ತುಮಕೂರು: ನಡೆದಾಡುವ ದೇವರು ಲಿಂ.ಡಾ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಏ.1 ರಂದು ಬೆಳಗ್ಗೆ 11 ಕ್ಕೆ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಡಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಹುಟ್ಟುಹಬ್ಬದಂದು ಮಠದಲ್ಲಿ ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿದೆ, ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ಗುರು ಬಾಬಾ ರಾಮದೇವ್ ನೆರವೇರಿಸಲಿದ್ದಾರೆ, ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ದಿವ್ಯ ಸಾನಿಧ್ಯವನ್ನು ಮುಂಡರಗಿ ಮಹಾ ಸಂಸ್ಥಾನದ ಅಧ್ಯಕ್ಷ ಡಾ.ಅನ್ನದಾನೇಶ್ವರ ಸ್ವಾಮೀಜಿ, ಧಾರವಾಡ ಮುರುಘ ಮಠದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಕಲ್ಲಯ್ಯ ಅಜ್ಜನವರು, ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಹುಟ್ಟು ಹಬ್ಬದಂದು ಮಠಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ, ಸುಮಾರು 5-6 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿದೆ, ಒಂದು ಬಾರಿಗೆ 30 ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ, ಹಬ್ಬದ ರೀತಿಯಲ್ಲಿ ಎಲೆ ಹಾಕಿ ಊಟ ಬಡಿಸಲಾಗುವುದು, ಪಾಯಸ ಬೂಂದಿ, ಚಿತ್ರಾನ್ನ, ಅನ್ನ ಸಾಂಬಾರು ಸೇರಿದಂತೆ ವಿವಿಧ ತಿನಿಸು ಸಿದ್ಧಪಡಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ ಐ ಟಿ ಸಿಇಒ ಶಿವಕುಮಾರಯ್ಯ, ಆಡಳಿತಾಧಿಕಾರಿ ವಿಶ್ವನಾಥಯ್ಯ, ಸಹಾಯಕ ಆಡಳಿತಾಧಿಕಾರಿ ಪರಮೇಶ್ವರಪ್ಪ ಇದ್ದರು.
Comments are closed.