ಮಳೆಗಾಗಿ ಮಕ್ಕಳ ಮದುವೆ ಮಾಡಿದ ಜನ

ಲಿಂಗಪ್ಪನ ಪಾಳ್ಯದಲ್ಲಿ ಗ್ರಾಮಸ್ಥರ ಸಂಭ್ರಮ- ಬಾರೋ ಬಾರೋ ಮಳೆರಾಯ

36

Get real time updates directly on you device, subscribe now.


ತುಮಕೂರು: ಹುಳಿಯಾರು: ಮಳೆ ಕೈ ಕೊಟ್ಟಾಗ ಮಳೆಗಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದು ಸಾಮಾನ್ಯ, ಆದರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಲಿಂಗಪ್ಪನಪಾಳ್ಯದಲ್ಲಿ ಮಕ್ಕಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಗಿದೆ, ಇಲ್ಲಿನ ಹುಡುಗ, ಹುಡುಗಿ ಮದುವೆ ಮಾಡಲಿಲ್ಲ, ಬದಲಾಗಿ ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಅಣುಕು ಮದುವೆ ಮಾಡಿ ಸಂಭ್ರಮಿಸಿದರು.
ಮಕ್ಕಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆಯಿಂದ ಅನೇಕ ವರ್ಷಗಳಿಂದ ಈ ಆಚರಣೆಯನ್ನು ಹಳ್ಳಿಗಳಲ್ಲಿ ಮಾಡಿಕೊಂಡು ಬರುತ್ತಿದ್ದಾರೆ, ಇದಕ್ಕಾಗಿ 9 ದಿನಗಳಿಂದ ನವಧಾನ್ಯಗಳನ್ನು ಮೊಳಕೆ ಬರಿಸಿ ಮದುವೆಯ ದಿನ ಶಾಸ್ತ್ರ ಮಾಡಲಾಯಿತು, ಗ್ರಾಮದ ನಿರಂಜನ್ ಎಂಬ ಬಾಲಕನಿಗೆ ಕಚ್ಚೆಪಂಚೆ, ಪೇಟ, ಬಾಸಿಂಗ ಹಾಕಿ ಮದು ಮಗನಾಗಿಯೂ, ದೀಕ್ಷಿತ್ ಎಂಬ ಬಾಲಕನನ್ನು ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿ ಮಧು ಮಗಳಾಗಿಯೂ ಮಾಡಿ ವಿವಿಧ ವಿವಾಹ ಶಾಸ್ತ್ರ ನೆರವೇರಿಸಲಾಯಿತು, ನಂತರ ಬ್ಯಾಂಡ್ ಸೆಟ್ ನೊಂದಿಗೆ ಊರು ತುಂಬ ಮೆರವಣಿಗೆ ನಡೆಸಿದರು.

