ಕುಣಿಗಲ್: ರಾಜಕಾರಣ ಉದ್ದಿಮೆಯಾಗಬಾರದು, ಸೇವೆ ಮಾಡುವ ಕ್ಷೇತ್ರವಾಗಬೇಕು, ಚುನಾವಣೆಯಲ್ಲಿ ಮತ ಪವಿತ್ರವಾದದ್ದು, ಮತದಾರ ಮತ ಮಾರಾಟ ಮಾಡುವುದು ಅತ್ಯಂತ ಹೇಯ ಕೃತ್ಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ ಹೇಳಿದರು.
ಬುಧವಾರ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆ ಉದ್ಘಾಟಿಸಿ ಮಾತನಾಡಿ, ತಾವು ವೈದ್ಯಕೀಯ ಸೇವೆಯಲ್ಲಿದ್ದಾಗ ಮೊದಲು ಚಿಕಿತ್ಸೆ ನಂತರ ಹಣ ಪಾವತಿ ಎಂಬ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸೇವೆ ನೀಡಿದ್ದು ಇದೀಗ ಅನಿವಾರ್ಯವಾಗಿ ರಾಜಕೀಯ ಎಳೆದುಕೊಂಡು ಬಂದಿದ್ದು ಮೊದಲು ಮತ ನಂತರ ನಿರಂತರ ಸೇವೆ ಎಂದು ಪ್ರಾಮಾಣಿಕ ಸೇವೆ ನೀಡುತ್ತೇನೆ, ಹೇಮಾವತಿ ನೀರಿನ ಬಗ್ಗೆ ಚರ್ಚೆಯಾಗುತ್ತಿದೆ, ಆದರೆ ಜಲಾಶಯ ನಿರ್ಮಾಣ ಕತೃ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಚರ್ಚೆ ಮಾಡುವುದಿಲ್ಲ, 1962 ರಲ್ಲೆ ಡ್ಯಾಂ ನಿರ್ಮಾಣಕ್ಕೆ ಪ್ರಸ್ತಾಪಿಸಿದ ದೇವೇಗೌಡರು ಸಚಿವರಾಗಿ, ಮುಖ್ಯಮಂತ್ರಿಯಾಗಿ ಡ್ಯಾಂ ನಿರ್ಮಿಸಿ ಹಲವಾರು ಜಿಲ್ಲೆ ಜನರ, ರೈತರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ ಎಂದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ ಮಹಿಳಾ ಸಬಲೀಕರಣಕ್ಕೆ ದೇವೇಗೌಡರು ಶ್ರಮಿಸಿದರೆ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿದ ಪ್ರಧಾ ನಿಮೋದಿ ಸ್ತ್ರೀ ಸಬಲೀಕರಣಕ್ಕೆ ಶ್ರಮಿಸಿದ್ದಾರೆ, ಇವರ ಶಾಶ್ವತ ಕೊಡುಗೆಯನ್ನು ಮಹಿಳೆಯರು ಅರ್ಥ ಮಾಡಿಕೊಂಡು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ತಮಗೆ ಮತ ನೀಡಿ ಆಯ್ಕೆ ಮಾಡಬೇಕೆಂದರು.
ತಾಲೂಕು ಜೆಡಿಎಸ್ ವರಿಷ್ಠ ಮಾಜಿ ಸಚಿವ ಡಿ.ನಾಗರಾಜಯ್ಯ, ಇವರ ಸಹೋದರ ಬಿಜೆಪಿ ತಾಲೂಕು ವರಿಷ್ಠ ಡಿ.ಕೃಷ್ಣಕುಮಾರ್ ಇಬ್ಬರ ಕೈ ಎತ್ತಿ ಒಂದು ಗೂಡಿಸಿ ಯಾರೇ ಆಗಲಿ ಹೃದಯ, ಮನೆ, ಮನಸು ಜೋಡಿಸುವ ಕೆಲಸ ಮಾಡಬೇಕು, ಒಡೆಯುವ ಕೆಲಸ ಮಾಡಬಾರದೆಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಕೆಟ್ಟ ಘಳಿಗೆಯಲ್ಲಿ ನಮ್ಮ ಕುಟುಂಬ ಒಡೆದು ಹೋಗಿದ್ದು ಇದೀಗ ಒಂದಾಗಿದೆ, ಕಾರ್ಯಕರ್ತರು ವೈಮನಸ್ಸು, ಮನಸ್ತಾಪ ಮರೆತು ಮೈತ್ರಿ ಇಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪಕ್ಷದವರು ಯತ್ನಿಸುತ್ತಿದ್ದು, ಯಾವುದೇ ಮಾತಿಗೆ, ತಂತ್ರಕ್ಕೆ ಬಲಿಯಾಗದೆ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು, ಬಿಜೆಪಿ- ಜೆಡಿಎಸ್ ಒಂದಾಗಿದ್ದೇವೆ ಎಂದು ಮೈ ಮರೆತು ಕೂರಬಾರದು ಎಂದರು.
