ಮಧುಗಿರಿ: ಜಂಗಲ್ ಕಟಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲಿದ್ದ ಹೊರ ಗುತ್ತಿಗೆ ನೌಕರ ಕಂಬದ ಮೇಲಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿ ದಾದಗೊಂಡನ ಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಮೃತನನ್ನು ದೊಡ್ಡಯಲ್ಕೂರಿನ ನರೇಂದ್ರ.ವೈ.ಎ (27) ಎಂದು ಗುರುತಿಸಲಾಗಿದೆ, ಮೃತ ವ್ಯಕ್ತಿಯು ಬೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ವಿದ್ಯುತ್ ಕಂಬದ ಬಳಿ ಜಂಗಲ್ ಕಟಿಂಗ್ ಕೆಲಸ ಮಾಡುತ್ತಿದ್ದನು, ಏಕಾಏಕಿ ವಿದ್ಯುತ್ ಪ್ರವಹಿಸಿ ಮೇಲಿಂದ ಕೆಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳದಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಿಲ್ಲ, ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸದ ಕಾರಣ ತಡ ರಾತ್ರಿವರೆಗೂ ಶವ ಪರೀಕ್ಷೆ ನಡೆಸುವಂತೆ ಸಂಬಂಧಿಕರು ಪಟ್ಟು ಹಿಡಿದು ಕುಳಿತಿದ್ದರು, ಘಟನೆ ನಡೆದು ರಾತ್ರಿಯಾದರೂ ಇಲಾಖೆ ಅಧಿಕಾರಿಗಳಾಗಲಿ, ಗುತ್ತಿಗೆದಾರನಾಗಲಿ ಆಸ್ಪತ್ರೆ ಕಡೆ ಮುಖ ಮಾಡದ ಕಾರಣ ಕುಟುಂಬಸ್ಥರು ಬೆಸ್ಕಾಂ ಇಲಾಖೆಯ ವಿರುದ್ಧ ಪ್ರತಿಭಟಿಸಿದರು.
ಸ್ಥಳಕ್ಕೆ ಬೆಸ್ಕಾಂ ಇಇ ಜಗದೀಶ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾತನಾಡಿ, ವಿದ್ಯುತ್ ಅವಘಡದಿಂದ ಮೃತಪಟ್ಟ ನರೇಂದ್ರ.ವೈ.ಎ ಕುಟುಂಬಕ್ಕೆ ಏಜೆನ್ಸಿಯಿಂದ 10 ಲಕ್ಷ ಹಾಗೂ ಬೆಸ್ಕಾಂ ಇಲಾಖೆ ವತಿಯಿಂದ 5 ಲಕ್ಷ ಸೇರಿದಂತೆ ಒಟ್ಟು 15 ಲಕ್ಷ ಪರಿಹಾರ ಹಣ ನೀಡಲಾಗುವುದು, ಮೃತನ ಪತ್ನಿಗೆ ಬೆಸ್ಕಾಂ ಇಲಾಖೆಯುಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು, ಐಡಿ ಹಳ್ಳಿ ಬೆಸ್ಕಾಂ ಶಾಖಾ ಅಧಿಕಾರಿ ವಿರೇಂದ್ರ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Comments are closed.