ಕೊರಟಗೆರೆ: ನಿನಗೆ ಎಷ್ಟು ಧೈರ್ಯ ನನ್ನ ಮೇಲೆ ಕೇಸ್ ಮಾಡ್ತೀಯಾ? ನನ್ನ ವಿಚಾರಕ್ಕೆ ಬಂದರೆ ನಡು ರಸ್ತೆಯಲ್ಲಿ ನಿನ್ನ ಬಟ್ಟೆ ಬಿಚ್ಚುಸ್ತೀನಿ, ನನ್ನ ಎದುರು ಹಾಕಿಕೊಂಡು ಹೇಗೆ ಓಡಾಡ್ತೀಯ ನಾನು ನೋಡ್ತೀನಿ, ನಿನ್ನನ್ನ ಮಾತ್ರ ಸುಮ್ನೆ ಬಿಡುವುದಿಲ್ಲ ಎಂದು ಕೋಳಾಲ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ರೇಣುಕಾ ಯಾದವ್ ಅವರಿಗೆ ಅವಾಜ್ ಹಾಕಿದ ಆರೋಪಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯ ಪಿಎಸ್ಐಗೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕರೆ ಮಾಡಿ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನೆಲಮಂಗಲ ಮೂಲದ ಗುರುಸಿದ್ದಪ್ಪನನ್ನು ಕೂಡಲೇ ಪೊಲೀಸರ ತಂಡ ಬಂಧಿಸಿ ಜೈಲಿಗೆ ಕಳುಹಿಸಿದೆ.
ಕೋಳಾಲ ಹೋಬಳಿಯ ಜಿಲ್ಲೆನಹಳ್ಳಿ ರೈತ ಪ್ರಕಾಶ್ ಮತ್ತು ನೆಲಮಂಗಲ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಗುರುಸಿದ್ದಪ್ಪ ಹಾಗೂ ಶಂಕರಾರಾಧ್ಯ ನಡುವೆ ಜಮೀನಿನ ಕಾಂಪೌಂಡ್ ಕಲ್ಲಿನ ವಿಚಾರಕ್ಕೆ ಜಗಳವಾಗಿ ನ್ಯಾಯಾಲಯ ಆದೇಶದಂತೆ ಮಾ.29 ರಂದು ಗುರುಸಿದ್ದಪ್ಪ ಹಾಗೂ ಶಂಕರ ಆರಾಧ್ಯ ಈ ಇಬ್ಬರ ಮೇಲೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನಿನ ಪ್ರಕರಣದ ವಿಚಾರಕ್ಕೆ ಫೋನ್ ನಲ್ಲಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗುರುಸಿದ್ದಪ್ಪನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕೋಳಾಲ ಪೊಲೀಸ್ ಠಾಣಾ ಪಿಎಸ್ ಐ ರೇಣುಕಾ ಯಾದವ್ ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಏ.1ರಂದು ದೂರು ನೀಡಿದ್ದಾರೆ, ದೂರಿನ ಅನ್ವಯ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.