ಶಾಸಕ ಮುನಿರತ್ನ ಮಾತನಾಡಿ ಡಿಕೆಎಸ್ ಸಹೋದರರಿಗೆ ತಾಲೂಕಿನಲ್ಲಿ ಸಮರ್ಥ ಸ್ಪರ್ಧೆ ನೀಡಲು ಡಿ.ನಾಗರಾಜಯ್ಯ, ಸಹೋದರ ಡಿ.ಕೃಷ್ಣಕುಮಾರ್ ಇವರ ಶಕ್ತಿ ಸಾಕು, ಇಬ್ಬರನ್ನು ಒಂದು ಮಾಡಿದ್ದೇವೆ, ಡಿಕೆ ಬ್ರದರ್ಸ್ ನಂತೆ ಬೇರೆ ಮಾಡಿಲ್ಲ, ಕಾರ್ಯಕರ್ತರು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಯಾಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಜನತೆ ಮುಂದಿಡಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬಿಟ್ಟಿ ಭಾಗ್ಯನೀಡಿ ಮಹಿಳಾ ಮತದಾರರನ್ನು ನಮ್ಮತ್ತ ಸೆಳೆಯಬಹುದು ಎಂದು ಕಾಂಗ್ರೆಸ್ ಪಕ್ಷ ಭರವಸೆಯಲ್ಲಿದೆ, ಪ್ರತಿಯೊಬ್ಬ ಮೈತ್ರಿ ಪಕ್ಷದ ಮತದಾರರೂ ನಿಮ್ಮ ಮನೆಯಲ್ಲಿ, ನೆರೆಹೊರೆಯಲ್ಲಿ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರದ ಸಾಧನೆಗಳು, ಮಹಿಳಾ ಸಬಲೀಕರಣ ಸೇರಿದಂತೆ ಇತರೆ ಯೋಜನೆಗಳು ಹಾಗೂ ಹೃದಯವಂತ, ಸನ್ನಡತೆಯುಳ್ಳ ಅಭ್ಯರ್ಥಿ ಡಾ.ಮಂಜುನಾಥ್ ಬಗ್ಗೆ ಪ್ರಚಾರ ಮಾಡಿ ಅವರಿಗೆ ಹೆಚ್ಚು ಮತ ಬರುವಂತೆ ಮಾಡಬೇಕೆಂದರು.
ಮಾಜಿ ಶಾಸಕ ಎ.ಮಂಜು, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಜೆಡಿಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಡಾ.ರವಿಬಾಬು, ದಿನೇಶ್, ತಿಮ್ಮೆಗೌಡ, ಶಿವಣ್ಣ, ತಮ್ಮಣ್ಣಗೌಡ, ಪ್ರಕಾಶ, ಧನುಶ್, ಅಮರ್, ಗೋಪಿ, ಅನೂಪ್, ಧನಂಜಯ, ನಾಗಾನಂದ, ಹೊನ್ನೇನಹಳ್ಳಿ ಸುರೇಶ, ರಮೇಶ, ಮಾರುತಿ, ಹರೀಶ್, ಶಿವಣ್ಣ, ಜಯಣ್ಣ, ದಿಲೀಪ, ವೈ.ಹೆಚ್.ಹುಚ್ಚಯ್ಯ ಇತರರು ಇದ್ದರು.
Comments are closed.