ತುಮಕೂರು: ಕಲ್ಪತರು ನಾಡು ಎಂದು ಕರೆಯುವ ತುಮಕೂರು ಜಿಲ್ಲೆಗೆ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ಕೊಡಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ಆ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸುವುದು ನನ್ನ ಮುಂದಿರುವ ಗುರಿ ಎಂದು ಮಾಜಿ ಸಂಸದ ಹಾಗೂ ಹಾಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.
ಕೆಯುಡಬ್ಲ್ಯುಜೆ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಂಸದನಾಗಿದ್ದ ಸಂದರ್ಭದಲ್ಲಿ ತೆಂಗಿನ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಆತ್ಮಹತ್ಯೆಗೆ ಶರಣಾಗುವಂತಹ ಸ್ಥಿತಿ ಇದೆ ಎಂದು ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು, ಮತ್ತೊಮ್ಮೆ ತೆಂಗು ಬೆಳೆಗಾರರಿಗೆ ಇದ್ದ ಗತವೈಭವ ಮರಳಿಸ ಬೇಕೆಂಬುದು ಅದ್ಯತೆಯ ವಿಷಯವಾಗಲಿದೆ ಎಂದರು.
ತೆಂಗಿನ ಜೊತೆಗೆ, ತೆಂಗಿನ ಉಪ ಉತ್ಪನ್ನಗಳಾದ ನೀರಾ, ಎಳನೀರು, ತೆಂಗಿನ ಹಾಲು, ತೆಂಗಿನ ಎಣ್ಣೆ ಇವುಗಳನ್ನು ಉತ್ಪಾದಿಸುವುದರಿಂದ ಹೆಚ್ಚಿನ ಲಾಭ ರೈತರಿಗೆ ದೊರೆಯಲಿದೆ, ಈ ನಿಟ್ಟಿನಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನದ ಅಡಿಯಲ್ಲಿ ತೆಂಗಿನ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ತುಮಕೂರು ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರವಾಗಿದೆ, ಹಾಗಾಗಿ ವರ್ತುಲ ರೈಲ್ವೆ ಜೊತೆಗೆ ಈಗಾಗಲೇ ರಾಜ್ಯದ ಬಜಟ್ ನಲ್ಲಿ ಹೆಸರಿಸಿರುವಂತೆ ತುಮಕೂರು ವರೆಗೆ ಮೆಟ್ರೋ ವಿಸ್ತರಣೆಗೆ ಕೇಂದ್ರದೊಂದಿಗೆ ವ್ಯವಹರಿಸಲಾಗುವುದು, ಅಲ್ಲದೆ ನೆನೆಗುದಿಗೆ ಬಿದ್ದಿರುವ ತುಮಕೂರು- ರಾಯದುರ್ಗ ಮತ್ತು ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗಳ ತ್ವರಿತಗತಿ ಅನುಷ್ಠಾನ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಐದು ವರ್ಷಗಳಲ್ಲಿ 25 ಕೋಟಿ ರೂ. ಕುಡಿಯುವ ನೀರು ಮತ್ತು ಸಮುದಾಯದ ಅಭಿವೃದ್ಧಿಗೆ ಬಳಸಿದ್ದೇನೆ, ಶೇ.95 ರಷ್ಟು ಅನುದಾನ ಖರ್ಚು ಮಾಡಿದ್ದೇನೆ, ಗುತ್ತಿಗೆದಾರರಿಗೆ ಅನುಕೂಲ ವಾಗುವಂತಹ ಯಾವುದೇ ಕಾಮಗಾರಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಸಿಲ್ಲ, ಶಾಲಾ, ಕಾಲೇಜು, ಗ್ರಾಮೀಣ ಭಾಗದಲ್ಲಿ ಆರ್ ಓ ಪ್ಲಾಂಟ್ ನಿರ್ಮಾಣಕ್ಕೆ ಹೆಚ್ಚಿನ ಹಣ ಖರ್ಚು ಮಾಡಿದ್ದೇನೆ ಎಂದರು.
