ಕೊಬ್ಬರಿ ಖರೀದಿ ಕೇಂದ್ರ ತೆರೆಯದಿದ್ದರೆ ಹೋರಾಟ

ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ

46

Get real time updates directly on you device, subscribe now.


ತುಮಕೂರು: ಕಲ್ಪತರು ನಾಡಿನ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ಏಪ್ರಿಲ್ 05ರೊಳಗೆ ನಾಫೆಡ್ ಖರೀದಿ ಕೇಂದ್ರ ತೆರೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ವಿಜ್ಞಾನ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ 12 ಸಾವಿರ ರೂ. ಬೆಂಬಲ ಬೆಲೆ ಮತ್ತು ರಾಜ್ಯ ಸರಕಾರದ 1500 ಪ್ರೋತ್ಸಾಹ ಧನ ಸೇರಿ ಕ್ವಿಂಟಾಲ್ ಗೆ 13500 ರೂ. ಬೆಲೆಯಲ್ಲಿ ಕೊಬ್ಬರಿಗೆ ರೈತರು ನೋಂದಣಿ ಮಾಡಿ, ಕೊಬ್ಬರಿ ಸುಲಿದು ಕಾಯುತ್ತಿದ್ದರೂ ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ, ದಿನದಿಂದ ದಿನಕ್ಕೆ ಕೊಬ್ಬರಿಯ ತೂಕ ಕಡಿಮೆಯಾಗುವುದರ ಜೊತೆಗೆ ಕೌಟಾಗುವ ಸಾಧ್ಯತೆ ಹೆಚ್ಚಾಗಿದೆ, ಹಾಗಾಗಿ ಸರಕಾರ ಕೂಡಲೇ ನಾಫೆಡ್ ಖರೀದಿ ಕೇಂದ್ರ ತೆರೆಯದಿದ್ದರೆ ರೈತರು ಬೀದಿಗಿಳಿಯುವುದು ಅನಿವಾರ್ಯ ಎಂದರು.

ಕೊಬ್ಬರಿ ಬೆಲೆ ತೀವ್ರ ಕುಸಿತಕ್ಕೆ ಕೇಂದ್ರ ಸರಕಾರ ನೆರೆಯ ದೇಶಗಳಿಂದ ಸುಂಕ ರಹಿತವಾಗಿ ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿರುವುದೇ ಪ್ರಮುಖ ಕಾರಣವಾಗಿದೆ, ಕೂಡಲೇ ಆಮದು ನಿಲ್ಲಿಸಬೇಕು, ಹಾಗೆಯೇ ಕರ್ನಾಟಕ ರಾಜ್ಯ ಕೃಷಿ ಬೆಲೆ ನಿಗದಿ ಆಯೋಗದ ವರದಿಯಂತೆ 16730 ರೂ. ಕ್ವಿಂಟಾಲ್ ಗೆ ಮತ್ತು ಶೇ.50 ರ ಲಾಭ ಸೇರಿ ಕ್ವಿಂಟಾಲ್ ಗೆ 25 ಸಾವಿರ ರೂ. ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಗೋವಿಂದರಾಜು ತಿಳಿಸಿದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಸಂಪೂರ್ಣ ಹದಗೆಟ್ಟಿದ್ದು, ದಿನಕ್ಕೆ 7 ಗಂಟೆಗೆ ಸಮಪರ್ಕ ವಿದ್ಯುತ್ ನೀಡುವ ಭರವಸೆ ನೀಡಿದ್ದ ಸರಕಾರ, ದಿನಕ್ಕೆ ಒಂದು ಗಂಟೆಯೂ ನೀಡುತ್ತಿಲ್ಲ, ಬದಲಿಗೆ ದಿನ ಬಿಟ್ಟು ದಿನ ವಿದ್ಯುತ್ ಸರಬರಾಜು ಮಾಡುತ್ತಿದೆ, ಪರೀಕ್ಷಾ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಕಡಿತ ಮಾಡಿರುವುದರಿಂದ ಮಕ್ಕಳ ಅಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ, ಅಲ್ಲದೆ ರಾಜ್ಯ ಸರಕಾರ ಇನ್ನಮುಂದೆ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕಕ್ಕೆ ಪರಿಕರಗಳನ್ನು ನೀವೇ ಕೊಳ್ಳುವಂತೆ ಆದೇಶ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ, ಇಂತಹ ಹೊತ್ತಿನಲ್ಲಿ ಬೋರೆವೆಲ್ ಡಿಗ್ಗಿಂಗ್ ಮಾಡುವ ಬೋರೆವೆಲ್ ಲಾರಿ ಮಾಲೀಕರು ಏಕಾಏಕಿ ಅಡಿ ಕೊಳವೆ ಬಾವಿಗೆ 15-20 ರೂ. ಹೆಚ್ಚಳ ಮಾಡಿರುವುದು ರೈತರನ್ನು ಸಾಕಷ್ಟು ಸಂಕಷ್ಟಕ್ಕೆ ದೂಡಿದೆ, ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ, ಬೋರ್ ವೆಲ್ ಲಾರಿಗಳ ಮಾಲೀಕರು, ರೈತರ ಸಭೆ ನಡೆಸಿ ಕೂಡಲೇ ಹೆಚ್ಚಳ ಮಾಡಿರುವ ಬೆಲೆ ಕಡಿಮೆ ಮಾಡಬೇಕೆಂದು ಎ.ಗೋವಿಂದರಾಜು ಒತ್ತಾಯಿಸಿದರು.
ಜಿಲ್ಲೆಯಲ್ಲಿ ತೀವ್ರ ಬರವಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ, ಇದುವರೆಗೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಗೋಶಾಲೆ ತೆರೆದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ ಎಂದು ಹೇಳಿದರೂ ಪಿಡಿಓ ಮತ್ತು ತಹಶೀಲ್ದಾರ್ ಗಳು ಸಮರ್ಪಕವಾಗಿ ಹಣ ಬಿಡುಗಡೆ ಮಾಡದೆ ತೊಂದರೆ ಅನುಭವಿಸುವಂತೆ ಮಾಡಿದ್ದಾರೆ, ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ ಎಂದರು.

