ವಿದ್ಯಾವಂತ ಮತದಾರರು ತಪ್ಪದೇ ಓಟ್ ಮಾಡಲಿ

ತುಮಕೂರು ಮಹಾನಗರರ ಪಾಲಿಕೆಯಿಂದ ಮತದಾನ ಜಾಗೃತಿ

22

Get real time updates directly on you device, subscribe now.


ತುಮಕೂರು: ಲೈಂಗಿಕ ಅಲ್ಪಸಂಖ್ಯಾತರು, ಅಂಗವಿಕಲರನ್ನು ಒಳಗೊಂಡು ತುಮಕೂರು ಮಹಾ ನಗರಪಾಲಿಕೆ ಕೈಗೊಂಡಿರುವ ಈ ವಿಶೇಷ ಮತದಾನ ಜಾಗೃತಿ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಎಲ್ಲಾ ಮಹಾ ನಗರಗಳಿಗೆ ವಿಸ್ತರಿಸಲು ಭಾರತ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಮಹಿಳಾ ಹೋರಾಟಗಾರರ್ತಿ ಹಾಗೂ ಭಾರತ ಚುನಾವಣಾ ಆಯೋಗದ ಸಲಹಾ ಸಮಿತಿ ಸದಸ್ಯೆ ಡಾ.ಅಕೈ ಪದ್ಮಶಾಲಿ ತಿಳಿಸಿದ್ದಾರೆ.
ನಗರದ ಟೌನ್ ಹಾಲ್ ಮುಂಭಾಗದಲ್ಲಿ ಭಾರತ್ ಚುನಾವಣಾ ಆಯೋಗದ ಸಲಹೆಯಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಕಮಿಟಿ 132ನೇ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇದುವರೆಗೂ ಯಾರು ತಲುಪಲಾಗದ ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಧ್ವನಿಯಿಲ್ಲದ ಜನರು ಭಾಗವಹಿಸುವಂತೆ ಮಾಡುವ ಮೂಲಕ ಸಂವಿಧಾನದ ಆಶಯ ಮತ್ತು ಸಂಸತ್ತಿನ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದರು.