ತುಮಕೂರು ಜಿಲ್ಲೆಯ ವೈಶಿಷ್ಟತೆಯಲ್ಲಿ ಹಳ್ಳಿಕಾರ್ ತಳಿಯು ಒಂದು, ಅದರ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ನೀಡಬೇಕಾಗಿದೆ, ಬಾಣಸಂದ್ರ ಸಮೀಪ ನೂರಾರು ಎಕರೆ ಭೂಮಿಯನ್ನು ಹಳ್ಳಿಕಾರ್ ತಳಿ ಅಭಿವೃದ್ಧಿಗೆ ಮೀಸಲಿಡಲಾಗಿದೆ, ಇದನ್ನು ಉಳಿಸುವುದರ ಜೊತೆಗೆ ಸರಕಾರವೇ ಕುಣಿಗಲ್ ಸ್ಟಡ್ ಫಾರಂ ಉಳಿಸಲು ಸಹ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ, ಹಾಲಿ ಸಂಸದನಾಗಿ ದೇವೇಗೌಡರಿಗೋಸ್ಕರ ನನ್ನ ಕ್ಷೇತ್ರ ತ್ಯಾಗ ಮಾಡಿದ್ದೇನೆ, ಅಲ್ಲದೆ ಕೆಲ ಕಡೆಗಳಲ್ಲಿ ಹೋಗಿ ದೇವೇಗೌಡರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದೇನೆ, ದೇವೇಗೌಡರಿಗೆ ಮತ ನೀಡಬೇಡಿ ಎಂದು ಹೇಳಿರುವ ಯಾವುದಾದರೂ ಒಂದು ಸಾಕ್ಷಿ ಇದ್ದರೆ ನೀಡಿ, ಇಲ್ಲಸಲ್ಲದ ಆರೋಪ ಸರಿಯಲ್ಲ ಎಂದ ಅವರು ಕುಣಿಗಲ್, ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ನಾನು ಮೊದಲಿನಿಂದಲೂ ವಿರೋಧಿಸುತ್ತಿದ್ದೇನೆ, ಈಗಲೂ ಆ ನಿಲುವಿಗೆ ಬದ್ಧ, ಇರುವ ಕೆನಾಲ್ ನನ್ನೇ ಸರಿಪಡಿಸಿಕೊಂಡು ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ ಎಂದರು.
ಜಾತಿ, ಹಣದ ಆಧಾರದಲ್ಲಿ ಚುನಾವಣೆ ನಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ, ಇದಕ್ಕೆ ನನ್ನ ವಿರೋಧವಿದೆ, ಲಿಂಗಾಯಿತರೆಲ್ಲರೂ ಬಿಜೆಪಿಗೆ ಮತ ನೀಡುತ್ತಾರೆ ಎಂಬುದು ಒಪ್ಪಲು ಸಾಧ್ಯವಿಲ್ಲ, 2014ರಲ್ಲಿ ಎಲ್ಲಾ ವರ್ಗದವರು ನನ್ನ ಗೆಲುವಿಗೆ ಸಹಕಾರಿಯಾಗಿದ್ದಾರೆ, ನಾನು ಸಂಸತ್ತಿನಲ್ಲಿ ಮಾಡಿದ ಕೊನೆ ಭಾಷಣ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕು ಎಂದು, ನಾನು ಯಾವುದೇ ಜಾತಿಗೆ ಸಿಮೀತವಾಗಿಲ್ಲ ಎಂದು ಪ್ರತಿಪಾದಿಸಿದರು.
ಸಂವಾದದಲ್ಲಿ ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್, ಆರ್.ಕಾಮರಾಜು, ಟಿ.ಎನ್.ಮಧುಕರ್, ಡಿ.ಎಂ.ಸತೀಶ್, ಶಾಂತರಾಜು, ಟಿ.ಇ.ರಘುರಾಮ್ ಇದ್ದರು.
Comments are closed.