ಕುಣಿಗಲ್: ಕ್ಷೇತ್ರದ ಜನರು ಒಂದು ಕುಟುಂಬದ ಅಪ್ಪ, ಮಗ, ಸೊಸೆಗೆ ಮತ ನೀಡಿದ್ದು ಇದೀಗ ಅಳಿಯನಿಗೂ ಮತ ನೀಡಬೇಕೆಂದು ಅವರು ಕೇಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆ ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ ಟೀಕೆ ವ್ಯಕ್ತಪಡಿಸಿ ಕ್ಷೇತ್ರಕ್ಕೆ ಅಭಿವೃದ್ಧಿ ಕೊಡುಗೆ ನೀಡದ ಇವರ ಕುಟುಂಬದ ಬಗ್ಗೆ ಎಚ್ಚರದಿಂದ ಇರಬೇಕೆಂದರು.
ಬುಧವಾರ ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಳೆದ ಹತ್ತುವರ್ಷದಲ್ಲಿ ನಮ್ಮ ರಾಜ್ಯದಿಂದ 24 ಲಕ್ಷ ಕೋಟಿ ತೆರಿಗೆ ಪಾವತಿ ಮಾಡಿದ್ದು ಕೇಂದ್ರ ಸರ್ಕಾರ 2.40 ಲಕ್ಷ ಕೋಟಿ ಮಾತ್ರ ನೀಡಿದೆ, ಬಾಕಿ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಿದೆ, ಇದನ್ನು ಪ್ರಶ್ನಿಸಿದ ನನ್ನನ್ನು ಸೋಲಿಸಬೇಕೆಂದು ಬಿಜೆಪಿ- ಜೆಡಿಎಸ್ ಇಬ್ಬರೂ ಒಂದಾಗಿ ಮಾತನಾಡುತ್ತಿದ್ದಾರೆ, ಎರಡೂ ಪಕ್ಷದವರಿಗೂ ಈ ಕ್ಷೇತ್ರದಿಂದ ಜನ ಮತ ನೀಡಿ ಆಯ್ಕೆ ಮಾಡಿದ್ದು ಎರಡೂ ಪಕ್ಷದವರು ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಲಿ, ಕೇವಲ ಒಂದು ಕುಟುಂಬದವರು ತಮ್ಮ ಸಂಬಂಧಿಯನ್ನು ಬೆಳೆಸಲು ನನ್ನನ್ನು ಸೋಲಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ ಎಂದರು.
2024ರಲೋಕಸಭೆ ಚುನಾವಣೆ ಪ್ರಜಾ ಪ್ರಭುತ್ವ ಸಂರಕ್ಷಿಸಿ, ಸಂವಿಧಾನ ಉಳಿಸುವ ಚುನಾವಣೆಗಳಾಗಿದ್ದು, ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ರಕ್ಷಿಸಿ,ಸಂವಿಧಾನ ಉಳಿಸಬೇಕು, ಪ್ರಜಾ ಪ್ರಭುತ್ವ ಗಟ್ಟಿಗೊಳಿಸಿ, ಸಂವಿಧಾನ ಉಳಿಸಿ, ಜಾತ್ಯಾತೀತ ಮನೋಭಾವ ವೃದ್ಧಿಸುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟ ಬೆಂಬಲಿಸಿ ಸಂವಿಧಾನ ಬದಲಾಯಿಸಿ, ಪ್ರಜಾ ಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿರುವ ಆಡಳಿತರೂಡ ಎನ್ ಡಿ ಎ ಸರ್ಕಾರಕ್ಕೆ ಪಾಠ ಕಲಿಸಬೇಕು, ರಾಜ್ಯದ ಜನರ ಮತ ಕೇಳುವ ಬಿಜೆಪಿ ಪಕ್ಷವೂ ರಾಜ್ಯದಲ್ಲಿನ ನೀರಾವರಿ ಯೋಜನೆಗಳಿಗೆ ಬೇರೆ ರಾಜ್ಯದವರು ತಕಾರರು ತೆಗೆದಾಗ ಅವರೊಂದಿಗೆ ಮಾತನಾಡಿ ರಾಜ್ಯದ ನೀರಾವರಿ ಯೋಜನೆ ಅಭಿವೃದ್ಧಿಗೆ ಶ್ರಮಿಸಲ್ಲ, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಾರೆ, ಇವರು ನಿಮ್ಮ ಮನೆ ಬಾಗಿಲಿಗೆ ಬಂದಾಗ ರಾಜ್ಯಕ್ಕೆ ಮಾಡುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಬೇಕು, ಜೆಡಿಎಸ್ ಮುಖಂಡರು ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡದೆ ಇದೀಗ ಜನರ ಮುಂದೆ ಮತಯಾಚನೆಗೆ ಕಣ್ಣೀರು ಹಾಕುತ್ತಾರೆ, ಇವರ ಕಣ್ಣೀರಿನಿಂದ ತಾಲೂಕಿಗೆ ಹೇಮೆ ನೀರು ಬರುವುದಿಲ್ಲ, ತಾಲೂಕಿಗೆ ಬರಬೇಕಾದ ಮೂರು ಟಿಎಂಸಿ ಹೇಮೆ ನೀರು ಪಡೆಯಲು ಬಿಜೆಪಿ, ಜೆಡಿಎಸ್ ಪಕ್ಷದವರ ಕೊಡುಗೆ ಇಲ್ಲ, ವೈಕೆ ರಾಮಯ್ಯನವರು ಕಂಡ ಕನಸು ನನಸು ಮಾಡಲು ಹೇಮಾವತಿ ನೀರು ಹರಿಸಲು ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿದೆ, ಇಡೀ ರಾಜ್ಯದಲ್ಲೆ ಮೊದಲ ಬಾರಿಗೆ ಎಚ್ವಿಡಿಎಸ್ ಯೋಜನೆ ಮೂಲಕ ರೈತರಿಗೆ ಪರಿವರ್ತಕ ಅಳವಡಿಸುವ ಯೋಜನೆಗೆ ಚಾಲನೆ ನೀಡಿ ನಮ್ಮ ಕ್ಷೇತ್ರ ಒಂದರಲ್ಲೆ 1.10 ಲಕ್ಷ ರೈತರಿಗೆ ಯೋಜನೆ ನೀಡಿ ಎರಡು ಲಕ್ಷ ರೈತ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಲಾಗಿದೆ, ಬಾಕಿ ಇರುವ ರೈತರಿಗೆ 20 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ಕುಣಿಗಲ್ ಕ್ಷೇತ್ರದಲ್ಲಿ 50 ಮೆಗಾ ವ್ಯಾಟ್ ಸೋಲಾರ್ ಉತ್ಪಾದನೆ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, 80 ಕೋಟಿ ರೂ. ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆಗೆ ಚಾಲನೆ ನೀಡಲಾಗಿದೆ, ಹತ್ತು ಕೋಟಿ ರೂ. ವೆಚ್ಚದಲ್ಲಿ ಮಾಡಲ್ ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ, ತಾಲೂಕನ್ನು ಪ್ರತಿನಿಧಿಸಿದ್ದ ಯಾವುದೇ ಸಂಸದರು ಮಾಡದ ಕೆಲಸವನ್ನು ಮಾಡಿದ್ದೇನೆ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಮಾಡಿದ ಕಾರ್ಯ ಇನ್ನಾವುದೆ ಸಂಸದರು ಮಾಡಿಲ್ಲ, ಅವರ ಋಣ ತೀರಿಸುವ ಸಮಯ ಬಂದಿದ್ದು ಈ ಬಾರಿ ತಾಲೂಕಿನಲ್ಲಿ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು, ತೆರಿಗೆ ಬಗ್ಗೆ ಸಂಸದರು ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡು ಸಂಸದ ಸುರೇಶ್ ಸೋಲಿಸಲು ಮುಂದಾಗಿದ್ದಾರೆ, ಇವರ ಅಪವಿತ್ರ ಮೈತ್ರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಬೇಕೆಂದರು.
ಜೆಡಿಎಸ್- ಬಿಜೆಪಿ ಪಕ್ಷ ತೊರೆದ ಕೆಲಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು, ಮುಖಂಡರಾದ ಬೇಗೂರು ನಾರಾಯಣ, ಕೋಘಟ್ಟ ರಾಜಣ್ಣ, ಅನಸೂಯಮ್ಮ, ಗಾಯಿತ್ರಿರಾಜು, ರಾಮಣ್ಣ, ಕುಮಾರ್, ಗಂಗಶಾನಯ್ಯ, ವಿಶ್ವನಾಥ, ಶಂಕರ್, ಲೋಹಿತ್, ಸುಮತಿ, ಭಯ್ಯ, ಸಮೀವುಲ್ಲಾ, ಹಮೀದ್, ಯೂಸೂಫ್ ಸಮೀ ಇತರರು ಇದ್ದರು.
Comments are closed.