ಗ್ರಾಮೀಣ ಭಾಗಕ್ಕಿಂತ ನಗರದಲ್ಲಿ ಅತಿ ಕಡಿಮೆ ಮತದಾನ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ವಿದ್ಯಾವಂತರು ಮತದಾನದಿಂದ ದೂರವಾಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಒಂದು ಹಬ್ಬ, ಇದರಲ್ಲಿ ನಾವೆಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕಿದೆ, ಆ ಮೂಲಕ ನಮ್ಮ ಜನಪ್ರತಿನಿಧಿಯನ್ನು ನಾವೇ ಆಯ್ಕೆ ಮಾಡಿ, ಪ್ರಜಾ ಪ್ರಭುತ್ವ ಮತ್ತು ಸಂವಿಧಾನದ ಜವಾಬ್ದಾರಿ ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ ಎಂದು ಡಾ.ಅಕೈ ಪದ್ಮಶಾಲಿ ತಿಳಿಸಿದರು.
ಕಾರ್ಯಕ್ರಮದ ರೂವಾರಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ತುಮಕೂರು ನಗರಪಾಲಿಕೆ ಆಯುಕ್ತರಾದ ಅಶ್ವಿಜ ಮಾತನಾಡಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.100 ರಷ್ಟು ಮತದಾನ ಆಗಬೇಕು ಎಂಬ ಆಶಯದೊಂದಿಗೆ ಸ್ವೀಪ್ ಕಮಿಟಿಯ ಸಹಯೋಗದಲ್ಲಿ ಪಾಲಿಕೆ ವತಿಯಿಂದ ವಿಶೇಷವಾದ ಸ್ತಬ್ದ ಚಿತ್ರ ತಯಾರಿಸಿ ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ಇಡೀ ನಗರದ 35 ವಾರ್ಡ್ಗಳಲ್ಲಿಯೂ ಸಂಚರಿಸಿ ಜನರಿಗೆ ಮತದಾನದ ಅರಿವು ಮೂಡಿಸುವ ಕೆಲಸ ಮಾಡಲು ತೀರ್ಮಾನಿಸಲಾಗಿದೆ, ವಿಶೇಷವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.70 ಕ್ಕಿಂತ ಕಡಿಮೆ ಮತದಾನವಾಗಿರುವ ಬೂತ್ ಗಳಲ್ಲಿ ಹೆಚ್ಚು ಸಮಯ ಓಡಾಡುವ ಮೂಲಕ ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮತದಾನ ಜಾಗೃತಿಗಾಗಿ ಎನ್ ಸಿ ಸಿ, ಎನ್ ಎಸ್ ಎಸ್ ಹಾಗೂ ಇತರೆ ಸ್ವಯಂ ಸೇವಕರ ಜೊತೆಗೆ, ನಗರ ಪಾಲಿಕೆ ಮನೆ ಮನೆ ಕಸ ಎತ್ತುವ ಆಟೋಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಅಲ್ಲದೆ ಮೊದಲ ಬಾರಿ ಮತದಾನ ಮಾಡುತ್ತಿರುವ ಸುಮಾರು 4800ಕ್ಕು ಹೆಚ್ಚು ಮತದಾರರನ್ನು ಭೇಟಿಯಾಗಿ ಒಂದೊಂದು ಗಿಡಗಳನ್ನು ನೀಡಿ ಅವುಗಳನ್ನು ತಾವು ಮತದಾನ ಮಾಡುವ ಕೇಂದ್ರದಲ್ಲಿ ನೆಟ್ಟು ತಾವು ಮತದಾನ ಮಾಡಿದ ನೆನಪಿನ ಜೊತೆಗೆ ಪರಿಸರ ಕಾಳಜಿ ಮೆರೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ, ಇದಕ್ಕಾಗಿ ನಗರಪಾಲಿಕೆಯ ಎಲ್ಲಾ ಸಿಬ್ಬಂದಿ ಸಹಕಾರ ನೀಡುತ್ತಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಆಯುಕ್ತರಾದ ಅಶ್ವಿಜ ನುಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪ ಆಯುಕ್ತ ಸೋಮಶೇಖರ್, ಗಿರೀಶ್, ನಾಗಭೂಷಣ್, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಪರಿಸರ ಇಂಜಿನಿಯರ್ ಪೂರ್ಣಿಮ, ಇಇ ವಿನಯ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ನಗರ ಪಾಲಿಕೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಜರಿದ್ದರು.

ಕಾಂತರಾಜು ಕೌತುಮಾರನಹಳ್ಳಿ ಅವರ ನೇತೃತ್ವದ ಧವನ ಭೂಮಿಕೆ ಬಳಗದ ಕಲಾವಿದರು ಮತದಾನ ಕುರಿತ ಕಿರು ನಾಟಕ ಪ್ರದರ್ಶಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಬಿಜಿಎಸ್ ವೃತ್ತದಲ್ಲಿ ಅಳವಡಿಸಿರುವ ಮತದಾನ ಜಾಗೃತಿಯ ಎಲ್ ಇಡಿ ಸ್ಕ್ರೀನ್ ಉದ್ಘಾಟಿಸಿದರು, ಎನ್ ಸಿಸಿ ಕೆಡೆಟ್ ಗಳು, ಅಂಗವಿಕಲರ ತ್ರಿಚಕ್ರ ವಾಹನ ಚಾಲಕರಿಗೆ ಅರಂಭವಾದ ಮತದಾನ ಜಾಗೃತಿ ಜಾಥಾ ಅಶೋಕ ರಸ್ತೆ, ಚರ್ಚ್ ಸರ್ಕಲ್, ಜಿಲ್ಲಾಧಿಕಾರಿಗಳ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಗುಂಚಿ ಚೌಕ, ಎಂ.ಜಿ.ರಸ್ತೆಯ ಮೂಲಕ ಬಾಲಭವನ ತಲುಪಿ ಮುಕ್ತಾಯಗೊಂಡಿತ್ತು.

Get real time updates directly on you device, subscribe now.

Comments are closed.

error: Content is protected !!