ಬೆಂಬಲ ಬೆಲೆ ಶಾಸನಾತ್ಮಕ ಕಾಯ್ದೆ ಜಾರಿ, ವಿದ್ಯುತ್ ಖಾಸಗಿ ಬಿಲ್ ಮಂಡನೆ ಸೇರಿದಂತೆ ರೈತ ವಿರೋಧಿ ನೀತಿಗಳ ವಿರುದ್ಧ ದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ರೈತರು ಪ್ರತಿಭಟಿಸುತಿದ್ದರೆ ಅವರು ದೆಹಲಿ ಪ್ರವೇಶಿಸದಂತೆ ಜಲ ಪಿರಂಗಿ, ತಡೆಗೋಡೆ, ತಂತಿ ಬೇಲಿಗಳ ಮೂಲಕ ತಡೆಯಲು ಹೊರಟಿರುವುದು ಖಂಡನೀಯ, ಸರಕಾರದ ಈ ಕ್ರಮ ವಿರೋಧಿಸಿ ಮಾರ್ಚ್ 14 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರೈತರ ಮಹಾ ಪಂಚಾಯತ್ ನಲ್ಲಿ ರೈತ, ಕಾರ್ಮಿಕ, ಬಡಜನರ ವಿರೋಧಿ ಬಿಜೆಪಿ ಸರಕಾರವನ್ನು ಈ ಬಾರಿ ಸೋಲಿಸುವಂತೆ ದೇಶದ ಜನರಿಗೆ ಕರೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಚಾರವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ರೈತ ಸಂಘ ಕೈಗೊಳ್ಳಲಿದೆ ಎಂದು ಎ.ಗೋವಿಂದರಾಜು ನುಡಿದರು.
ಬರ ಮತ್ತಿತರರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೃಷಿ ಕಾರ್ಮಿಕರ ನೆರವಿಗೆ ಬರುತ್ತಿದ್ದ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಕಳೆದ 7- 8 ತಿಂಗಳಿನಿಂದ ಕೂಲಿ ಹಣ ಬಿಡುಗಡೆಯಾಗಿಲ್ಲ, ಒಂದೆಡೆ ಬರದಿಂದ ತತ್ತರಿಸಿರುವ ಜನರಿಗೆ ಸರಕಾರ ಈ ನಡೆ ನುಂಗಲಾರದ ತುತ್ತಾಗಿದೆ, ಕೂಡಲೇ ಬಾಕಿ ಇರುವ ಕೂಲಿ ಹಣವನ್ನು ಸಂಬಂಧಪಟ್ಟವರ ಖಾತೆಗೆ ವರ್ಗಾಯಿಸಬೇಕೆಂದು ರೈತರ ಸಂಘದ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ದೊಡ್ಡಮಾಳಯ್ಯ, ವಿವಿಧ ತಾಲೂಕು ಅಧ್ಯಕ್ಷರಾದ ಲಕ್ಷ್ಮಣಗೌಡ, ವೆಂಕಟೇಗೌಡ, ನರಸಿಂಹ ಮೂರ್ತಿ, ರಂಗಹನುಮಯ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಚಿರತೆ ಚಿಕ್ಕಣ್ಣ, ಅರೆಹಳ್ಳಿ ಮಂಜುನಾಥ್, ಜಗದೀಶ್, ಶಿವಕುಮಾರ್, ತಿಪ್ಪೇಗೌಡ, ಮಹಮದ್ ಶಬ್ಬೀರ್, ಚಿಕ್ಕ ಬೋರೇಗೌಡ, ಸಿ.ಜಿ.ಲೋಕೇಶ್ ಮಹಿಳಾ ಮುಖಂಡರಾದ ಭಾಗ್ಯಮ್ಮ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!