ಮಂಡ್ಯ: ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ, ಈ ಮಂಡ್ಯದ ಋಣ ಮತ್ತು ಈ ಮಂಡ್ಯದ ಜನರನ್ನು ನಾನು ಎಂದೆಂದಿಗೂ ಬಿಡುವುದಿಲ್ಲ ಎಂದು ನಿಮ್ಮ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಸಂಸದೆ ಸುಮಲತಾ ಪುನರುಚ್ಛರಿಸಿದ್ದಾರೆ.
ಮಂಡ್ಯದಲ್ಲಿ ಬೆಂಬಲಿಗರ ಬಹಿರಂಗ ಸಮಾವೇಶದಲ್ಲಿ ಭಾವಪರವಶರಾಗಿ ಮಾತನಾಡಿದ ಅವರು, ಮಂಡ್ಯದ ಜಿಲ್ಲೆಯ ಜನ ನನಗೆ ತಾಯಿ ಸ್ಥಾನ ನೀಡಿದ್ದೀರಿ, ಈ ತಾಯಿಯನ್ನು ಮಕ್ಕಳಿಂದ ದೂರ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಈ ಬಾರಿ ಸ್ಪರ್ಧಿಸುವುದಿಲ್ಲ: ಹಠಕ್ಕೆ ಬಿದ್ದು ನಾನು ಈ ಬಾರಿ ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನನ್ನ ಬೆಂಬಲ ನೀಡುತ್ತೇನೆ, ಕಾಂಗ್ರೆಸ್ ಪಕ್ಷ ಸೇರುವುದಿಲ್ಲ, ಆದರೆ ರಾಜಕೀಯ ಬಿಟ್ಟು ಹೋಗಲ್ಲ, ಇವತ್ತಿನ ದಿನ ಮೋದಿ ಅವರು ದೇಶದ ಬಗ್ಗೆ ಹೊಂದಿರುವ ಕನಸಿಗೆ ನಾವು ಬೆಂಬಲವಾಗಿ ನಿಲ್ಲಬೇಕು, ನನ್ನ ಎಂಪಿ ಸ್ಥಾನ ಬಿಟ್ಟು ಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೀನಿ ಎಂದು ಘೋಷಿಸಿದರು.
ನಾನು ಗೌರವ ಇರದ ಕಡೆ ಹೋಗಲ್ಲ, ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ನೀವೆಲ್ಲಾ ನೋಡಿರುತ್ತೀರಿ, ಗೌರವ ಇಲ್ಲದ ಕಡೆ ನಾನ್ಯಾಕೆ ಹೋಗಲಿ ಎಂದು ತಿರುಗೇಟು ಕೊಟ್ಟ ಸುಮಲತಾ ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೇಳಿಬರುತ್ತಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 6ರಂದು ಬಿಜೆಪಿ ಸೇರ್ಪಡೆ: ಈ ದೇಶದ ಭವಿಷ್ಯದ ಚುಕ್ಕಾಣಿ ಹಿಡಿಯುವಲ್ಲಿ ಪ್ರಧಾನಿ ಮೋದಿ ಸಮರ್ಥರು ಎಂದು ನಾನು ಅಂದುಕೊಳ್ಳುತ್ತಿದ್ದೇನೆ, ಮೋದಿಯವರು ಇಡೀ ವಿಶ್ವವೇ ಮೆಚ್ಚಿಕೊಂಡ ನಾಯಕ, ಅವರಲ್ಲಿ ಸ್ವಾರ್ಥ ರಾಜಕೀಯವಲ್ಲ, ಸ್ವತಂತ್ರ ಸಂಸದೆಯಾಗಿದ್ದ ನನಗೆ ಮಂಡ್ಯ ಜಿಲ್ಲೆಯ ಕೆಲಸ ಮಾಡಲು ಅನುದಾನ ಬಿಡುಗಡೆ ಮಾಡಲು ಬಿಜೆಪಿ ಸರ್ಕಾರ ಸಹಾಯ ಮಾಡಿದೆ, ಆದ್ದರಿಂದ ಬಿಜೆಪಿಗೆ ಸೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಏಪ್ರಿಲ್ 6ರಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಘೋಷಿಸಿದರು.
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದೆ, ಐದು ವರ್ಷಗಳ ಹಿಂದೆ ನನಗೆ ಐತಿಹಾಸಿಕ ಗೆಲುವು ನೀಡಿದ್ರಿ, ನನಗೆ ಐತಿಹಾಸಿಕ ಗೆಲುವು ಕೊಡುಗೆಯಾಗಿ ಕೊಟ್ಟಿದ್ದೀರಿ, ಐದು ವರ್ಷಗಳಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ವಂದನೆಗಳು, ಜನ ಸಾಮಾನ್ಯರ ಸಮಸ್ಯೆಗಳ ಪರ ನಾನು ನಿಂತಿದ್ದೇನೆ, ಜಿಲ್ಲೆ ಅಭಿವೃದ್ಧಿ ಮಾಡುವುದಷ್ಟೇ ನನ್ನ ಮನಸ್ಸಿನಲ್ಲಿದ್ದಿದ್ದು, ಕೆ ಆರ್ ಎಸ್ ಡ್ಯಾಂ ಸಂರಕ್ಷಣೆ, ಅಕ್ರಮ ಗಣಿಗಾರಿಕೆ ವಿರುದ್ಧ ಯುದ್ಧವನ್ನೇ ಮಾಡಿದ್ದೇನೆ, ಮೈಷುಗರ್ ಕಾರ್ಖಾನೆಗಾಗಿ ಎರಡು ವರ್ಷ ಹೋರಾಡಿದ್ದೇನೆ ಎಂದು ತಿಳಿಸಿದರು.
2019ರಲ್ಲಿ ಅದೊಂದು ಬೇರೆ ತರಹದ ಸವಾಲಾಗಿತ್ತು, ಈಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು ಎದುರಿಸುತ್ತಿದ್ದೇನೆ, ಕೊನೆಗಳಿಗೆವರೆಗೂ ಬಿಜೆಪಿ ಟಿಕೆಟ್ ಉಳಿಸಿಕೊಳ್ಳಲು ಹೋರಾಟ ಮಾಡಿದೆ, ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲುವಂತೆ ಹೇಳಿದರು, ನನಗೆ ಬೇರೆ ಬೇರೆ ಕ್ಷೇತ್ರದ ಆಫರ್ ನೀಡಿದರು, ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ, ಗೆದ್ದರು, ಸೋತರು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದರು.
ಸಂಸದೆ ಸ್ಥಾನ ಶಾಶ್ವತವಲ್ಲ, ಇಂದು ನಾನು, ನಾಳೆ ಮತ್ತೊಬ್ಬರು ಸಂಸದರಾಗಿ ಬರುತ್ತಾರೆ, ಆದರೆ ನಾನು ಮಂಡ್ಯದ ಸೊಸೆಯಾಗಿ ಕೊನೆಯವರೆಗೂ ಉಳಿಯುತ್ತೇನೆ, ಬದಲಾದ ಪರಿಸ್ಥಿತಿ, ಸನ್ನಿವೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು, ಹಠ ಸಾಧನೆ ಮಾಡುವ ಉದ್ದೇಶ ಇದ್ದರೆ ಪಕ್ಷೇತರ ಸ್ಪರ್ಧೆ ಮಾಡಬಹುದು, ಅದರಿಂದ ಯಾರಿಗೆ ಲಾಭ? ನನ್ನ ಸ್ವಾರ್ಥ ಏನು ಇಲ್ಲ, ಲಾಭಕ್ಕಾಗಿ ಯೋಚಿಸಿದ್ದರೆ ಬೇರೆ ಕ್ಷೇತ್ರ ಆಯ್ಕೆ ಮಾಡಬಹುದಿತ್ತು, ಬಂದ ಅವಕಾಶಗಳನ್ನು ಮಂಡ್ಯಕ್ಕಾಗಿ ಬಿಟ್ಟಿದ್ದೇನೆ, ರಾಜಕೀಯ ಮಾಡಿದರೆ ಮಂಡ್ಯದಲ್ಲಿ ಮಾತ್ರ ಅಂತ ನಿರ್ಧಾರ ಮಾಡಿದ್ದೇನೆ, ಅಸಂಖ್ಯಾತ ಅಂಬರೀಶ್ ಅಭಿಮಾನಿಗಳನ್ನು ಬಿಟ್ಟು ಹೋದರೆ ಮಂಡ್ಯ ಸೊಸೆ ಅನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
Comments are closed.