ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಕೆ.ವಿ. ಅಶೋಕ್ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.
ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಕರ್ನಾಟಕಾಂಧ್ರದ ಗಡಿ ಭಾಗದಲ್ಲಿದೆ, ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯಿಂದ ಪಾವಗಡ ತಾಲೂಕಿನ ನಾಗಲಾಪುರ ಹಾಗೂ ವೆಂಕಟಮ್ಮನಹಳ್ಳಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಎಸ್ ಎಸ್ ಟಿ ತಂಡದ ಕಾರ್ಯ ಪರಿಶೀಲಿಸಿದ ಅವರು ಎಲ್ಲ ತಂಡಗಳು 24=7 ಕಾರ್ಯ ನಿರ್ವಹಿಸುವುದರೊಂದಿಗೆ ಕೆ ಎಸ್ ಆರ್ ಟಿ ಸಿ ಬಸ್ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನೂ ತಪಾಸಣೆಗೆ ಒಳಪಡಿಸಬೇಕು, ಪ್ರತಿ ವಾಹನದ ಸಂಖ್ಯೆ, ವಾಹನದ ಮಾದರಿ, ವಾಹನವು ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎಂಬ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಚೆಕ್ ಪೋಸ್ಟ್ಗಳಲ್ಲಿ ನಿರ್ವಹಿಸುತ್ತಿರುವ ವಹಿಗಳನ್ನು ಪರಿಶೀಲಿಸಿದರು.
ನಂತರ ಆಂಧ್ರ ಪ್ರದೇಶದ ಗಡಿಯಲ್ಲಿರುವ ಕಂಬದೂರು, ಎಗುವಪಲ್ಲಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಸದರಿ ಚೆಕ್ ಪೋಸ್ಟ್ಗಳ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ ಗಡಿ ಭಾಗದಲ್ಲಿ ವರದಿಯಾಗಬಹುದಾದ ಲಿಕ್ಕರ್ ಮಾಫಿಯ ಬಗ್ಗೆ ಚರ್ಚಿಸಿದರು.
ತುಮಕೂರಿಗೆ ಹಿಂದಿರುಗುವಾಗ ಮಾರ್ಗ ಮಧ್ಯೆ ತಿರುಮಣಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವರೇ ಎಂದು ಅವರ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು.
ಬಳಿಕ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಹಾರ ತಯಾರಿಸುವ ಅಡುಗೆ ಕೋಣೆ, ಮಲಗುವ ಕೋಣೆ ಪರಿಶೀಲಿಸಿ ಮಕ್ಕಳು ಮಲಗುವ ಹಾಸಿಗೆ ಸ್ವಚ್ಛತೆಯಿಂದ ಕೂಡಿಲ್ಲ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಉತ್ತಮ ಹಾಸಿಗೆ- ಹೊದಿಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರಲ್ಲದೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಪಾವಗಡ ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿ ಡಾ.ಎ.ಎಸ್.ಎಲ್.ಬಾಬು ಅವರಿಂದ ಸಿಬ್ಬಂದಿ ಮಾಹಿತಿ ಪಡೆದು ಆಸ್ಪತ್ರೆಯಲ್ಲಿರುವ ಮಕ್ಕಳ, ಅರವಳಿಕೆ, ಸ್ತ್ರೀ ರೋಗ ತಜ್ಞರ ಕೊಠಡಿ, ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿ ಪರಿಶೀಲಿಸಿದರು, ಔಷಧ ವಿತರಣಾ ಕೊಠಡಿಗೆ ಭೇಟಿ ನೀಡಿ ಔಷಧಿ ದಾಸ್ತಾನು ಇರುವ ಬಗ್ಗೆ ಮಾಹಿತಿ ಪಡೆದರು. ಉಚಿತವಾಗಿ ಔಷಧಿ ವಿತರಿಸುತ್ತಿರುವ ಬಗ್ಗೆ ರೋಗಿಗಳನ್ನು ವಿಚಾರಿಸಿದರು.
ಪಾವಗಡ ಪಟ್ಟಣದಲ್ಲಿ ಹೊಸದಾಗಿ 1.20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪೊಲೀಸ್ ಠಾಣೆ ಕಾಮಗಾರಿ ಪರಿಶೀಲಿಸಿದರು, ಇದಕ್ಕೂ ಮುನ್ನ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ಹಾಗೂ ಶನೈಶ್ಚರ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾವಗಡ ತಾಲೂಕಿನ ವಿವಿಧ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು, ಪ್ರತಿಯೊಂದು ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲು ಎಸ್ ಎಸ್ ಟಿ ತಂಡ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾಗಬೇಕು, ಸಾರ್ವಜನಿಕರೂ ಸಹ ಚುನಾವಣಾ ಅಕ್ರಮ ಕಂಡು ಬಂದರೆ ಕೂಡಲೇ ಸಹಾಯವಾಣಿ ಸಂಖ್ಯೆ 1950 ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು, ಚುನಾವಣೆ ಅಕ್ರಮಗಳ ಬಗ್ಗೆ ದೂರು ಬಂದ ಕೂಡಲೇ ಎಫ್ ಎಸ್ ಟಿ ತಂಡ ಸ್ಥಳಕ್ಕೆ ಧಾವಿಸಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ತಡೆಗಟ್ಟಲು ಆಂಧ್ರ ಗಡಿಭಾಗದ ಶಿರಾ, ಮಧುಗಿರಿ ಹಾಗೂ ಪಾವಗಡ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 12 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ, ಪಾವಗಡದಲ್ಲಿರುವ ಮತಗಟ್ಟೆಗಳಲ್ಲಿ ವಲ್ನರಬಲ್ ಮತಗಟ್ಟೆಯೆಂದು ಯಾವುದನ್ನೂ ಗುರುತಿಸಿಲ್ಲ, ಈ ಚೆಕ್ ಪೋಸ್ಟ್ಗಳು ಗಡಿ ಪ್ರದೇಶದಲ್ಲಿರುವುದರಿಂದ ಪರಿಶೀಲಿಸಲು ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
Comments are closed.