ತುಮಕೂರು: ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರ ಆದೇಶದಂತೆ ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಬಿಜೆಪಿ ಪಕ್ಷ ನಮ್ಮ ತಾಯಿ ಇದ್ದಂತೆ, ಇದು ಪಕ್ಷದ ವರಿಷ್ಠ ಮಾತು, ಅದನ್ನು ಧಿಕ್ಕರಿಸುವಂತಿಲ್ಲ ಎಂದು ಬಿಜೆಪಿ ಮಾಜಿ ಉಪ ಮುಖ್ಯಮಂತ್ರಿ, ಗೋವಿಂದ ಕಾರಜೋಳ ತಿಳಿಸಿದರು.
ನಗರದ ಕ್ಯಾಸಂದ್ರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ.ಡಾ.ಶಿವಕುಮಾರ ಶ್ರೀಗಳ ಗದ್ದುಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ನನ್ನ ಶಾಸಕನನ್ನಾಗಿ ಮಾಡಿ ಮಂತ್ರಿಗಳನ್ನಾಗಿ ಮಾಡಿ, ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಸೂಕ್ತ ಗೌರವ ಸ್ಥಾನಮಾನ ನೀಡಿದ್ದು ಅದರಂತೆಯೇ ಇದೀಗ ಪಕ್ಷದ ವರಿಷ್ಠರು ನನ್ನ ಕಾರ್ಯ ವೈಖರಿ ಕಂಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡು ಎಂದಾಗ ನಾನು ತಿರಸ್ಕರಿಸುವಂತಿಲ್ಲ, ಹೀಗಾಗಿ ನಾನು ಅವರು ಹೇಳಿದಂತೆ ನಡೆಯುತ್ತೇನೆ ಎಂದರು.
ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಿಂದ ದೇಶ ಮೆಚ್ಚುವಂತಹ ಕೆಲಸ ಕಾರ್ಯ ಮಾಡಿದ್ದು ಕಳಂಕ ರಹಿತ ಪ್ರಧಾನ ಮಂತ್ರಿಗಳು ಎಂದು ಕೀರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ, ಅವರು ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬೊಮ್ಮಾಯಿ ಅವರು ನಮ್ಮ ರಾಜ್ಯದಲ್ಲಿ ಕೊಟ್ಟಿರುವ ಕೊಡುಗೆಗಳ ಆಧಾರದ ಮೇಲೆ ಮತ ಕೇಳುತ್ತೇನೆ, ಖಂಡಿತವಾಗಿಯೂ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ 28ಕ್ಕೆ 28 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ನನಗೆ ಟಿಕೆಟ್ ಕೊಡಲು ಕೇಂದ್ರದ ಮಂತ್ರಿ ಎ.ನಾರಾಯಣ ಸ್ವಾಮಿ ಒಬ್ಬರಾಗಿದ್ದು ಅವರು ಕೂಡ ಈ ಚುನಾವಣೆಗೆ ಸಹಕಾರ ನೀಡಲಿದ್ದಾರೆ ಎಂದರು.
ಈಗಾಗಲೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ನಾಯಕರು ಗೆಲುವು ಸಾಧಿಸಿದ್ದು, ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಸ್ಥಳೀಯ ಮುಖಂಡರ ಸಹಕಾರದಿಂದ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇನೆ, ಈ ಹಿನ್ನೆಲೆಯಲ್ಲಿ ಶ್ರೀಗಳ ಆಶೀರ್ವಾದ ಪಡೆಯಲು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದೇನೆ, ಶ್ರೀಮಠದ ಪರಮ ಭಕ್ತನಾಗಿದ್ದು ಸುಮಾರು 18 ವರ್ಷಗಳಿಂದಲೂ ಮಠಕ್ಕೆ ಭೇಟಿ ಕೊಡುವ ಹವ್ಯಾಸ ಬೆಳೆಸಿಕೊಂಡಿದ್ದೇನೆ ಎಂದರು.
ಈ ವೇಳೆ ವೇಳೆ ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಚಿದಾನಂದ್ ಎಂ ಗೌಡ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ, ಅನಿಲ್ ಕುಮಾರ್, ಹುಚ್ಚಯ್ಯ, ಸೂರ್ಯ ಹಾಸ್ಪಿಟಲ್ ನ ಡಾ.ಲಕ್ಷ್ಮಿಕಾಂತ್ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಹಾಜರಿದ್ದರು.
Comments are closed.