ತುಮಕೂರು: ವಿಶ್ವಕ್ಕೆ ವೀರಶೈವ ಧರ್ಮ ಪರಿಚಯಿಸುವ ಮುಖಾಂತರ ಮಾನವ ಧರ್ಮಕ್ಕೆ ಒಳಿತಾಗಲಿ ಎಂಬ ಸಿದ್ಧಾಂತ ಸಾರಿದ ಧೀಮಂತ ಶಕ್ತಿ ಜಗದ್ಗುರು ರೇಣುಕಾಚಾರ್ಯರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಬಣ್ಣಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಶ್ರೀರೇಣುಕಾ ಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅದ್ವೈತ- ವಿಶಿಷ್ಟಾದ್ವೈತ ಸಿದ್ಧಾಂತ ಸಾರಿದಂತೆ ವೀರಶೈವ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮನುಷ್ಯನಿಗೆ ಮೂಲಭೂತವಾಗಿ ಒಳ್ಳೆಯದಾಗಬೇಕು, ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಹೊಂದಿದ್ದ ರೇಣುಕಾಚಾರ್ಯರು ಎಲ್ಲರಿಗೂ ಶಿವದೀಕ್ಷೆ ನೀಡಿದರು, 10ನೇ ಶತಮಾನದಲ್ಲಿ ಪಂಪ ನುಡಿದಂತೆ ಮಾನವ ಜಾತಿ ತಾನೊಂದೇ ಕುಲಂ ಎನ್ನುವ ಮಾತಿನಂತೆ ವಿಶ್ವ ಧರ್ಮಕ್ಕೆ, ವಿಶ್ವಮಾನವ ಶಾಂತಿಗೆ ಒಳಿತನ್ನು ಬಯಸಿದ ಕೀರ್ತಿ ರೇಣುಚಾರ್ಯರದ್ದು ಎಂದರು.
ವೀರಶೈವ ಧರ್ಮ ಸ್ಥಾಪಿಸುವ ನಿಟ್ಟಿನಲ್ಲಿ ರೇಣುಕಾಚಾರ್ಯರು ಎಲ್ಲಾ ಸಮುದಾಯಕ್ಕೆ ಶಿವಜ್ಞಾನ ಬಿತ್ತಲು ಪ್ರಯತ್ನಪಟ್ಟರು, ಸಹನೆ, ಸಹಬಾಳ್ವೆ, ಭ್ರಾತೃತ್ವದ ಮೂಲಕ ಮಾನವ ಧರ್ಮಕ್ಕೆ ಶುಭ ಕೋರಿದ ಧೀಮಂತ ವ್ಯಕ್ತಿಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಸಮುದಾಯದ ಮುಖಂಡರಾದ ಟಿ.ಆರ್.ಸದಾಶಿವಯ್ಯ ಮಾತನಾಡಿ, ಇಡೀ ಮಾನವ ಕುಲಕ್ಕೆ ಒಳಿತಾಗಬೇಕು ಎಂಬ ಉದ್ದೇಶದಿಂದ ಎಲ್ಲ ಸಮುದಾಯದಲ್ಲೂ ಶಿವಜ್ಞಾನ ಬಿತ್ತಲು ಪ್ರಯತ್ನಪಟ್ಟ ರೇಣುಚಾರ್ಯರು ವಿಶ್ವಮಾನವ ಶಾಂತಿಗೆ ಸದಾ ಶ್ರಮಿಸಿದವರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ರಾ.ವೀರೇಶ್ ಪ್ರಸಾದ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ರುದ್ರೇಶ್ ಶಾಸ್ತ್ರಿ ತೆವಡೆಹಳ್ಳಿ, ವೀರಣ್ಣ, ಅನುಸೂಯಮ್ಮ, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಅಧ್ಯಕ್ಷ ಕನ್ನಡ ಪ್ರಕಾಶ್, ಕನ್ನಡ ಸಂಸ್ಕೃತಿ ವೇದಿಕೆಯ ನಗರಾಧ್ಯಕ್ಷರಾದ ದಾನೇಶ್ವರಿ.ಡಿ, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೋಮಲ ವೀರಭದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ವಿ.ಸುರೇಶ್ಕುಮಾರ್, ಬಿ.ಕೆ.ರಾಜೇಶ್, ರಾಜೇಗೌಡ, ಎನ್.ರಮೇಶ್, ದರ್ಶನ್.ಎಸ್.ಎನ್. ಮತ್ತಿತರರು ಭಾಗವಹಿಸಿದ್ದರು.
Comments are closed.