ತುಮಕೂರು: ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿದ ನಿವೃತ್ತ ಸಬ್ ಇನ್ಸ್ಪೆಕ್ಟರ್ ಕಾಂತರಾಜು.ಬಿ.ಸಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಕೆಲಸ ಬಹಳ ಸಂಕೀರ್ಣವಾಗುತ್ತಿದೆ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಮಾಡಿ ನೆಮ್ಮದಿಯಿಂದ ನಿವೃತ್ತರಾಗಬೇಕಾದರೆ ನಾವು ಪುಣ್ಯ ಮಾಡಿರಬೇಕು ಎಂದರು.
ಪೊಲೀಸ್ ಕೆಲಸ ಪವಿತ್ರವಾದ ವೃತ್ತಿ, ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ, ಹಾಗಾಗಿ ಖಾಕಿ ಸಮವಸ್ತ್ರ ಧರಿಸುವ ನಾವೆಲ್ಲರೂ ನ್ಯಾಯ, ಧರ್ಮದ ಪರ ನಿಂತು ಕೆಲಸ ಮಾಡಬೇಕು, ಆಗ ಮಾತ್ರ ಕಾನೂನಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ನಾನು 1988 ಮಾರ್ಚ್ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ಸೇರಿದೆ, ಅಂದಿನಿಂದ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ನ್ಯಾಯಾಲಯ ಕರ್ತವ್ಯ, ಅಪರಾಧ ಕರ್ತವ್ಯ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಸೇವೆ ಮಾಡಿದ್ದೇನೆ, ಜಿಲ್ಲೆಯಲ್ಲಿ ನಡೆದ ಕಡ್ಲೆಕಾಯಿ ಭೀಕರ ಗಲಾಟೆಯಲ್ಲೂ ಸೇವೆ ಸಲ್ಲಿಸಿದ್ದೇನೆ ಎಂದು ಅವರು ತಮ್ಮ ಕರ್ತವ್ಯದ ಸಮಯ ಮೆಲುಕು ಹಾಕಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, 1965 ರ ಏ. 2 ರಂದು ಪೊಲೀಸ್ ಧ್ವಜ ದಿನಾಚರಣೆ ಜಾರಿಗೆ ಬಂತು, ಪೊಲೀಸ್ ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ ಎಂದರು.
ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ನಿಧಿ ಸಂಗ್ರಹ ಮಾಡಲಾಗುತ್ತದೆ, ಈ ನಿಧಿ ಸಂಗ್ರಹ ಮಾಡಿದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ನೀಡಲಾಗುವುದು ಎಂದರು.
2022- 23ನೇ ಸಾಲಿನಲ್ಲಿ ಧ್ವಜ ದಿನಾಚರಣೆ ಅಂಗವಾಗಿ ಧ್ವಜಗಳನ್ನು ಮಾರಾಟ ಮಾಡಿದ ಬಾಬ್ತು 27,38,330 ರೂ. ಸಂಗ್ರಹವಾಗಿದ್ದು, ಈ ಪೈಕಿ ಶೇ.50 ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಗೆ ಹಾಗೂ ಉಳಿದ ಶೇ.50 ರಷ್ಟು ಮೊತ್ತವನ್ನು ಈ ಘಟಕದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ 31 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮರಣ ಹೊಂದಿದ ಪೊಲೀಸ್ ಅಧಿಕಾರಿಗಳು ಮ್ತತು ಸಿಬ್ಬಂದಿ ಕುಟುಂಬದವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Comments are closed.