ಥೇಟ್ ವಧು ವರರಂತೆ ಕಂಗೊಳಿಸುತ್ತಿದ್ದ ಇಬ್ಬರೂ ಬಾಲಕರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಆರತಕ್ಷತೆ ಸಹ ಮಾಡಿದರು, ಗ್ರಾಮದ ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು, ಕೆಲವರು ಹಣ ಮುಯ್ಯಿ ಮಾಡಿ ವರದಿಂದ ವಧುವಿನ ಹೆಸರು, ವಧುವಿನಿಂದ ವರನ ಹೆಸರು ಕೇಳಿ ಖುಷಿ ಪಟ್ಟರು, ಅಜ್ಜಿಯಂದಿರು ಸೋಬಾನೆ ಪದ ಹಾಡಿದರೆ, ಹುಡುಗಿಯರು ಡ್ಯಾನ್ಸ್ ಮಾಡಿ ಮದುವೆಯ ಕಳೆ ಹೆಚ್ಚಿಸಿದ್ದರು.
ಮದುವೆಗೆ ಬಂದಿದ್ದ ಮುತ್ತೆದೆಯರಿಗೆ ಅರಿಶಿನ, ಕುಂಕುಮ ಕೊಡುವ ಶಾಸ್ತ್ರ, ಪಾಲ್ಗೊಂಡ ಎಲ್ಲರಿಗೂ ಪಾಯಸದ ಅಡುಗೆ ಊಟ ಸಹ ಬಡಿಸಲಾಯಿತು, ಕೊನೆಗೆ ಎಲ್ಲರೂ ನೃತ್ಯ ಮಾಡಿ ಬಾರೋ ಮಳೆರಾಯ ಎಂದು ಕರೆದರು.
ರಿಯಾಲಿಟಿಯಲ್ಲಿ ಒಂದು ಗಂಡು-ಹೆಣ್ಣಿಗೆ ಯಾವ ರೀತಿ ಮದುವೆ ಮಾಡುತ್ತರೋ ಅದೇ ರೀತಿ ಶಾಸ್ತ್ರೋಕ್ತವಾಗಿ ಗ್ರಾಮದ ಜನರೆಲ್ಲಾ ಸೇರಿ ವಿಜೃಂಭಣೆಯಿಂದ ಮದುವೆ ಮಾಡಿ ಹಾಡುಗಳನ್ನಾಡಿ ಸಂಭ್ರಮಿಸಿದ್ದಾರೆ, ಊರಿನ ಜನರ ಈ ನಂಬಿಗೆ ಸುಳ್ಳಾಗದಿದ್ದರೆ ಬರದ ಛಾಯೆ ಮರೆಯಾಗಿ ವರ್ಷಧಾರೆಯ ಕೃಪೆಗೆ ಭೂರಮೆ ತಣ್ಣಗಾಗಲಿದೆ.

ಮೊದಲಿನಿಂದಲೂ ಈ ಸಂಪ್ರದಾಯವಿದೆ
ಮಳೆ ಬಾರದಿದ್ದಾಗ ಮಕ್ಕಳ ಮದುವೆ ಮಾಡುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ, ನಾವು ಮುಂದುವರೆಸುಕೊಂಡು ಹೋಗುತ್ತಿದ್ದೇವೆ, ಕೆಲ ವರ್ಷದ ಹಿಂದೆ ಹೀಗೆಯೇ ಮಳೆಯಾಗದೇ ಇದ್ದಾಗ ಬಾಲಕರ ಮದುವೆ ಮಾಡಿಸಿದ್ದೆವು, ನಂತರ ಮಳೆಯಾಗಿತ್ತು, ಈ ಬಾರಿಯೂ ಮಳೆ ಬರುವ ನಿರೀಕ್ಷೆ ಇಟ್ಟುಕೊಂಡು ಊರಿನವರೆಲ್ಲರೂ ಸೌಹಾದರ್ತೆಯಿಂದ ಬೆರೆತು ಈ ಆಚರಣೆ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಧುವರರಿಬ್ಬರೂ ಬಾಲಕರು
ಕಳೆದ ವರ್ಷ ಮಳೆಯಿಲ್ಲದೆ ಮುಂಗಾರು, ಹಿಂಗಾರು ಎರಡೂ ಕೈ ಕೊಟ್ಟಿತು, ಪರಿಣಾಮ ಭೂಮಿಯನ್ನೇ ನಂಬಿ ಜೀವನ ಮಾಡುತ್ತಿರುವ ರೈತರ ಪಾಡು ಹೇಳತೀರದಾಗಿದೆ, ಈ ವರ್ಷವೂ ಹವಮಾನ ಇಲಾಖೆ ಮಳೆಯಾಗುತ್ತದೆ ಎಂದು ಹೇಳಿದ್ದರೂ ಇಲ್ಲಿಯವರೆವಿಗೆ ಮಳೆಯ ಸುಳಿವಿಲ್ಲ, ಹಾಗಾಗಿ ಪೂರ್ವಿಕರು ಆಚರಿಸುತ್ತಿದ್ದ ಚಂದಮಾನ ಮದುವೆ ಮಾಡಿದ್ದೇವೆ ಎಂದು ರೈತ ಮೈಲಾರಪ್ಪ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!