ವಿ.ಸೋಮಣ್ಣ ಗೆಲುವಿಗೆ ಮುಖಂಡರ ಸಂಕಲ್ಪ

35

Get real time updates directly on you device, subscribe now.


ತುಮಕೂರು: ನಗರದ ಜೆಡಿಎಸ್ ಕಚೇರಿ ಆವರಣದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಸಮನ್ವಯ ಸಮಾರಂಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬಹುಮತದ ಅಂತರದಲ್ಲಿ ಆಯ್ಕೆ ಮಾಡಲು ಈ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ಸಂಕಲ್ಪ ಮಾಡಿದರು.
ಎರಡೂ ಪಕ್ಷಗಳ ಮೈತ್ರಿಯ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಪಕ್ಷದಕ ಚೇರಿಗೆ ಬರ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ವಿ.ಸೋಮಣ್ಣ, ಜನತಾ ಪರಿವಾರದಿಂದ ಬಂದ ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು, ಪ್ರಧಾನಿ ನರೇಂದ್ರ ಮೋದಿ, ನಾಯಕ ಅಮಿತ್ ಷಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರು ತೀರ್ಮಾನ ತೆಗೆದುಕೊಂಡು ನನ್ನನ್ನು ತುಮಕೂರು ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು, ತುಮಕೂರಿನಲ್ಲಿ ಜೆಡಿಎಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನಿಗೂ ಅಪಚಾರವಾಗದಂತೆ ನಡೆದುಕೊಳ್ಳುವಂತೆ ದೇವೇಗೌಡರು ನನಗೆ ಸೂಚನೆ ನೀಡಿದರು, ಅವರ ಸೂಚನೆಯನ್ನು ಕಾಯಾ ವಾಚಾ ಅನುಸರಿಸುತ್ತೇನೆ ಎಂದು ಹೇಳಿದರು.

ಈ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಡುವ ಮಹತ್ವದ ಚುನಾವಣೆ, ದೇಶದ ಆಡಳಿತ ಚುಕ್ಕಾಣಿ ಹಿಡಿದು, ಸಮರ್ಥವಾಗಿ ಮುನ್ನಡೆಸುವವರನ್ನು ಆಯ್ಕೆ ಮಾಡುವ ಚುನಾವಣೆ, ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರೇ ಮೊತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ದೇವೇಗೌಡರು, ಕುಮಾರಸ್ವಾಮಿಯವರು ತೀರ್ಮಾನ ಮಾಡಿ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮೋದಿಯವರ ಕೈ ಬಲಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ, ಬಿಜೆಪಿ, ಜೆಡಿಎಸ್ ನ ಎಲ್ಲರೂ ಒಟ್ಟಾಗಿ ಸೇರಿ ಮೋದಿಯವರನ್ನು ಪ್ರಧಾನಿ ಮಾಡಲು ದೇವೇಗೌಡರು, ಕುಮಾರಸ್ವಾಮಿಯವರ ಆಶಯ ಈಡೇರಿಸಲು ಬದ್ಧವಾಗಿದ್ದೇನೆ, ಎರಡೂ ಪಕ್ಷದವರು ಒಂದೇ ಕುಟುಂಬದ ಸದಸ್ಯರಂತೆ ಚುನಾವಣೆಯಲ್ಲಿ ಕೆಲಸ ಮಾಡೋಣ, ತುಮಕೂರಿನಲ್ಲೇ ಮನೆ ಮಾಡಿದ್ದೇನೆ, ಇಲ್ಲೇ ವಾಸ ಮಡುತ್ತೇನೆ, ನಾನು ಸದಾ ನಿಮ್ಮ ಜೊತೆಗಿರುತ್ತೇನೆ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಕಳೆದ ಬಾರಿ ದೇವೇಗೌಡರು ಕಾಂಗ್ರೆಸ್ ಜೊತೆ ಮೈತ್ರಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ನವರು ಮೋಸ ಮಾಡಿ ಸೋಲಿಸಿದರು, ಆದರೆ ಜೆಡಿಎಸ್ ನವರು ಮಾತಿಗೆ ತಪ್ಪುವುದಿಲ್ಲ, ಸೋಮಣ್ಣ ಅವರನ್ನು ಗೆಲ್ಲಿಸಲು ಒಟ್ಟಾಗಿ ಶ್ರಮಿಸುತ್ತೇವೆ, ಬೂತ್ ಮಟ್ಟದವರೆಗೆ ಎರಡೂ ಪಕ್ಷದ ಕಾರ್ಯಕರ್ತರು ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ನಿರಂತರವಾಗಿ ಕಾರ್ಯ ರೂಪಿಸುತ್ತಿದೆ, ಈಗ ಜೆಡಿಎಸ್ ಜೊತೆಯಾಗಿರುವುದು ನಮಗೆ ಆನೆಬಲ ಬಂದಂತಾಗಿದೆ, ಈ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಎಲ್ಲರೂ ಒಂದಾಗೋಣ ಎಂದರು.

ಮಾಜಿ ಸಚಿವ ಲೋಕಸಭಾ ಕ್ಷೇತ್ರ ಉಸ್ತುವಾರಿ ಗೋಪಾಲಯ್ಯ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ, ಕಾಂಗ್ರೆಸ್ ಸರ್ಕಾರ ಕುಡಿಯುವ ನೀರು ಕೊಡಲಾಗದೆ ಗ್ಯಾರಂಟಿಗಳ ಪ್ರಚಾರ ಮಾಡಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ, ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ಮೋದಿ ಸರ್ಕಾರ ನೀಡುವ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ ವಿನಃ ತಮ್ಮ ಸರ್ಕಾರದಿಂದ ಒಂದು ಕೇಜಿಯನ್ನೂ ಕೊಟ್ಟಿಲ್ಲ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಒಕ್ಕಲಿಗರ ಸಮುದಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇ ಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿ, ಕಳೆದು ಚುನಾವಣೆಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಲು ಇದೇ ಮುದ್ದಹನುಮೇ ಗೌಡ ತಂತ್ರ ಮಾಡಿದ್ದರು ಎಂದು ಆಪಾದಿಸಿದರು. ದೇವೇಗೌಡರಿಗೆ ಅವಮಾನ ಮಾಡಿದ ಮುದ್ದಹನುಮೇ ಗೌಡರಿಗೆ ಒಕ್ಕಲಿಗರು ತಕ್ಕಪಾಠ ಕಲಿಸಬೇಕು ಎಂದರು.

ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಯಾಕೆ ಆಗಬೇಕು ಎಂದು ದೇವೇಗೌಡರು ಹೇಳಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.

ವಿಧಾನಪರಿಷತ್ ಸದಸ್ಯತಿಪ್ಪೇಸ್ವಾಮಿ, ಶಾಸಕರಾದ ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಸುಧಾಕರ ಲಾಲ್, ತಿಮ್ಮರಾಯಪ್ಪ, ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿದರು. ಸಂಸದಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಂ.ಡಿ.ಲಕ್ಷ್ಮೀ ನಾರಾಯಣ, ಜೆಡಿಎಸ್ ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಅನಿಲ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಎಲ್.ಸಿ.ನಾಗರಾಜು, ಡಾ.ಪರಮೇಶ್, ದಿಲೀಪ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!