ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತಿಯ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು ಇದೇ 3 ರಂದು ಬುಧವಾರ ಮತ್ತೊಂದು ಸುತ್ತಿನ ನಾಮಪತ್ರ ಸಲ್ಲಿಸುವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎರಡೂ ಪಕ್ಷಗಳ ಹಲವು ನಾಯಕರು ಈ ವೇಳೆ ಭಾಗವಹಿಸುವರು.
ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ, 3 ರಂದು ಬೆಳಗ್ಗೆ 11.55ಕ್ಕೆ ವಿನಾಯಕ ನಗರದ ಗಣಪತಿ, ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎರಡೂ ಪಕ್ಷಗಳ 50 ಸಾವಿರಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಬೃಹತ್ ಮೆರವಣಿಗೆಯಲ್ಲಿ ತೆರಳಿ ಮಧ್ಯಾಹ್ನ 1.35ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ಇದು ದೇಶದ ಚುನಾವಣೆ, ದೇಶದ ಸಾರ್ವಭೌಮತ್ವ ಕಾಪಾಡುವ ಮಹತ್ವದ ಚುನಾವಣೆ, ಮುಂದಿನ ತಲೆಮಾರಿಗೆ ಸುಭದ್ರ ದೇಶವನ್ನು ಕೊಡುಗೆಯಾಗಿ ನೀಡಬೇಕಾಗಿರುವ ಕಾರಣ ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರೇ ಮತ್ತೊಮೆ ಪ್ರಧಾನಿ ಆಗಬೇಕು ಎಂಬ ಮಾಜಿ ಪ್ರಧಾನಿ ದೇವೇಗೌಡರ ದೂರದೃಷ್ಟಿಯಿಂದ ಬಿಜೆಪಿ, ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ ಲೋಕಸಭಾ ಕ್ಷೇತ್ರದ ಎಂಟೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ನ ಸಮನ್ವಯ ಸಭೆಗಳನ್ನು ಮಾಡಲಾಗಿದೆ, ನಾಮಪತ್ರ ಸಲ್ಲಿಕೆಯಾದ ನಂತರ ಈ ತಿಂಗಳ 4ರಿಂದ 7ರ ವರೆಗೆ ನಾಲ್ಕು ದಿನಕಾಲ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಗ್ರಾಮ ಪಂಚಾಯ್ತಿ ಕೇಂದ್ರಗಳಿಗೆ ಹೋಗಬೇಕೆಂಬ ಬಯಕೆಯಿದೆ, ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಮಿಕೊಳ್ಳಲಾಗಿದೆ, ಚುನಾವಣೆ ನಂತರ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.
ಕ್ಷೇತ್ರಾದ್ಯಂತ ಬಿಜೆಪಿ, ಜೆಡಿಎಸ್ ನಾಯಕರು ಒಟ್ಟಾಗಿ ಚುನಾವಣೆ ಪ್ರಚಾರ ಮಾಡಲು ತೀರ್ಮಾನ ಮಾಡಿ ಕಾರ್ಯ ಪ್ರವೃತ್ತರಾಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಅಮಿತ್ ಶಾ ಅವರು ತುಮಕೂರು ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ವಿ.ಸೋಮಣ್ಣ ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ಈ ತಿಂಗಳ 3 ರಂದು ವಿ.ಸೋಮಣ್ಣ ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಎರಡೂ ಪಕ್ಷಗಳ 50 ಸಾವಿರಕ್ಕೂ ಹೆಚ್ಚು ಕರ್ಯಕರ್ತರು ಭಾಗವಹಿಸುವರು, ಗಣಪತಿ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಹಮಿಕೊಳ್ಳಲಾಗಿದೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ ಭಾಗವಹಿಸುತ್ತಿರುವ ಕಾರಣ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.
ವಿ.ಸೋಮಣ್ಣ ಅವರು ಉತ್ತಮ ಅಭ್ಯರ್ಥಿ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದಾರೆ, ತಮ ಕಾರ್ಯ ವೈಖರಿಯಿಂದ ಕಲ್ಲನ್ನೂ ಮಾತನಾಡಿಸಬಲ್ಲ ಶಕ್ತಿ ಇವರಿಗಿದೆ, ಸೋಮಣ್ಣ ಅವರು ಎರಡು ಲಕ್ಷ ಮತಗಳ ಅಂತದಿಂದ ಚುನಾವಣೆ ಗೆಲ್ಲುವ ವಿಶ್ವಾಸವಿದೆ, ಗೆದ್ದ ನಂತರ ಅವರಿಂದ ತುಮಕೂರು ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ನಿರೀಕ್ಷಿಸಬಹುದು ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಮಸಾಲೆ ಜಯರಾಂ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ನಗರ ಅಧ್ಯಕ್ಷ ವಿಜಯ್‌ಗೌಡ, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಮುಖಂಡರಾದ ಶ್ರೀನಿವಾಸ ಪ್ರಸಾದ್, ರವೀಶ್ ಜಹಂಗೀರ್, ವಕ್ತಾರ ಜೆ.ಜಗದೀಶ್ ಸೇರಿದಂತೆ ನಗರ ಪಾಲಿಕೆ ಮಾಜಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
Comments are closed.