡಿಸಲಾಗುವುದಲ್ಲದೆ ಹಾಗೂ ಓರ್ವ ವೀಡಿಯೋಗ್ರಾಫರ್ ನಿಯೋಜಿಸಲಾಗುವುದು ಎಂದು ತಿಳಿಸಿದರು.

ನಾಮಪತ್ರವನ್ನು ಅಭ್ಯರ್ಥಿಗಳು ಆನ್ ಲೈನ್ ಮೂಲಕವೂ ಸಲ್ಲಿಸಬಹುದು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯ ಜೊತೆ 4 ಜನಕ್ಕೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯ ಒಳಗೆ ಪ್ರವೇಶಾವಕಾಶವಿದ್ದು, ನಾಮಪತ್ರವನ್ನು ಅಭ್ಯರ್ಥಿ ಅಥವಾ ಸೂಚಕ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ಸ್ವೀಕರಿಸಬೇಕು, ಅಭ್ಯರ್ಥಿಯು ಪ್ರಮಾಣ ಸ್ವೀಕರಿಸಲು ಹಾಗೂ ಮತದಾರರ ಪಟ್ಟಿಯ ದೃಢೀಕೃತ ನಕಲು ಸಲ್ಲಿಸಲು ಏಪ್ರಿಲ್ 4ರ ವರೆಗೆ ಅವಕಾಶವಿರುತ್ತದೆ, ಠೇವಣಿ ಹಣವನ್ನು ಸಾಮಾನ್ಯ ಅಭ್ಯರ್ಥಿಗೆ 25,000 ರೂ, ಪ.ಜಾತಿ, ಪ.ಪಂಗಡದ ಅಭ್ಯರ್ಥಿಗೆ 12,500 ರೂ. ಗಳಿಗೆ ನಿಗದಿಪಡಿಸಲಾಗಿದೆ, ಇದನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಗದಾಗಿ ನೀಡಿ ರಸೀದಿ ಪಡೆಯಬೇಕು, ಈ ರಸೀದಿ ಹಾಗೂ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು ಎಂದು ತಿಳಿಸಿದರು.

ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಫಾರಂ- ಎ ಮತ್ತು ಫಾರಂ- ಬಿ ಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಂದರೆ ಏಪ್ರಿಲ್ 4 ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ ಸಲ್ಲಿಸಬೇಕು, ನಾಮಪತ್ರದ ಜೊತೆ ಇತ್ತೀಚಿನ ಅಂದರೆ ಮೂರು ತಿಂಗಳೊಳಗಿನ ಭಾವಚಿತ್ರ ಲಗತ್ತಿಸಬೇಕು, ಭಾವಚಿತ್ರವು 2+2.5 ಸೆ.ಮೀ ಇದ್ದು, ಹಿಂಭಾಗದಲ್ಲಿ ಬಿಳಿ ಬಣ್ಣದ್ದಾಗಿರಬೇಕು, ಕ್ಯಾಪ್, ಹ್ಯಾಟ್, ಡಾರ್ಕ್ ಸನ್ ಗ್ಲಾಸಸ್, ಯೂನಿಫಾರಂ ಇರುವ ಭಾವಚಿತ್ರಗಳಿಗೆ ಅವಕಾಶವಿರುವುದಿಲ್ಲ, ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಇದ್ದಲ್ಲಿ ಅದನ್ನು ಟಿವಿ ಮತ್ತು ದಿನಪತ್ರಿಕೆಗಳಲ್ಲಿ ಪ್ರಚುರಪಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಚುನಾವಣಾ ತಹಶೀಲ್ದಾರ್ ರೇಷ್ಮ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!