ಕೊಳವೆ ಬಾವಿ ಕೊರೆಯಲು ಏಕ ದರ: ಡೀಸಿ

47

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯಲು ಏಕದರ (ಒಂದೇ ತೆರನಾದ) ನಿಗದಿಪಡಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವ ರಿಗ್ ಯಂತ್ರ ವಾಹನ ಮಾಲೀಕರು ಕೊಳವೆ ಬಾವಿ ಕೊರೆಯಲು ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ, ಕೊಳವೆ ಬಾವಿ ಕೊರೆಯಲು ಪ್ರತಿ ಅಡಿಗೆ ಈ ಹಿಂದೆ 90 ರಿಂದ 95 ರೂ. ವಿಧಿಸುತ್ತಿದ್ದ ರಿಗ್ ಮಾಲೀಕರು ಪ್ರಸ್ತುತ 115 ರಿಂದ 120 ರೂ. ವಸೂಲಿ ಮಾಡುತ್ತಿದ್ದಾರೆ, ವಸೂಲಿ ಮಾಡುತ್ತಿರುವ ಹೆಚ್ಚಿನ ದರ ಭರಿಸಲು ಕಷ್ಟವಾಗುತ್ತಿದೆ, ಬರ ಪರಿಸ್ಥಿತಿಯಲ್ಲಿ ದುಬಾರಿ ದರ ನೀಡಿ ಕೊಳವೆ ಬಾವಿ ಕೊರೆಸಲು ಸಾಧ್ಯವಾಗುತ್ತಿಲ್ಲವೆಂದು ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಕೊಳವೆ ಬಾವಿ ರಿಗ್ ಮಾಲೀಕರೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬರಿದಾಗಿವೆ, ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರ ಅನುಕೂಲಕ್ಕಾಗಿ ಕೊಳವೆ ಬಾವಿ ಕೊರೆಯಲು ಏಕದರ ನಿಗದಿಗಾಗಿ ಸಮಿತಿ ರಚಿಸಿ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಹಿರಿಯ ಭೂ ವಿಜ್ಞಾನಿ ನಾಗವೇಣಿ ಮಾತನಾಡಿ, ರಿಗ್ ಯಂತ್ರ ಮಾಲೀಕರು ನಿಗದಿತ ನಮೂನೆ 7ಎ ಮೂಲಕ ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂಬ ಕಡ್ಡಾಯ ನಿಯಮವಿದೆ, ಜಿಲ್ಲೆಯಲ್ಲಿ 18 ರಿಗ್ ಯಂತ್ರ ವಾಹನಗಳು ನೋಂದಣಿಯಾಗಿರುತ್ತವೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದಾಗ ಮುಂದುವರೆದು ಮಾತಾಡಿದ ಜಿಲ್ಲಾಧಿಕಾರಿ ನಿಗದಿತ ನಮೂನೆ 7ಎ ಮೂಲಕ ನೋಂದಣಿಯಾಗದ ರಿಗ್ ಯಂತ್ರ ಮಾಲೀಕರಿಗೆ ನಿಯಮಾನುಸಾರ ದಂಡ ವಿಧಿಸಬೇಕೆಂದು ನಿರ್ದೇಶನ ನೀಡಿದರು

ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ರಿಗ್ ಯಂತ್ರ ವಾಹನ ಮಾಲೀಕರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತುರ್ತಾಗಿ ನೀಡಬೇಕೆಂದು ಪ್ರಾದೇಶಿಕ ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.
ನಿಗದಿತ ನಮೂನೆಯಲ್ಲಿ ನೋಂದಣಿಯಾಗದೆ ಕೊಳವೆ ಬಾವಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್, ಕರ್ನಾಟಕ ವಿದ್ಯುತ್ ಪ್ರಸರಣ ಕಂಪನಿ ನಿಯಮಿತದ ಕಾರ್ಯ ನಿರ್ವಾಹಕ ಇಂಜಿನಿಯರ್, ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ, ಸಂಬಂಧಪಟ್ಟ ವಲಯದ ಸಹಾಯಕ ಆಯುಕ್ತರು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರದತ್ತಗೊಳಿಸಿ ಸರ್ಕಾರ ಪ್ರತ್ಯಾಯೋಜಿಸಿದ್ದು, ಅಧಿಕಾರ ಪ್ರತ್ಯಾಯೋಜಿಸಿರುವ ಅಧಿಕಾರಿಗಳು ನಿಯಮ ಮೀರಿ ಕೊಳವೆ ಬಾವಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಜಿಲ್ಲಾ ಮಟ್ಟದ ಸಮಿತಿಯು ನಿಗದಿಪಡಿಸಿದ ದರಕ್ಕೆ ಕೊಳವೆ ಬಾವಿ ಕೊರೆಯಲು ಬದ್ಧರಾಗಿರುತ್ತೇವೆಂದು ರಿಗ್ ಯಂತ್ರ ಮಾಲೀಕರು ಸಭೆಯಲ್ಲಿ ಅನುಮತಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ರವೀಶ್, ಜಂಟಿ ಕೃಷಿ ನಿರ್ದೇಶಕ ರಮೇಶ್, ರಿಗ್ ಯಂತ್ರ ಮಾಲೀಕರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!