ತುಮಕೂರು: ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮಾಜವನ್ನು ಮೇಲೆತ್ತಲು ಎಲ್ಲಾ ನಾಯಕರು ಒಗ್ಗೂಡಿ ಕೆಲಸ ಮಾಡುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾ ನಗರ ಪಾಲಿಕೆ ಹಾಗೂ ಸಮಸ್ತ ಆಗ್ನಿವಂಶ ತಿಗಳ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶ್ರೀಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯನ್ನೇ ನಂಬಿ ಬದುಕುತ್ತಿರುವ ತಿಗಳ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಿವೆ, ಈ ಕ್ಷೇತ್ರಗಳಲ್ಲಿ ಮುಂದೆ ಬರಲು ಒಗ್ಗಟ್ಟು ಅತಿ ಮುಖ್ಯವಾಗಿದೆ, ಚುನಾವಣಾ ನೀತಿ ಸಂಹಿತೆಯಿಂದ ಜಿಲ್ಲಾಡಳಿತ ಸರಳವಾಗಿ ಜಯಂತಿ ಆಚರಿಸಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸುವಂತಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ತಿಗಳ ಸಮುದಾಯ ತುಮಕೂರು ಗುಬ್ಬಿ, ನೆಲಮಂಗಲ ಸೇರಿದಂತೆ ಬೆಂಗಳೂರು ಸುತ್ತಮುತ್ತ ಇರುವ ಅತ್ಯಂತ ಸಣ್ಣ ಸಮುದಾಯ, ಕೃಷಿ ಮತ್ತು ತೋಟಗಾರಿಕೆಯನ್ನೇ ನಂಬಿ ಬದುಕುವ ಈ ಸಮುದಾಯಕ್ಕೆ ರಾಜಕೀಯ ಅಧಿಕಾರವೇ ಇಲ್ಲದಂತಾಗಿದೆ, ಇಂದಿಗೂ ತನ್ನದೇ ಆದ ಆಚಾರ, ವಿಚಾರ ಅನುಸರಿಸುತ್ತಾ, ಈ ಅಧುನಿಕ ಯುಗದಲ್ಲಿಯೂ ಬುಡಕಟ್ಟು ಸಂಸ್ಕೃತಿ ಪ್ರತಿಪಾದಿಸುತ್ತಿರುವ ಸಮುದಾಯ ಇದಾಗಿದೆ, ಹಿರಿಯರಿಗೆ ಗೌರವದ ಜೊತೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾ ತಮ್ಮಲ್ಲಿನ ಸಮಸ್ಯೆಗಳನ್ನೇ ಹಿರಿಯರ ಸಮ್ಮುಖದಲ್ಲಿಯೇ ಬಗೆಹರಿಸಿಕೊಂಡು ಮುನ್ನೆಡೆಯುತ್ತಿರುವ ಸಮದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕಿದೆ ಎಂದರು.
ಹಿರಿಯ ಮುಖಂಡ ರೇವಣ್ಣಸಿದ್ದಯ್ಯ ಮಾತನಾಡಿ, ಸಪ್ತರ್ಷಿಗಳು ನಾಡಿನಲ್ಲಿ ಕ್ಷೋಭೆ ಹೆಚ್ಚಾಗದಾಗ ಅದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶಿವನ ಕುರಿತು ತಪಸ್ಸು ಮಾಡಿದಾಗ ಅಗ್ನಿಕುಂಡದಿಂದ ಹುಟ್ಟಿದ ನಮ್ಮ ಕುಲದೈವ ಅಗ್ನಿ ಬನ್ನಿರಾಯ ಸ್ವಾಮಿಗೆ ಇಂದ್ರನ ಮಗಳನ್ನು ಕೊಟ್ಟು ಮದುವೆ ಮಾಡಲಾಗುತ್ತದೆ, ಸಮಸ್ತ ತಿಗಳ ಜನಾಂಗವೂ ಅವರ ವಂಶಸ್ಥರು, ಇಂದಿಗೂ ತರಕಾರಿ, ಹಣ್ಣು, ಹೂವು, ಎಲೆ, ಅಡಿಕೆ ಬೆಳೆದುಕೊಂಡು ಬದುಕುತ್ತಿರುವ ಈ ಸಮೂಹ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ ಎಂದರು.
ಯಜಮಾನರುಗಳಾದ ಹನುಮಂತರಾಜು, ಶಿವಕುಮಾರ್, ಕುಂಭಯ್ಯ, ನಾರಾಯಣ ಸ್ವಾಮಿ, ಕುಂಬಣ್ಣ, ಹಿರಿಯರಾದ ಹನುಮದಾಸ್, ಶಿವಣ್ಣ, ಪ್ರೊ.ಆಂಜನೇಯ, ಅಣೆತೋಟ ಶ್ರೀನಿವಾಸ್, ಕ್ಯಾರೇಟ್ ರಾಮಣ್ಣ, ಲೋಕೇಶ್, ಅಣೇಕಾರರು, ಮುದ್ರೆಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಸುರೇಶ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Comments are closed.