ಮಧುಗಿರಿ: ನಾನು ಸಂಸದನಾಗಿ ಆಯ್ಕೆಯಾದರೆ ನೂರು ದಿನಗಳ ಒಳಗೆ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಮೊದಲ ಆದ್ಯತೆ ನೀಡುವುದಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು.
ಪಟ್ಟಣದ ಪಾವಗಡ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಐ.ಡಿ.ಹಳ್ಳಿ ಹೋಬಳಿಯ ದೇವಮೂಲೆಯಲ್ಲಿರುವ ದೊಡ್ಡದಾಳವಟ್ಟ ಶ್ರೀಲಕ್ಷ್ಮಿನರಸಿಂಹ ಸ್ವಾಮಿಗೆ ಸಲ್ಲಿಸಿ ನಂತರ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ನಾನು ಸಂಸದನಾಗಿ ಆಯ್ಕೆಯಾದ ನೂರು ದಿನಗಳ ಒಳಗೆ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂ.ಗಳ ಅನುದಾನ ತಂದು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ, ಅಲ್ಲದೆ ಮಧುಗಿರಿ ಮತ್ತು ಕೊರಟಗೆರೆ ತಾಲೂಕು ಬರಗಾಲದಿಂದ ತತ್ತರಿಸುತ್ತಿದ್ದು, ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ಅಭಿವೃದ್ಧಿ ವಿಚಾರದಲ್ಲಿ ಮೊದಲ ಪ್ರಾಧಾನ್ಯತೆ ನೀಡುತ್ತೇನೆ ಎಂದರು.
ತುಮಕೂರು ಜಿಲ್ಲೆ ಬರೆಪೀಡಿತ ಪ್ರದೇಶವಾಗಿರುವುದರಿಂದ ಈ ಭಾಗದ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸೋಲಾರ್ ಪಾರ್ಕ್ ಮತ್ತು ಜವಳಿ ಪಾರ್ಕ್ ತಂದು ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಎರಡು ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಸೋಮಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಮಧುಗಿರಿ ತಾಲೂಕು ಬರಪೀಡಿತ ಪ್ರದೇಶವಾಗಿದ್ದು, ಏಕಶಿಲಾ ಬೆಟ್ಟಕ್ಕೆ ರೋಪ್ ವೇ, ಎತ್ತಿನಹೊಳೆ ಮೂಲಕ ಕೆರೆಗಳಿಗೆ ನೀರು ಹರಿಸಲು ಮಧುಗಿರಿ ಜಿಲ್ಲೆ ಆಗಬೇಕೆಂದರೆ ಮೈತ್ರಿ ಅಭ್ಯರ್ಥಿ ಸೋಮಣ್ಣ ಅವರನ್ನು ಬೆಂಬಲಿಸಿ, ಮಧುಗಿರಿಯಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದ್ದು, ಇದನ್ನು ಧಿಕ್ಕರಿಸಿ ದೇವೇಗೌಡರ ಮತ್ತು ನನ್ನ ಚುನಾವಣೆಯಲ್ಲಿ ಆದ ಲೋಪದೋಷ ಸರಿಪಡಿಸಿಕೊಂಡು ಸೋಮಣ್ಣ ಅವರ ಗೆಲುವಿಗೆ ಶ್ರಮಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶಾಸಕ ಸುರೇಶ್ ಗೌಡ ಮಾತನಾಡಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 400ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ, ಪಾರ್ಲಿಮೆಂಟ್ ನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಕ್ಕಿಂತ ಸಚಿವರಾಗಿ ನಮ್ಮ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಸೋಮಣ್ಣ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಮಧುಗಿರಿ ಸಂಘಟನಾತ್ಮಕ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಮಾಜಿ ಶಾಸಕ ಸೊಗಡು ಶಿವಣ್ಣ, ಮುಖಂಡರಾದ ಎಲ್.ಸಿ.ನಾಗರಾಜು, ಅನಿಲ್ ಕುಮಾರ್, ಕೊಂಡವಾಡಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಜಿಲ್ಲಾ ಕಾರ್ಯದರ್ಶಿ ವೀರ ಕ್ಯಾತರಾಯ ಇತರರು ಇದ್ದರು.
ಗೋಬ್ಯಾಕ್ ಬಸವರಾಜು ಘೋಷಣೆ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೋಮಣ್ಣ ಪ್ರಚಾರದ ವೇಳೆ ಹಾಲಿ ಸಂಸದ ಬಸವರಾಜು ವಿರುದ್ಧ ಬಿಜೆಪಿ ಕಾರ್ಯಕರ್ತರಿಂದಲೇ ಗೋಬ್ಯಾಕ್ ಬಸವರಾಜು ಘೋಷಣೆ ಕೇಳಿ ಬಂದಿದೆ.
ತಾಲೂಕಿನ ದೊಡ್ಡದಾಳವಟ್ಟ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಬಳಿ ಘಟನೆ ನಡೆದಿದ್ದು, ಬಿಜೆಪಿ ಶಾಲು ಹಾಕಿಕೊಂಡಿದ್ದ ಕಾರ್ಯಕರ್ತರಿಂದಲೇ ಸಂಸದ ಬಸವರಾಜು ವಿರುದ್ಧ ಘೋಷಣೆ ಕೇಳಿ ಬಂದಿದೆ, ಈ ಘಟನೆ ಬಸವರಾಜುಗೆ ಮುಜುಗರ ತಂದಿದ್ದು, ಅಭ್ಯರ್ಥಿ ಸೋಮಣ್ಣ ಎದುರೇ ಸಂಸದ ಬಸವರಾಜು ತಾಲೂಕಿಗೆ ಏನೂ ಮಾಡಿಲ್ಲ, ಬರಗಾಲದಲ್ಲೂ ಕಾಣಿಸಲಿಲ್ಲ, ಕೊರೊನಾ ಸಂದರ್ಭದಲ್ಲಿ ಮಾನವೀಯತೆಗಾದರೂ ಮಧುಗಿರಿ ಜನತೆಯ ಯೋಗಕ್ಷೇಮ ವಿಚಾರಿರಲಿಲ್ಲ, ಈಗ ಚುನಾವಣೆ ಹೊಸ್ತಿಲಲ್ಲಿ ಕಾಣಿಸಿಕೊಂಡಿದ್ದು, ಮಧುಗಿರಿಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು, ಈ ವೇಳೆ ಅಭ್ಯರ್ಥಿ ಸೋಮಣ್ಣ ಕೈ ಮುಗಿದು ಕಾರ್ಯಕರ್ತರನ್ನ ಸಮಾಧಾನಪಡಿಸಲು ಯತ್ನಿಸಿದರು,
ಆದರೂ ಕಾರ್ಯಕರ್ತರು ಸಮಾಧಾನಗೊಳ್ಳದಿದ್ದಾಗ ನಿರಂತರವಾಗಿ ಬೊಲೋ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿ ಕಾರ್ಯಕರ್ತರ ಬಾಯಿ ಮುಚ್ಚಿಸಲಾಯಿತು.
Comments are closed.