ಗುಬ್ಬಿ: ಚುನಾವಣಾ ಸಮಯದಲ್ಲಿ ಒಂದೊಂದು ವಿಷಯವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುವ ಬಿಜೆಪಿಯವರು ಈ ಬಾರಿ ಹಿಂದುತ್ವವನ್ನು ಅಸ್ತ್ರವನ್ನಾಗಿಸಿ ಕೊಂಡಿದ್ದಾರೆ, ಹಿಂದುತ್ವ ಕೇವಲ ಬಿಜೆಪಿಯರ ಸ್ವತ್ತಲ್ಲ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದರು.
ಶನಿವಾರ ಪಟ್ಟಣದ ಹೊರ ವಲಯದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಬಿಜೆಪಿಯವರದ್ದು ಗೂಡ್ಸೆ ಹಿಂದುತ್ವವಾಗಿದ್ದರೆ, ಕಾಂಗ್ರೆಸ್ ನವರದ್ದು ಗಾಂಧೀಜಿ ಹಿಂದುತ್ವವಾಗಿದೆ, ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿರುವ ನರೇಂದ್ರ ಮೋದಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದೆ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡದ ಪ್ರಧಾನಮಂತ್ರಿಯವರು ಹೊರಗಡೆ ಭಾರತ ಮಾತಾ ಕಿ ಜೈ ಎಂದು ಬೂಟಾಟಿಕೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕಾರ್ಪೋರೇಟ್ ಕಂಪನಿಗಳನ್ನು ಹೆದರಿಸಿ ಚುನಾವಣಾ ಬಾಂಡ್ ಪಡೆಯುವ ಮೂಲಕ ಬಿಜೆಪಿಯವರು ಬಾರಿ ಭ್ರಷ್ಟಾಚಾರ ಎಸಿಗಿದ್ದಾರೆ, ಬಿಜೆಪಿ ಮುಖಂಡರು ಪದೇ ಪದೇ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಎಸಗುತ್ತಿದ್ದಾರೆ, ಜನಸಾಮಾನ್ಯರ ಸಮಸ್ಯೆ ಬಗ್ಗೆ ಚಿಂತಿಸದ ಕೇಂದ್ರ ಸರ್ಕಾರಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು ಇಡೀ ದೇಶದಲ್ಲಿಯೇ ಬಿಜೆಪಿ ಸರ್ವನಾಶವಾಗಲಿದೆ ಎಂದು ಹೇಳಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಹೊರಗಿನ ಅಭ್ಯರ್ಥಿ, ಆದ್ದರಿಂದ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ಬೊಬ್ಬೆ ಇಡುತ್ತಿದ್ದರು, ಆದರೆ ಈ ಬಾರಿ ಅವರೇ ಹೊರಗಿನ ಅಭ್ಯರ್ಥಿಯನ್ನು ಕರೆ ತಂದಿದ್ದಾರೆ, ಜಿಲ್ಲೆಯ ಜನ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೆ ಗೌಡರಿಗೆ ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು.
ನಿಯೋಜಿತ ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, ಸಂಸದನಾಗಿದ್ದ ಅವಧಿಯಲ್ಲಿ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಮುಂದೆಯೂ ರೈತರ ಹಾಗೂ ಶೋಷಿತರ ಪರವಾಗಿದ್ದು ಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕಂಕಣ ಬದ್ಧನಾಗಿರುತ್ತೇವೆ, ಪಕ್ಷ ಹಾಗೂ ಜಿಲ್ಲೆಯ ಜನ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾವಗಡ ಶಾಸಕ ವೆಂಕಟೇಶ್, ತಿಪಟೂರು ಶಾಸಕ ಷಡಕ್ಷರಿ, ಮಾಜಿ ಶಾಸಕರಾದ ಕಿರಣ್ ಕುಮಾರ್, ರಫಿಕ್ ಅಹಮದ್, ಗೌರಿಶಂಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ತಾಲೂಕು ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ಮುರಳಿಧರ ಹಾಲಪ್ಪ, ಕೆ.ಆರ್.ತಾತಯ್ಯ, ನಿಖೇತ್ ರಾಜ್ ಮೌರ್ಯ, ಶಂಕರಾನಂದ, ಸೌಭಾಗ್ಯಮ್ಮ ಹುಲಿಕುಂಟೆ ಶಶಿಧರ್, ಪಟ್ಟಣ ಪಂಚಾಯಿತಿ ಸದಸ್ಯರು, ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.
Comments are closed.